ಕೋಲಾರ, ೧೬ ಆಗಸ್ಟ್ (ಹಿ.ಸ.) :
ಆ್ಯಂಕರ್ : ಕೋಲಾರ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಆಟದ ಮೈದಾನ ಪಕ್ಕದ ಮಿನಿ ಕ್ರೀಡಾಂಗಣದಲ್ಲಿ ನಿರ್ಮಾಣವಾಗಿರುವ ಜಿಲ್ಲಾ ಒಳಾಂಗಣ ಕ್ರೀಡಾಂಗಣಕ್ಕೆ ಕರ್ನಾಟಕ ರತ್ನ, ಯೋಗ ಸಾಧಕ ಡಾ.ರಾಜಕುಮಾರ್ ಹೆಸರನ್ನು ನಾಮಕರಣ ಮಾಡುವಂತೆ ಡಾ. ರಾಜಕುಮಾರ್ ನಾಮಕರಣ ಹೋರಾಟ ಸಮಿತಿ ಹಾಗೂ ಕನ್ನಡಪರ ಸಂಘಟನೆಗಳ ಒಕ್ಕೂಟ ದಿಂದ ಶನಿವಾರ ಯುವ ಸಬಲೀಕರಣ ಮತ್ತು ಕ್ರೀಡ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಗೀತಾ ರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ನಾಮಕರಣ ಸಮಿತಿಯ ಸಂಚಾಲಕರು ಮನವಿ ಪತ್ರ ನೀಡಿ ಮಾತನಾಡಿ ಕನ್ನಡ ನಾಡು, ನುಡಿ, ನೆಲ, ಜಲ ಹಾಗೂ ಕನ್ನಡ ಚಿತ್ರರಂಗದ ಅಭಿವೃದ್ಧಿಗಾಗಿ ಹೋರಾಡಿ ಮಡಿದ ಕರ್ನಾಟಕ ರತ್ನ ವರನಟ ಡಾ|| ರಾಜಕುಮಾರ್ ರವರು ನಾಡಿಗೆ ಹಲವು ಕೊಡುಗೆಗಳನ್ನು ನೀಡಿರುವುದಲ್ಲದೆ ಜಿಲ್ಲೆಯ ಜನರು ಸದಾ ನೆನಪಸಿಕೊಳ್ಳುವಂತಹ ಕಾರ್ಯಗಳನ್ನು ಮಾಡಿದ್ದಾರೆ ಎಂದರು.
ಜಿಲ್ಲಾ ಹೊರಾಂಗಣ ಕ್ರೀಡಾಂಗಣದ ಅಭಿವೃದ್ಧಿಗಾಗಿ ಹಾಗೂ ಗಲ್ಪೇಟೆ ಪೊಲೀಸ್ ಠಾಣೆ ಹಿಂಭಾಗದ ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕಾಗಿ ಮೂರು ಬಾರಿ ಡಾ. ರಾಜಕುಮಾರ್ ರವರು ಸಂಗೀತ ರಸಸಂಜೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದು, ಸಹಾಯಾರ್ಥವಾಗಿ ಬಂದ ಲಕ್ಷಾಂತರ ರೂಪಾಯಿ ಹಣದಲ್ಲಿ ನಿಂತು ಹೋಗಿದ್ದ ಕಾಮಗಾರಿಗಳ ಅಭಿವೃದ್ಧಿಯಾಗಿ ಜಿಲ್ಲೆಯ ಜನತೆ ಇದರ ಸದುಪಯೋಗ ಪಡೆಯುವಂತಾಯಿತು. ಕ್ರೀಡಾಂಗಣಕ್ಕೆ ಸಾಧಕರ ಹೆಸರನ್ನು ನಾಮಕರಣ ಮಾಡುವ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳು ಕ್ರೀಡಾಂಗಣಕ್ಕೆ ಡಾ.ರಾಜಕುಮಾರ್ ರವರ ಕೊಡುಗೆ ಇರುವುದರಿಂದ ಅವರ ಹೆಸರನ್ನು ನಾಮಕರಣ ಮಾಡುವಂತೆ ಒತ್ತಾಯಿಸಿದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಹಾಗೂ ಕ್ರೀಡಾ ಇಲಾಖೆಯು ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ನವರ ಹೆಸರನ್ನು ನಾಮಕರಣ ಮಾಡಲು ತೀರ್ಮಾನಿಸಲಾಯಿತು.
ಡಾ.ರಾಜಕುಮಾರ್ ರವರ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಲು ಜೂನಿಯರ್ ಕಾಲೇಜಿನ ಪಕ್ಕದಲ್ಲಿ ನಿರ್ಮಾಣ ಮಾಡಲಿರುವ ಜಿಲ್ಲಾ ಒಳಾಂಗಣ ಕ್ರೀಡಾಂಗಣಕ್ಕೆ ಡಾ. ರಾಜಕುಮಾರ್ ರವರ ಹೆಸರನ್ನು ನಾಮಕರಣ ಮಾಡುವುದಾಗಿ ಭರವಸೆ ನೀಡುವ ಮೂಲಕ ಮನವೊಲಿಸಿದರು.
ಅವರ ಮಾತಿಗೆ ಕಟ್ಟುಬಿದ್ದು ಒಪ್ಪಿಗೆ ಸೂಚಿಸಿದೆವು. ಇದೀಗ ಕ್ರೀಡಾಂಗಣ ನಿರ್ಮಾಣವಾಗಿದ್ದು, ೧೫ ವರ್ಷಗಳಿಂದ ಕನ್ನಡಪರ ಸಂಘಟನೆಗಳು ಕರ್ನಾಟಕ ರತ್ನ ಡಾ.ರಾಜಕುಮಾರ್ ನಾಮಕರಣ ಹೋರಾಟ ಸಮಿತಿ ಮೂಲಕ ಜಿಲ್ಲಾಧಿಕಾರಿಗಳು, ಕ್ರೀಡಾ ಇಲಾಖೆಯ ಅಧಿಕಾರಿಗಳು ಹಾಗೂ ರಾಜ್ಯ ಕ್ರೀಡಾ ಇಲಾಖೆಯ ಆಯುಕ್ತರಿಗೆ ಮನವಿಗಳನ್ನು ನೀಡುತ್ತಾ ಬಂದಿದ್ದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಈಗಲಾದರೂ ಜಿಲ್ಲಾಡಳಿತ ಹಾಗೂ ಕ್ರೀಡಾ ಇಲಾಖೆ ಯು ಒಳಾಂಗಣ ಕ್ರೀಡಾಂಗಣಕ್ಕೆ ಯೋಗ ಸಾಧಕ ಡಾ.ರಾಜಕುಮಾರ್ ರವರ ಹೆಸರನ್ನು ನಾಮಕರಣ ಮಾಡುವ ಮೂಲಕ ಅವರಿಗೆ ಜಿಲ್ಲೆಯಿಂದ ಗೌರವ ನಮನ ಸಲ್ಲಿಸಬೇಕಾಗಿದೆ ಎಂದು ತಿಳಿಸಿದರು.
ಡಾ.ರಾಜಕುಮಾರ್ ರವರ ಹೆಸರು ನಾಮಕರಣ ಮಾಡದೆ ವಿಳಂಭ ಮಾಡಿದ್ದಲ್ಲಿ ಮುಂದಿನ ದಿನಗಳಲ್ಲಿ ನ್ಯಾಯ ಸಿಗುವವರೆಗೂ ಉಗ್ರವಾದ ಹೋರಾಟಗಳನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಿಯೋಗದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಅ.ಕೃ. ಸೋಮಶೇಖರ್, ಕನ್ನಡ ಸೇನೆ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಕಲಾವಿದ ವಿಷ್ಣು, ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಕೋನಾ.ಪ್ರಭಾಕರ್, ಉಪಾಧ್ಯಕ್ಷ ಐ.ಸುನಿಲ್ ರಾಜ್, ವಿಜಯಲಕ್ಷ್ಮಿ, ಪ್ರಮೀಳಮ್ಮ, ಪ್ರಧಾನ ಕಾರ್ಯದರ್ಶಿ ನಾ. ಮಂಜುನಾಥ್, ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಚಂಬೆ ರಾಜೇಶ್, ಶ್ರೀ ಭುವನೇಶ್ವರಿ ಕನ್ನಡ ಸಂಘ ಹಾಗೂ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಕೆಆರ್. ತ್ಯಾಗರಾಜ್ ,ಕನ್ನಡ ಸೇನೆ ಕೋಲಾರ ತಾಲೂಕು ಅಧ್ಯಕ್ಷ ಎನ್.ಸಿ. ಶಿವಚಂದ್ರಯ್ಯ, ಬಂಗಾರಪೇಟೆ ತಾಲೂಕು ಉಪಾಧ್ಯಕ್ಷ ವಿಜಯಕುಮಾರ್, ನರಸಾಪುರ ಹೋಬಳಿ ಘಟಕದ ಅಧ್ಯಕ್ಷ ಚೆಲ್ಲಹಳ್ಳಿ ನಾಗರಾಜ್ ಖಜಾಂಚಿ ಜಿ.ಗಂಗಾಧರ್, ಮುಖಂಡರಾದ ಎಂ ಶೇಷಾದ್ರಿ (ಶಾಸ್ತ್ರಿ), ವಿ.ಲೋಕೇಶ್, ಬಾಬಿ ಶ್ರೀನಿವಾಸ್, ರಾಶಿರಾಪು ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಕೆಪಿ.ಶ್ರೀಕಾಂತ್ ಗೌಡ, ವಿನೋದ್ ಮುಂತಾದವರು ಇದ್ದರು.
ಚಿತ್ರ : ಒಳಾಂಗಣ ಕ್ರೀಡಾಂಗಣಕ್ಕೆ ಡಾ.ರಾಜಕುಮಾರ್ ಹೆಸರನ್ನು ನಾಮಕರಣ ಮಾಡುವಂತೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ದಿಂದ ಶನಿವಾರ ಯುವ ಸಬಲೀಕರಣ ಮತ್ತು ಕ್ರೀಡ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಗೀತಾ ರವರಿಗೆ ಮನವಿ ಸಲ್ಲಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್