ಗದಗ, 16 ಆಗಸ್ಟ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಬಸ್ ನಿಲ್ದಾಣದಲ್ಲಿ ದಿನದಿಂದ ದಿನಕ್ಕೆ ವಿದ್ಯಾರ್ಥಿಗಳ ಅಪಾಯಕಾರಿ ಪ್ರಯಾಣ ಗಂಭೀರ ಚರ್ಚೆಗೆ ಕಾರಣವಾಗಿದೆ. ಸೂರಣಗಿ, ದೊಡ್ಡೂರ, ಕಲ್ಲಾಪೂರ, ಕಂದೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ಪ್ರತಿದಿನ ಲಕ್ಷ್ಮೇಶ್ವರ ಹಾಗೂ ಗದಗ, ಹಾವೇರಿ ಕಡೆಗೆ ಕಾಲೇಜ್‌ಗಳಿಗೆ ಓಡಾಡುತ್ತಿದ್ದಾರೆ. ಆದರೆ ಸರ್ಕಾರಿ ಬಸ್‌ಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳು ಬಸ್ಸಿನ ಮೆಟ್ಟಿಲು, ಕಿಟಕಿಗಳು, ಬಾಗಿಲುಗಳಿಗೆ ಜೋತುಬಿದ್ದು ತೂಗಿ ತೂಗಿ ಪ್ರಯಾಣಿಸುತ್ತಿದ್ದಾರೆ.
ಅತಿ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸುವುದರಿಂದ ಬಸ್ಸಿನಲ್ಲಿ ನುಗ್ಗಿ ನಿಲ್ಲುವಷ್ಟಕ್ಕೂ ಅವಕಾಶವಿಲ್ಲದ ಪರಿಸ್ಥಿತಿ. ಬಸ್ ನಿಲ್ದಾಣದಲ್ಲೇ ವಿದ್ಯಾರ್ಥಿಗಳು ಬಸ್ಸು ಓಡುತ್ತಿದ್ದಂತೆಯೇ ಹತ್ತುವ ದೃಶ್ಯಗಳು ಆತಂಕ ಹುಟ್ಟಿಸುತ್ತಿವೆ. ಕೆಲವೊಮ್ಮೆ ಬಸ್ ಮೇಲೆ ಹತ್ತಿ ಪ್ರಯಾಣಿಸುವಂತಹ ಘಟನೆಗಳೂ ಕಾಣಿಸಿಕೊಂಡಿವೆ. ಇಂತಹ ಅಸುರಕ್ಷಿತ ಪ್ರಯಾಣದಿಂದ ವಿದ್ಯಾರ್ಥಿಗಳ ಜೀವ ಭದ್ರತೆ ಅಪಾಯದಲ್ಲಿದೆ.
“ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಹೆಚ್ಚುವರಿ ಬಸ್‌ಗಳನ್ನು ಬಿಡಿ, ಮಕ್ಕಳ ಜೀವಕ್ಕೆ ಅಪಾಯವಾಗುತ್ತಿದೆ ಎಂದು ಹೇಳಿದ್ದೇವೆ. ಆದರೆ ಅಧಿಕಾರಿಗಳು ಕಿವಿಗೊಡುತ್ತಿಲ್ಲ. ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ” ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, “ಮಕ್ಕಳು ಜೋತುಬಿದ್ದು ಬಸ್‌ಗೆ ಹತ್ತಿಕೊಳ್ಳುತ್ತಿದ್ದರೂ ಚಾಲಕರು ಬಸ್ ನಿಲ್ಲಿಸುವುದಿಲ್ಲ, ಬಸ್ ಚಲಾಯಿಸುತ್ತಾರೆ. ಸ್ವಲ್ಪ ಗಮನ ಕೊಟ್ಟರೆ ಅಪಘಾತ ತಪ್ಪಬಹುದು. ಆದರೆ ಚಾಲಕರ ನಿರ್ಲಕ್ಷ್ಯವೂ ಹೆಚ್ಚಾಗಿದೆ” ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ವೇಳೆಗೆ ಬಸ್ ನಿಲ್ದಾಣ ವಿದ್ಯಾರ್ಥಿಗಳಿಂದ ಕಿಕ್ಕಿರಿದು ಕಾಣಿಸುತ್ತದೆ. ಆದರೆ ಅಗತ್ಯ ಸೌಲಭ್ಯ ಒದಗಿಸದೆ ವಿದ್ಯಾರ್ಥಿಗಳನ್ನು ಹೀಗೆಯೇ ಅಪಾಯಕಾರಿ ಪರಿಸ್ಥಿತಿಯಲ್ಲಿ ಬಿಟ್ಟಿರುವುದನ್ನು ಸ್ಥಳೀಯರು ಗಂಭೀರ ಬೇಜವಾಬ್ದಾರಿತನವೆಂದು ಟೀಕಿಸುತ್ತಿದ್ದಾರೆ.
ಇದೇ ರೀತಿಯಲ್ಲಿ ಮುಂದುವರಿದರೆ ಯಾವುದೇ ಕ್ಷಣ ದುರ್ಘಟನೆ ಸಂಭವಿಸುವ ಭೀತಿ ಉಂಟಾಗಿದೆ. ಆದ್ದರಿಂದ ವಿದ್ಯಾರ್ಥಿಗಳ ಜೀವ ರಕ್ಷಣೆಗೆ ತಕ್ಷಣವೇ ಹೆಚ್ಚುವರಿ ಬಸ್‌ಗಳನ್ನು ಬಿಡುವಂತೆ ಸಾರಿಗೆ ಇಲಾಖೆ ಹಾಗೂ ಜಿಲ್ಲಾಡಳಿತವನ್ನು ಪೋಷಕರು ಒತ್ತಾಯಿಸುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP