ಗದಗ, 17 ಆಗಸ್ಟ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಜನ ಜೀವನ ಹೈರಾಣಾಗಿರುವಾಗಲೇ, ಜನರ ಸಮಸ್ಯೆಗಳನ್ನು ಬಗೆಹರಿಸಬೇಕಾದ ಗದಗ ಜಿಲ್ಲೆಯ ಶಕ್ತಿ ಸೌಧವೇ ಸೋರುತ್ತಿರುವುದು ದೊಡ್ಡ ವಿಪರ್ಯಾಸವಾಗಿದೆ.
ಜಿಲ್ಲಾಡಳಿತ ಭವನದ ಶಿಕ್ಷಣ ಇಲಾಖೆ, ಸಣ್ಣ ನೀರಾವರಿ ಕಚೇರಿ ಸೇರಿದಂತೆ ಹಲವು ಕಚೇರಿಗಳ ಒಳಗಡೆ ಮಳೆ ನೀರು ಜಿನುಗುತ್ತಿದೆ. ದಾಖಲೆಗಳಿಗೆ ಹಾನಿ ಆಗದಂತೆ ಪ್ಲಾಸ್ಟಿಕ್ ಹೊದಿಕೆ ಹಾಕಿ, ಬಕೆಟ್ ಇಟ್ಟು ಅಮೂಲ್ಯ ಕಡತಗಳನ್ನು ರಕ್ಷಣೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಕಚೇರಿಯೊಳಗೆ ನೀರು ತುಂಬುತ್ತಿರುವುದರಿಂದ ಸಿಬ್ಬಂದಿಗೆ ಕೆಲಸ ಮಾಡಲು ತೊಂದರೆಯಾಗಿದ್ದು, ಸಿಸಿಟಿವಿ ಕ್ಯಾಮರಾ, ವಿದ್ಯುತ್ ವೈರ್‌ಗಳಲ್ಲಿ ನೀರು ಹರಿದು ಶಾರ್ಟ್ ಸರ್ಕ್ಯೂಟ್ ಆಗುವ ಆತಂಕವೂ ಉಂಟಾಗಿದೆ.
2008ರ ಆಗಸ್ಟ್ 4ರಂದು ಕರ್ನಾಟಕ ಗೃಹ ಮಂಡಳಿಯಿಂದ ನಿರ್ಮಿಸಲಾದ ಈ ಬೃಹತ್ ಕಟ್ಟಡ ಕೇವಲ 17 ವರ್ಷಗಳಲ್ಲಿ ಇಂತಹ ಸ್ಥಿತಿಗೆ ಬಂದುಬಿಟ್ಟಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ಗಂಭೀರ ಅನುಮಾನ ಮೂಡಿಸಿದೆ. ಜಿಲ್ಲಾಡಳಿತ ಭವನದಲ್ಲೇ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಆರೋಗ್ಯ ಹಾಗೂ ಸಮಾಜ ಕಲ್ಯಾಣ ಸೇರಿದಂತೆ ಅನೇಕ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು, ಜನರ ಪ್ರತಿದಿನದ ಸಮಸ್ಯೆಗಳಿಗೆ ಪರಿಹಾರ ನೀಡುವ ಕೇಂದ್ರವೇ ಇಂತಹ ದುಸ್ಥಿತಿಯಲ್ಲಿ ಸಿಲುಕಿದೆ.
ಇನ್ನೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಅವರು ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರೂ, ದುರಸ್ತಿಯ ಕಾರ್ಯ ನಡೆದಿಲ್ಲವೆಂದು ಆರೋಪಿಸಿದ್ದಾರೆ. ಮತ್ತೊಮ್ಮೆ ಮನವಿ ಮಾಡುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜನರು ಗ್ಯಾರಂಟಿ ಸರ್ಕಾರ ಎಂದು ಹೇಳಿಕೊಂಡಿರುವ ಸರ್ಕಾರವೇ ಆರ್ಥಿಕವಾಗಿ ದಿವಾಳಿಯಾಗಿದೆ. ಶಕ್ತಿ ಸೌಧದಂತಹ ಪ್ರಮುಖ ಕಟ್ಟಡಕ್ಕೂ ದುರಸ್ತಿ ಮಾಡಿಸಲು ಸಾಧ್ಯವಾಗದಿದ್ದರೆ, ಜನರ ಸಮಸ್ಯೆಗಳಿಗೆ ಸ್ಪಂದನೆ ಹೇಗೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ಜಿಲ್ಲಾಧಿಕಾರಿಗಳು ತಕ್ಷಣ ಎಚ್ಚತ್ತುಕೊಂಡು ಕಟ್ಟಡದ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂಬುದು ಜಿಲ್ಲೆಯ ಜನರ ಬೇಡಿಕೆ.
ಹಿಂದೂಸ್ತಾನ್ ಸಮಾಚಾರ್ / lalita MP