ಬಳ್ಳಾರಿ, 15 ಆಗಸ್ಟ್ (ಹಿ.ಸ.) :
ಆ್ಯಂಕರ್ : ನಗರದ ರೂಪನಗುಡಿ ರಸ್ತೆ, ಕೋಲ್ಮಿ ಬಜಾರ್, ಎ.ಪಿ.ಎಂ.ಸಿ, ಮಿಲ್ಲರಪೇಟೆ, ಕಣೆಕಲ್ ಬಸ್ ನಿಲ್ದಾಣ ಮುಂತಾದ ವಿವಿಧ ಸ್ಥಳಗಳಲ್ಲಿನ ಗ್ಯಾರೇಜ್, ಮೆಕ್ಯಾನಿಕ್ ಶಾಪ್, ಬೇಕರಿ ಇತ್ಯಾದಿ ಉದ್ದಿಮೆಗಳ ಮೇಲೆ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಟಾಸ್ಕ್ಫೋರ್ಸ್ ಸಮಿತಿಯು ದಾಳಿ ನಡೆಸಿ 06 ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ರಕ್ಷಿಸಲಾಗಿದೆ.
ಮಕ್ಕಳ ಹೇಳಿಕೆಗಳನ್ನು ಸ್ಥಳದಲ್ಲಿ ಪಡೆದುಕೊಂಡು ಎಲ್ಲಾ ಮಕ್ಕಳನ್ನು ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗಿದೆ. ಎಲ್ಲಾ ಉದ್ದಿಮೆಗಳ ಮಾಲೀಕರಿಗೆ ಕರಪತ್ರ ಹಾಗೂ ಪೋಸ್ಟರ್‌ಗಳನ್ನು ನೀಡಿ ಜಾಗೃತಿ ಮೂಡಿಸಲಾಯಿತು.
ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ ಹಾಗೂ ಪ್ಯಾನ್-ಇಂಡಿಯಾ ರಕ್ಷಣೆ ಮತ್ತು ಪುನರ್ವಸತಿ ಅಭಿಯಾನ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಹೊಸಮನೆ ಇವರ ಅಧ್ಯಕ್ಷತೆಯಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿ ಈ ದಾಳಿ ಕೈಗೊಳ್ಳಲಾಗಿದೆ.
ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ಕಾರ್ಮಿಕ ನಿರೀಕ್ಷಕರಾದ ರಮೇಶ್, ಪರಶುರಾಮ್, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮೌನೇಶ್, ಸಂಪನ್ಮೂಲ ವ್ಯಕ್ತಿ ವಿರುಪಾಕ್ಷಪ್ಪ, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ಗೌಸ್ ಪೀರ್, ಸಮಾಜ ಕಲ್ಯಾಣ ಇಲಾಖೆಯ ಶಿವಣ್ಣ, ಪೋಲಿಸ್ ಇಲಾಖೆಯ ಸಿಬ್ಬಂದಿಗಳು, ಮಕ್ಕಳ ಸಹಾಯವಾಣಿ ಸಿಬ್ಬಂದಿ ಕಾರ್ತಿಕ್, ರೀಚ್ ಸಂಸ್ಥೆಯ ಸಂಯೋಜಕ ಲಕ್ಷಿö್ಮÃದೇವಿ, ಬಸಮ್ಮ ಮತ್ತು ಹನುಮಂತಪ್ಪ ಹಾಗೂ ಇಲಾಖೆ ಅಧಿಕಾರಿಗಳು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್