ಬೆಂಗಳೂರು, 31 ಆಗಸ್ಟ್ (ಹಿ.ಸ.) :
ಆ್ಯಂಕರ್ : ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಕೈಗೊಂಡಿರುವ ಧರ್ಮಸ್ಥಳ ಚಲೋ ಯಾತ್ರೆ ಕುರಿತು ತೀವ್ರ ಟೀಕೆ ಮಾಡಿದ್ದಾರೆ.
ಬೆಂಗಳೂರು ನಗರದಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ನಿಜವಾದ ರಾಜಕೀಯ ಇಚ್ಛಾಶಕ್ತಿ ಇದ್ದರೆ ಭದ್ರಾ ಮೇಲ್ದಂಡೆ, ಬೆಂಗಳೂರು ಅಭಿವೃದ್ಧಿ, ಮೇಕೆದಾಟು ಮತ್ತು ಮಹದಾಯಿ ಯೋಜನೆಗಳಿಗೆ ಅನುಮತಿ ಹಾಗೂ ಅನುದಾನ ಕೊಡಿಸಲಿ. ಧರ್ಮಸ್ಥಳಕ್ಕೆ ಹೋಗುವುದರಿಂದ ರಾಜ್ಯಕ್ಕೆ ಯಾವುದೇ ಲಾಭ ಇಲ್ಲ ಎಂದು ವ್ಯಂಗ್ಯವಾಡಿದರು.
ಬಿಜೆಪಿಯವರು ಧರ್ಮಸ್ಥಳಕ್ಕೆ ಹೋಗುವುದು ತಮ್ಮ ವೈಯಕ್ತಿಕ ಲಾಭಕ್ಕಾಗಿ ಪ್ರಾರ್ಥನೆ ಮಾಡಿಕೊಂಡು ಬರುವ ಮಟ್ಟಿಗೆ ಮಾತ್ರ. ನಿಜವಾದ ಹೋರಾಟ ಬೇಕೆಂದರೆ ಎಲ್ಲ ಸಂಸದರು, ಶಾಸಕರನ್ನು ಕರೆದುಕೊಂಡು ದೆಹಲಿಯಲ್ಲಿ ಹೋರಾಟ ಮಾಡಲಿ, ರಾಜ್ಯಕ್ಕೆ ಹಣ ತರಲಿ ಎಂದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ ಶಿವಕುಮಾರಗೆ ಶಾಸಕರ ಬೆಂಬಲವಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಕಸ, ಸಗಣಿ ಮೇಲೆ ಕಲ್ಲು ಹಾಕುವುದಕ್ಕೆ ನನಗೆ ಆಸಕ್ತಿ ಇಲ್ಲ ಎಂದು ತಿರುಗೇಟು ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa