ಲಕ್ಷ್ಮೇಶ್ವರದಲ್ಲಿ ಮಳೆಯಿಂದ ಈರುಳ್ಳಿ ಬೆಳೆ ಹಾನಿ, ಪರಿಹಾರಕ್ಕಾಗಿ ರೈತರ ಬೇಡಿಕೆ
ಗದಗ, 16 ಆಗಸ್ಟ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಕಳೆದ ಹಲವು ದಿನಗಳಿಂದ ನಿರಂತರ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಬೆಳೆ ಹಾನಿ ಹೆಚ್ಚುತ್ತಿದೆ. ತೀವ್ರ ಮಳೆಯಿಂದ ಹೊಲ ಜಮೀನುಗಳಲ್ಲಿ ನೀರು ನಿಂತು ಹಲವಾರು ರೈತರ ಶ್ರಮ ವ್ಯರ್ಥವಾಗುತ್ತಿದೆ.
ಪೋಟೋ


ಗದಗ, 16 ಆಗಸ್ಟ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಕಳೆದ ಹಲವು ದಿನಗಳಿಂದ ನಿರಂತರ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಬೆಳೆ ಹಾನಿ ಹೆಚ್ಚುತ್ತಿದೆ. ತೀವ್ರ ಮಳೆಯಿಂದ ಹೊಲ ಜಮೀನುಗಳಲ್ಲಿ ನೀರು ನಿಂತು ಹಲವಾರು ರೈತರ ಶ್ರಮ ವ್ಯರ್ಥವಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಈರುಳ್ಳಿ ಬೆಳೆದಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಲೂಕಿನ ಅಡರಕಟ್ಟಿ ಗ್ರಾಮದ ರೈತ ಶಿವಾನಂದ ಹವಳದ ಅವರು ತಮ್ಮ ಸರ್ವೇ ನಂ.94/6ರಲ್ಲಿ ಸುಮಾರು ಮೂರು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆ ಬೆಳೆಯಲಾಗಿತ್ತು. ಬೆಳೆಯ ಉತ್ತಮ ಉತ್ಪಾದನೆಗಾಗಿ ಸುಮಾರು 70ರಿಂದ 80 ಸಾವಿರ ರೂಪಾಯಿ ವೆಚ್ಚ ಮಾಡಲಾಗಿತ್ತು. ಖಾತರಿಯ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರು ಈಗ ಮಳೆಯಿಂದ ನಿರಾಶರಾಗಿದ್ದಾರೆ.

“ಈರುಳ್ಳಿ ಉತ್ತಮವಾಗಿ ಬೆಳೆದಿತ್ತು, ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ ಕಳೆದ ನಾಲ್ಕು ಐದು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ಜಮೀನಿನಲ್ಲಿ ನೀರು ನಿಂತು ಬೆಳೆಯೆಲ್ಲಾ ಹಾಳಾಗಿದೆ. ಈಗ ಸಾಲ ತೀರಿಸುವುದು ಹೇಗೆ ಎಂಬ ಆತಂಕ ಕಾಡುತ್ತಿದೆ” ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಗ್ರಾಮಸ್ಥರ ಸಹಿತ ರೈತ ಶಿವಾನಂದ ಹವಳದ ಅವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣ ಜಮೀನಿಗೆ ಬೇಟಿ ನೀಡಿ ಮಳೆಯಿಂದ ಹಾನಿಗೊಳಗಾದ ಬೆಳೆಯನ್ನು ಪರಿಶೀಲಿಸಬೇಕು, ಹಾಗೂ ಸರಕಾರದಿಂದ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. “ನಾವು ನಮ್ಮ ಶ್ರಮದ ಜೊತೆಗೆ ಸಾಲದ ಹಣ ಹೂಡಿದ್ದೇವೆ. ಬೆಳೆ ಹಾಳಾದರೆ ನಮ್ಮ ಜೀವನವೇ ಸಂಕಷ್ಟಕ್ಕೆ ಸಿಲುಕುತ್ತದೆ” ಎಂದು ಆತ ಕಳವಳ ವ್ಯಕ್ತಪಡಿಸಿದರು.

ಈರುಳ್ಳಿ ಬೆಳೆಯ ಹಾನಿ ಅಡರಕಟ್ಟಿ ಗ್ರಾಮದಷ್ಟೇ ಸೀಮಿತವಾಗಿಲ್ಲ. ತಾಲೂಕಿನ ಇತರ ಗ್ರಾಮಗಳಲ್ಲಿಯೂ ಇದೇ ರೀತಿಯ ಸಮಸ್ಯೆ ಎದುರಾಗಿದೆ. ಸತತ ಮಳೆಯ ಪರಿಣಾಮವಾಗಿ ಹೊಲಗಳಲ್ಲಿ ನೀರು ನಿಂತು ಬೆಳೆ ಕೊಳೆತಿದೆ. ತಕ್ಷಣ ನೀರು ಹೊರ ಹಾಕುವ ವ್ಯವಸ್ಥೆ ಇಲ್ಲದ ಕಾರಣ ರೈತರು ನಿರಾಶ್ರಿತರಂತಾಗಿದ್ದಾರೆ.

“ಪ್ರತಿ ವರ್ಷ ಮಳೆಯಾದಾಗ ಇದೇ ಸಮಸ್ಯೆ ಎದುರಾಗುತ್ತದೆ. ಆದರೆ ಅಧಿಕಾರಿಗಳು ಸ್ಥಳಕ್ಕೆ ಬಂದು ನೋಡುವುದರ ಹೊರತಾಗಿ ಯಾವುದೇ ಪರಿಹಾರ ಕ್ರಮ ಕೈಗೊಳ್ಳುವುದಿಲ್ಲ. ರೈತರ ಜೀವಮಾನವೇ ಸಾಲದಲ್ಲಿ ಮುಳುಗುತ್ತದೆ” ಎಂದು ಆರೋಪ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಾದ್ಯಂತ ಮಳೆ ಹಾನಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ, ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತ ತಕ್ಷಣವೇ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡಬೇಕು ಎಂಬ ಒತ್ತಾಯ ಮಾಡಲಾಗಿದೆ. ರೈತರ ಅಳಲನ್ನು ತಣಿಸುವುದು ಹಾಗೂ ಸಾಲದ ಭಾರದಿಂದ ಹೊರತರುವುದು ಸರ್ಕಾರದ ಕರ್ತವ್ಯ ಎಂಬ ಅಭಿಪ್ರಾಯ ಜನರಲ್ಲಿ ಮೂಡಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande