ಕೋಲಾರ, ೧೬ ಆಗಸ್ಟ್ (ಹಿ.ಸ.) :
ಆ್ಯಂಕರ್ : ಕೊಟ್ಟ ಮಾತನ್ನು ಈಡೇರಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ. ಚುನಾವಣೆಗೆ ಮುಂಚೆಯೇ ಸುಸಜ್ಜಿತ ನೂತನ ಯಾದವ ಸಮುದಾಯ ಭವನವನ್ನು ನಿರ್ಮಿಸಿ ಕೊಡುವ ಭರವಸೆ ನೀಡಿದ್ದೆ, ಅದೇ ರೀತಿ ಇಂದು ಸುಮಾರು ೩ ಕೋಟಿ ವೆಚ್ಚದ ನೂತನ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿರುವೆ ಎಂದು ಶಾಸಕ ಸಮೃದ್ಧಿ ಮಂಜುನಾಥ್ ತಿಳಿಸಿದರು.
ಮುಳಬಾಗಿಲು ನಗರದ ನೇತಾಜಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ನಂದಗೋಕುಲ ಯಾದವ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಗೋಕಲಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಗರದಲ್ಲಿನ ಗೋಕುಲ್ ನಗರದಲ್ಲಿ ನೂತನ ಸಮುದಾಯ ಭವನ ನಿರ್ಮಿಸಲು ಶಾಸಕರ ನದಿಯಿಂದ ೫೦ ಲಕ್ಷ ಹಾಗೂ ಸಂಸದರ ಪ್ರಾದೇಶಿಕ ನಿಧಿಯಿಂದ ೨೫ ಲಕ್ಷ ಹಣವನ್ನು ಸದ್ಯಕ್ಕೆ ಮೀಸಲಿಡಲಾಗಿದೆ, ಕಾಮಗಾರಿ ಆರಂಭಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದ್ದು ಇನ್ನೂ ಉಳಿದ ಹಣವನ್ನು ಹಂತ ಹಂತವಾಗಿ ನೀಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ತಾಲೂಕಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ಸಮುದಾಯಗಳಲ್ಲಿ ಗೊಲ್ಲ ಸಮುದಾಯ ೪ನೇ ಸ್ಥಾನದಲ್ಲಿದೆ, ಸಮಾಜದಲ್ಲಿ ಅಸಮಾನತೆ, ಅಸ್ಪೃಶ್ಯತೆ ತೊಲಗಬೇಕಾದರೆ ಶಿಕ್ಷಣ ಬಹಳ ಮುಖ್ಯ ಹಾಗಾಗಿ ಗೊಲ್ಲ ಸಮುದಾಯದವರು ತಮ್ಮ ಮಕ್ಕಳಿಗೆ ಉನ್ನತ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸಬೇಕೆಂದು ಕರೆ ನೀಡಿದರು.
ತಹಸೀಲ್ದಾರ್ ವಿ.ಗೀತಾ ಮಾತನಾಡಿ, ಶ್ರೀ ಕೃಷ್ಣ ದೇವರು ಪ್ರಪಂಚಕ್ಕೆ ಬೆಳಕು ನೀಡಿದ ವ್ಯಕ್ತಿ, ಇಡಿ ಮಹಾಭಾರತಕ್ಕೆ ಹಾಗೂ ಭಗವದ್ಗೀತೆಗೆ ಪಿತಾಮಹ, ಶ್ರೀ ಕೃಷ್ಣನ ತಂದೆ ವಸುದೇವ ಮತ್ತು ತಾಯಿ ದೇವಕಿಯ ಎಂಟನೇ ಮಗುವಾಗಿ ಜನಿಸಿ ತನ್ನ ಗೀತೆಯ ಮೂಲಕ ಮನುಷ್ಯನ ಜೀವನದ ಸಾರಾಂಶ ನೀಡಿದರು. ಇಂತಹ ಸಮುದಾಯದಲ್ಲಿ ಹುಟ್ಟಿರುವ ನೀವು ಕೃಷ್ಣನ ಗೀತೆಯನ್ನು ಅಧ್ಯಯನ ಮಾಡಿ ಎಂದರು.
ತಾಲೂಕಿನ ೩೦ ಗ್ರಾಮ ಪಂಚಾಯಿತಿಗಳಿಂದ ಪಲ್ಲಕ್ಕಿಗಳು ಆಗಮಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಲಾಗಿತ್ತು. ಕಾರ್ಯಕ್ರಮದಲ್ಲಿ ಇಓ ಡಾ.ಕೆ ಸರ್ವೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ನಲ್ಲೂರು ರಘುಪತಿರೆಡ್ಡಿ, ಯಾದವ ಸಂಘದ ತಾಲೂಕು ಅಧ್ಯಕ್ಷ ನಾಗಮಂಗಲ ಶಂಕರಪ್ಪ, ಸೊನ್ನವಾಡಿ ರಘುಪತಿ, ಕಂಬಂದಿನ್ನೆ ನರಸಿಂಹರೆಡ್ಡಿ, ಕೃಷ್ಣಾರೆಡ್ಡಿ, ಬಲ್ಲ ಹರೀಶ್, ತಾತಿಘಟ್ಟ ರವಿ, ಗ್ಯಾಸ್ ರಘು, ಗ್ರಾ.ಪಂ ಮಾಜಿ ಅಧ್ಯಕ್ಷ ಜಮ್ಮನಹಳ್ಳಿ ಶ್ರೀನಿವಾಸ್, ಗಣೇಶ್ ಯಾದವ್, ವಿ.ಗುಟ್ಟಹಳ್ಳಿ ಅಶೋಕ್, ರಚ್ಚಬಂಡಹಳ್ಳಿ ಶ್ರೀರಾಮಪ್ಪ ಸೇರಿದಂತೆ ಸಮುದಾಯದವರು ಇದ್ದರು.
ಚಿತ್ರ : ಮುಳಬಾಗಿಲು ನಗರದ ನೇತಾಜಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ನಂದಗೋಕುಲ ಯಾದವ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಗೋಕಲಾಷ್ಟಮಿ ಕಾರ್ಯಕ್ರಮವನ್ನು ಶಾಸಕ ಸಮೃದ್ಧಿ ಮಂಜುನಾಥ್ ಉದ್ಘಾಟಿಸಿದರು.
ನಗರಸಭೆ ಅನುದಾನದಿಂದಲೇ ಫುಡ್ ಕೋರ್ಟ್ ನಿರ್ಮಾಣ
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್