ವಿಜಯಪುರ, 15 ಆಗಸ್ಟ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ ಬಿ ಪಾಟೀಲ ಅವರು ಇಂದು ವಿಜಯಪುರ ನಗರದಲ್ಲಿ ಮಳೆಯಿಂದ ಹಾನಿ ಹಾಗೂ ಮಹಾನಗರ ಪಾಲಿಕೆಯಿಂದ ಮುಂಜಾಗ್ರತೆ ಶಾಶ್ವತವಾಗಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ವಿಜಯಪುರ ನಗರದ ಶಿವಾಜಿ ಸರ್ಕಲ್ ಹತ್ತಿರವಿರುವ ಕೋಟೆಗೋಡೆ ಕಂದಕ, ನವಭಾಗ ರಸ್ತೆಯ ಸಿಕ್ಯಾಬ್ ಕಾಲೇಜ್ ಹತ್ತಿರ, ರಾಮನಗರ ಹಾಗೂ ಜುಮ್ಮಾ ಮಸೀದಿ ಹತ್ತಿರದ ಬಾಗಾಯತ್‍ಗಲ್ಲಿಗೆ ಭೇಟಿ ನೀಡಿ ಮಳೆಯಿಂದ ಹಾನಿಗೊಳಗಾದ ಪ್ರದೇಶವನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಹಿಂದಿನ ಸಮಯದಲ್ಲಿ ಮಳೆಯಿಂದ ಹಾನಿಗೊಳಗಾದ ಸಂದರ್ಭದಲ್ಲಿಯೇ ಅಧಿಕಾರಿಗಳಿಗೆ ಕಾಮಗಾರಿಗಳನ್ನು ಕೈಗೊಂಡು ಶಾಶ್ವತ ಪರಿಹಾರ ಕೈಗೊಳ್ಳಲು ಸೂಚಿಸಿದ್ದೇನೆ. ಅದರಂತೆ ಪರಿಹಾರ ಕಲ್ಪಿಸಲು ಕಾಮಗಾರಿಗಳನ್ನು ಪಾಲಿಕೆಯಿಂದ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಪ್ರಮುಖವಾಗಿ ಬೇಗಂ ತಲಾಬ್ ಕೆರೆಯಿಂದ ಬರುವ ಹಾಗೂ ಕೋಟೆಗೋಡೆ ಗೋಡೆ ಹೊರಗಡೆಯಿಂದ ಬರುವ ನೀರನ್ನು ತಡೆಯಲು 15 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ ಕಾಮಗಾರಿ ಕೈಗೊಳ್ಳಲಾಗಿದೆ. ಇನ್ನೂ 150 ಕೋಟಿ ರೂ. ಅನುದಾನ ಮಂಜೂರಾತಿಗೆ ಇರುವ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿ ಅನುದಾನ ಮಂಜೂರಾತಿಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ನಗರದಲ್ಲಿ ಮಳೆಯಿಂದ ತೊಂದರೆಯಾಗದಂತೆ ನೋಡಿಕೊಳ್ಳಲು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಪರಿಹಾರ ಕಲ್ಪಿಸಲು ಸೂಚಿಸಲಾಗಿದ್ದು, ಮುಳೆಗಾಲದ ನಂತರ ಶಾಶ್ವತ ಪರಿಹಾರ ಒದಗಿಸಿ 6 ತಿಂಗಳೊಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಮಳೆ ನೀರಿನಿಂದ ಪ್ರವಾಹ ಪರಿಸ್ಥಿತಿ ಮರುಕಳಿಸದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ನಗರದ ಶಿವಾಜಿ ವೃತ್ತದ ಹತ್ತಿರವಿರುವ ಕಂದಕ್ ಒಂದೂವರೆ ಮೀಟರ್ ಎತ್ತರವಿರುವುದರಿಂದ ನೀರು ನಿಂತು ಸಮಸ್ಯೆಗಳಾಗುತ್ತಿವೆ. ಇದರ ಪರಿಹಾರಕ್ಕಾಗಿ ಅಧಿಕಾರಿಗಳು ಅಡ್ಡವಾಗಿ ಟನಲ್ ನಿರ್ಮಿಸಲು ಸಲಹೆ ನೀಡಿದ್ದು, ಬೆಂಗಳೂರಿನಿಂದ ಪರಿಣಿತರ ತಂಡ ವಿಜಯಪುರ ನಗರಕ್ಕೆ ಬಂದು ಪರಿಶೀಲನೆ ನಡೆಸಿ ಈ ಸಮಸ್ಯೆ ಶಾಶ್ವತ ಪರಿಹಾರಕ್ಕೆ ವರದಿ ನೀಡಲಿದ್ದು, ಸಮಗ್ರ ವರದಿಯೊಂದಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.
ಮಳೆಯಿಂದ ನಗರದ ಯಾವ ಪ್ರದೇಶದಲ್ಲಿ ನೀರು ಬಂದು ಸಮಸ್ಯೆಯಾಗಲಿದೆ ಎಂಬುದರ ಕುರಿತು ಮುಂಚಿತವಾಗಿಯೇ ಈಗಾಗಲೇ ಇಂತಹ ಸ್ಥಳಗಳನ್ನು ಗುರುತಿಸಲಾಗಿದೆ. ಪ್ರತಿ ಸಲ ಈ ಸಮಸ್ಯೆ ಮರುಕಳಿಸದಂತೆ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷರಾದ ಕಾಂತಾ ನಾಯಕ, ಮಹಾನಗರ ಪಾಲಿಕೆ ಮಹಾಪೌರ ಎಸ್.ಎಂ.ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕನ್ನಾನ ಮುಶ್ರೀಪ್, ಜಿಲ್ಲಾಧಿಕಾರಿ ಡಾ.ಆನಂದ ಕೆ., ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ ಸೇರಿದಂತೆ ಪಾಲಿಕೆ ಸದಸ್ಯರು, ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande