ಕೊಪ್ಪಳ, 15 ಆಗಸ್ಟ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ತೋಟಗಾರಿಕಾ ಇಲಾಖೆ ವತಿಯಿಂದ ತೋಟಗಾರಿಕಾ ಕ್ಷೇತ್ರದಲ್ಲಿ ಅಭಿವೃದ್ಧಿಪಡಿಸಿದ ಗುಣಮಟ್ಟದ ಸಸಿಗಳ ಮತ್ತು ಆಧಾಯ ಹೆಚ್ಚಿಸುವ ತೋಟಗಾರಿಕೆ ಸಸಿ ತಳಿಗಳ ಪರಿಚಯ ಹಾಗೂ ಮಾರಾಟದ ಉದ್ದೇಶದಿಂದ ಆಗಸ್ಟ್ 15 ರಿಂದ ಆ. 20ರವರೆಗೆ ಕೊಪ್ಪಳ ನಗರದ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾದ ``ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ’’ ಮತ್ತು ``ಸ್ವದೇಶಿ ವಿದೇಶಿ ಹಣ್ಣಿನ ಸಸಿಗಳ ಪರಿಚಯ, ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಅವರು ಚಾಲನೆ ನೀಡಿದರು.
ಸಸ್ಯ ಸಂತೆಯಲ್ಲಿನ ಮಾವು, ಲಿಂಬೆ, ಮೊಸಂಬೆ, ಹಲಸು, ಕಿತ್ತಳೆ, ಚೈನಿಸ್ ಕಿತ್ತಳೆ, ಪೇರಲ, ತೆಂಗು, ದಾಳಿಂಬೆ, ಅಂಜೂರ, ವಾಟರ್ ಆಪಲ್, ಲಿಚ್ಚಿ, ಬೀಜರಹಿತ ಲಿಂಬೆ, ರಾಮ್‍ಫಲ, ಲಕ್ಷ್ಮಣ್ ಫಲ, ಸೇರಿದಂತೆ ವಿವಿಧ ಹಣ್ಣುಗಳ ಮತ್ತು ಕರಿಬೇವು, ವಿಳ್ಯೆದೆಲೆ ಸಸಿಗಳು, ಸಾಂಬಾರು ಪದಾರ್ಥ ಬೆಳೆಗಳಾದ ದಾಲ್ಚಿನ್ನಿ, ಲವಂಗ, ಏಲಕ್ಕಿ, ಕಾಳು ಮೆಣಸು ಸಸಿಗಳು ಹಾಗೂ ಅಲಂಕಾರಿಕ ಸಸಿಗಳು ಸೇರಿದಂತೆ ಇತರೆ ತಳಿಯ ಸಸಿಗಳನ್ನು ಸಚಿವರು, ಶಾಸಕರು ಹಾಗೂ ಇತರೆ ಜನಪ್ರತಿನಿಧಿಗಳು ವೀಕ್ಷಣೆ ಮಾಡಿದರು.
ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನದ ವಿಶೇಷತೆಗಳು: 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಮತ್ತು ತೋಟಗಾರಿಕೆ ಪಿತಾಮಹ ಡಾ. ಎಮ್.ಎಚ್. ಮರೀಗೌಡ ರವರ ಜನ್ಮ ದಿನಾಚರಣೆ ಅಂಗವಾಗಿ ಕೊಪ್ಪಳ ತೋಟಗಾರಿಕೆ ಇಲಾಖೆಯಿಂದ 9ನೇ ವರ್ಷದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ ವಿನೂತನ ಕಾರ್ಯಕ್ರಮವನ್ನು ರೈತರಿಗಾಗಿ ಮತ್ತು ಸಾರ್ವಜನಿಕರಿಗಾಗಿ ಕೊಪ್ಪಳ ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ತೋಟಗಾರಿಕಾ ಇಲಾಖಾ ಸಸ್ಯಾಗಾರದಲ್ಲಿ ಉತ್ಪಾದಿಸಿದ ಹಣ್ಣು, ತರಕಾರಿ, ಪುಷ್ಪ ಅಲ್ಲದೇ ಅಲಂಕಾರಿಕ ಗಿಡಗಳು ಮತ್ತು ಪುಷ್ಪ ಸಸ್ಯಗಳು ಪ್ರದರ್ಶನ ಮತ್ತು ಇಲಾಖಾ ದರದಲ್ಲಿ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಿಲಾಗಿದೆ. ಈ ಅಭಿಯಾನಕ್ಕೆ ತೋಟಗಾರಿಕೆ ಇಲಾಖೆ ಕೊಪ್ಪಳ ಜಿಲ್ಲೆಯಲ್ಲಿರುವ 9 ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ವಿವಿಧ ತೋಟಗಾರಿಕೆ ಸಸಿ-ಕಸಿಗಳು ಲಭ್ಯವಿರುತ್ತವೆ.
ಈ ಅಭಿಯಾನದಲ್ಲಿ ಮುಖ್ಯವಾಗಿ ಕಡಿಮೆ ಖರ್ಚು, ಕಡಿಮೆ ನಿರ್ವಹಣೆ, ನಿರಂತರ ಆದಾಯ ಬರುವಂತಹ ತೋಟಗಾರಿಕೆ ಬೆಳೆಗಳನ್ನು ರೈತರಿಗೆ ಪರಿಚಯಿಸಲಾಗುತ್ತಿದೆ ಹಾಗೂ ಹೆಚ್ಚು ಖರ್ಚು ಹೆಚ್ಚು ನಿರ್ವಹಣೆ ಅಧಿಕ ಆದಾಯ ಬರುವಂತಹ ಬೆಳೆಗಳನ್ನು ಪರಿಚಯಿಸಲಾಗುತ್ತಿದೆ. ರೈತರಿಗೆ ಫ್ಲೋರೋಜಾ ಕಂಪನಿಯೊಂದಿಗೆ ಹಲಸಿನ ಬೆಳೆಯ ಒಪ್ಪಂದ ಕೃಷಿಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಜಿಲ್ಲೆಗೆ ಹೊಂದುವಂತಹ ಹೊಸ ಸೇಬು ಹಣ್ಣಿನ “ಅನಾ” ತಳಿ ಹಾಗೂ ಜಗತ್ತಿನ ದುಬಾರಿ ಮಾವಿನ ತಳಿ ಮಿಯಾಜಾಕಿಯ ಸಸಿಗಳನ್ನು ಜೊತೆಗೆ ಹೊಸ ತಳಿಗಳಾದ ಮೆಕಡೋಮಿಯಾ ಜಗತ್ತಿನ ದುಬಾರಿ ನಟ್ಟ್ ಕಸಿ ಸಸಿಗಳನ್ನು ಮೊದಲ ಬಾರಿಗೆ ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ ಹಾಗೂ ಹೊಸ ಹೊಸ ಹಣ್ಣಿನ, ಹೂವಿನ, ತರಕಾರಿ ಸಸಿಗಳನ್ನು ಯೋಗ್ಯದರದಲ್ಲಿ ಮಾರಾಟಕ್ಕೆ ಇಡಲಾಗಿದೆ.
ಮುಖ್ಯವಾಗಿ ಸಾವಯವ ದತ್ತ ಒಂದು ಹೆಜ್ಜೆ ಎಂಬ ಪರಿಕಲ್ಪನೆ ಹೊಂದಿಗೆ ಜಿಲ್ಲೆಯಲ್ಲಿರುವ 9 ತೋಟಗಾರಿಕೆ ಕ್ಷೇತ್ರಗಳನ್ನು ಸಾವಯವ ಪರಿವರ್ತನೆ ಮಾಡುವ ಉದ್ದೇಶದೊಂದಿಗೆ ಸಾವಯವ ಉತ್ಪನ್ನಗಳಾದ ಪಂಚಗವ್ಯ, ಗೋ ಕೃಪಾಮೃತ, ಜೀವಾಮೃತ, ಬೀಜಾಮೃತ, ನಿಮಾಸ್ತ್ರ, ಘನ ಜೀವಾಮೃತ, ಅಗ್ನಿಅಸ್ತ್ರ, ಬ್ರಹ್ಮಾಸ್ತ್ರ, ದಶಪರ್ಣಿ ಕಷಾಯ, ದಶಗವ್ಯ, ಹ್ಯುಮಿಕ್ ಆಸಿಡ್, ಬಿಲ್ವ ಪತ್ರರಸಾಯನ, ಬೇವಿನ ಬೀಜದ ಸಾರ, ಸಂಜೀವಕ, ಅಮೃತಪಾನಿ, ಎರೆಹುಳ ಗೊಬ್ಬರ, ಎರೆಜಲ, ಬೇವಿನ ಹಿಂಡಿ ಹಾಗೂ ಮೀನಿನಿಂದ ತಯಾರಿಸಿದ ಔಷಧಿಗಳನ್ನು ಪ್ರಾತ್ಯಾಕ್ಷಿಕೆ ರೂಪದಲ್ಲಿ ರೈತರಿಗೆ ಪರಿಚಯಿಸಲಾಗುತ್ತಿದೆ.
ಕಡಿಮೆ ಜಾಗದಲ್ಲಿ ಮೀನು ಸಾಕಾಣಿಕೆ ಮಾಡಿ ಹೆಚ್ಚಿನ ಆದಾಯ ತೆಗೆಯುವ ಕುರಿತು ಬಯೋಪ್ಲಾಕ್ಸ್ ಎಂಬ ಮಾದರಿ ಮೀನು ಸಾಕಾಣಿಕೆಯನ್ನು ಪ್ರಾತ್ಯಾಕ್ಷಿಕೆಯಲ್ಲಿ ರೈತರಿಗೆ ಪರಿಚಯಿಸಲಾಗುತ್ತಿದೆ. ರೈತರಿಗೆ ಪಾಲಿಹೌಸ್, ನೆರಳು ಪರದೆ, ವೀಡ್ ಮ್ಯಾಟ್, ಕ್ರಾಪ್‍ಕವರ್, ಹಾಗೂ ಹೊಸ ಹೊಸ ತಂತ್ರಜ್ಞಾನಗಳ ಕುರಿತು ಕಂಪನಿಗಳಿಂದ ಮಾಹಿತಿ ನೀಡಲಾಗುತ್ತಿದೆ. ತಾಳೆ ಬೆಳೆಯ ಒಪ್ಪಂದ ಕೃಷಿ ಕುರಿತು 3 ಎಪ್ ಕಂಪನಿಗಳಿಂದ ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ಸಾಂಬಾರು ಪದಾರ್ಥ ಬೆಳೆಗಳಾದ ದಾಲ್ಚಿನ್ನಿ, ಲವಂಗ, ಏಲಕ್ಕಿ, ಕಾಳು ಮೆಣಸು ಬೆಳೆಯುವ ಕುರಿತು ಮಾಹಿತಿ ಹಾಗೂ ಸಸಿಗಳ ಮಾರಾಟ. ತೋಟಗಾರಿಕೆಯಲ್ಲಿ ಬೋರ್‍ವೆಲ್‍ಗಳಿಗೆ ಸೋಲಾರ್ ಅಳವಡಿಸುವ ಕುರಿತು ರೈತರಿಗೆ ಮಾಹಿತಿ ಹಾಗೂ ಕಂಪನಿಗಳಿಂದ ಸೋಲಾರ್ ಪರಿಕರಗಳ ಮಾರಾಟದ ಕುರಿತು ಮಾಹಿ ನೀಡಲಾಗುತ್ತಿದೆ.
ಈ ಸಸ್ಯ ಸಂತೆಯಲ್ಲಿ ಸಾರ್ವಜನಿಕರಿಗಾಗಿ ಆಕರ್ಷಕ ಸೆಲ್ಫಿ ಪಾಯಿಂಟ್‍ಅನ್ನು ಸಹ ಅಳವಡಿಸಲಾಗಿದೆ. 15ಕ್ಕೂ ಹೆಚ್ಚಿನ ಪ್ರಧಾನ ಮತ್ತು ಅಪ್ರಧಾನ ಹಣ್ಣುಗಳ 100ಕ್ಕೂ ಹೆಚ್ಚಿನ ಅಲಂಕಾರಿಕ ವಿವಿಧ ತಳಿಗಳ ಸಸಿ-ಕಸಿಗಳ ಸಸ್ಯಗಳು ಇಲಾಖಾ ದರದಲ್ಲಿ ಲಭ್ಯವಿರುತ್ತವೆ. ಅಲ್ಲದೇ ವಿಶೇಷ ಹಣ್ಣಿನ ಬೆಳೆಗಳಾದ ವಾಟರ್ ಆಪಲ್, ಲಿಚ್ಚಿ, ಬೀಜರಹಿತ ಲಿಂಬೆ, ರಾಮ್‍ಫಲ, ಲಕ್ಷ್ಮಣ್ ಫಲ, ಹಲಸು ಇತ್ಯಾದಿ ಲಭ್ಯವಿವೆ. ತರಕಾರಿ ಬೆಳೆಗಳಾದ ಟೊಮ್ಯಾಟೊ, ಮೆಣಸಿನಕಾಯಿ, ಬದನೆ, ನುಗ್ಗೆ, ಕರಿಬೇವು, ಕುಂಬಳ ಜಾತಿಯತರಕಾರಿ ಬೆಳೆಗಳ ವಿವಿಧ ಹೈಬ್ರಿಡ ಸಸಿಗಳನ್ನು ಪಾಲಿಮನೆಯಲ್ಲಿ ಉತ್ಪಾದಿಸಿದ್ದು 5 ಲಕ್ಷಕ್ಕೂ ಹೆಚ್ಚಿನ ಸಸಿಗಳು ನೇರ ನಾಟಿ ಮಾಡಲು ಲಭ್ಯವಿವೆ. ಪುಷ್ಪ ಬೆಳೆಗಳಾದ ಗುಲಾಬಿ, ಮಲ್ಲಿಗೆ, ಪಾರಿಜಾತ, ಕನಕಾಂಬರ, ಮುಂತಾದ ಬಹುವಾರ್ಷಿಕ ಬೆಳೆಗಳಲ್ಲದೇ ಅಲ್ಪಾವಧಿ ಬೆಳೆಗಳಾದ ಚೆಂಡು ಹೂ, ಗಡ್ಡೆ ಬೆಳೆಗಳಾದ ಸುಗಂಧರಾಜದಂತಹ ಗಡ್ಡೆ ಹೂ ಗಳು ಲಭ್ಯವಿರುತ್ತವೆ.
ಇದಲ್ಲದೇ ಕುಂಡಲಗಳಲ್ಲಿ ಬೆಳೆಯಬಹುದಾದ ಪೆಟೊನಿಯಾ, ಅಡಕೆ ಹೂ, ದೇಹಲಿಯಾ ಅಲ್ಲದೇ ಸಂಪಿಗೆ ದಾಸವಾಳಗಳಂತಹ ಹೂವಿನ ಬೆಳೆಗಳ 100ಕ್ಕೂ ಹೆಚ್ಚಿನ ಅಲಂಕಾರಿಕ ಹೂವಿನ ಸಸ್ಯಗಳು ಲಭ್ಯವಿದೆ. ಔಷಧಿ ಸಸ್ಯಗಳಾದ ತುಳಸಿ, ವಿಂಕಾರೋಸಿ ಎನ್ಸಿಸ್, ರೋಸ್ ಮೇರಿ ಅಲ್ಲದೇ ಸಾಂಪ್ರಾದಾಯಕ ಸಸ್ಯಗಳಾದ ಅಶೋಕ, ಕದಂಬ, ಸಿಂಗಾಪೂರ ಚೆರ್ರಿ, ಗುಲ್ ಮೋರ್ ಇತ್ಯಾದಿ ಮಾರಾಟಕ್ಕೆ ಲಭ್ಯವಿವೆ. ವಿವಿಧ ಮಾದರಿ ಕೈತೋಟ, ತಾರಸಿ ತೋಟದ ವಿನ್ಯಾಸಗಳಾದ ವರ್ಟಿಕಲ್ ಗಾರ್ಡನ್, ಹೈಡ್ರೋಪೊನಿಕ್ಸ್, ಬೊನ್ಸಾಯಿಕಲ್ಚರ್, ಸೊಕ್ಯುಲೇಂಟ್ಸ್, ರಾಕ್‍ಗಾರ್ಡನ್ ಮಾದರಿ ಅಲ್ಲದೇ ಅಂತಹ ಸಸಿಗಳು ಮತ್ತು ಸೊಪ್ಪಿನ ತರಕಾರಿ ಸಸಿಗಳು ಅಸಂಖ್ಯಾತ ಸಂಖ್ಯೆಯಲ್ಲಿ ಲಭ್ಯವಿರುತ್ತವೆ. ಹುಲ್ಲಿನ ಹಾಸಿಗೆ (ಲಾನ್) ಬೆಳೆಸಲು ರಿಬ್ಬನ್‍ಗ್ರಾಸ್, ಬರ್ಮೊಡಾಗ್ರಾಸ್ ಲಭ್ಯವಿದ್ದು, ಇದರ ಬಗ್ಗೆ ಮಾದರಿಗಳು ಮತ್ತು ಪ್ರಾತ್ಯಾಕ್ಷಿಕೆಗಳ ಮೂಲಕ ರೈತರಿಗೆ ಮತ್ತು ಗ್ರಾಹಕರಿಗೆ ಸಂಪೂರ್ಣ ಮಾಹಿತಿ ನೀಡಲು ಅಧಿಕಾರಿಗಳು, ತಜ್ಞರು ಈ ಮೇಳದಲ್ಲಿ ಲಭ್ಯವಿದ್ದಾರೆ.
ಈ ಅಭಿಯಾನದಲ್ಲಿ ರೈತರಷ್ಟೆ ಅಲ್ಲದೇ ಸಾರ್ವಜನಿಕ ಆಸಕ್ತಿ, ಅಭಿರುಚಿಗೆ ತಕ್ಕಂತೆ ಎಲ್ಲಾ ಸಸಿ, ಕಸಿಗಳು ಲಭ್ಯವಿದ್ದು, ರೈತರು ಮತ್ತು ಗ್ರಾಹಕರು ಈ ಅಭಿಯಾನ ಅಥವಾ ಸಂತೆಯ ಲಾಭ ಪಡೆದುಕೊಳ್ಳಬಹುದಾಗಿದೆ. ಇಲ್ಲಿಗೆ ಬಂದ ರೈತರು, ಗ್ರಾಹಕರು ಖಾಲಿ ಕೈಯಲ್ಲಿ ಹೋಗುವಂತೆಯೇ ಇಲ್ಲಾ. ಇದು ತೋಟಗಾರಿಕೆಯಲ್ಲಿ ಆಸಕ್ತಿ ಅಭಿರುಚಿ ಇರುವ ಎಲ್ಲಾ ವರ್ಗದ ನಾಗರೀಕರಿಗೆ ಒಂದೇ ಸೂರಿನಡಿ ದೊರೆಯ ಬಲ್ಲ ಸಸಿ-ಕಸಿಗಳು ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳವಾಗಿದೆ.
ತೋಟಗಾರಿಕೆಯಲ್ಲಿ ನವೀನ ತಾಂತ್ರಿಕತೆಗಳಾದ, ಯಾಂತ್ರೀಕರಣ, ಹನಿ ನೀರಾವರಿ, ಮಳೆ ನೀರು ಕೊಯ್ಲು, ಬಗ್ಗೆಯೂ ಮಾಹಿತಿ ಹಾಗೂ ಪ್ರಾತ್ಯಾಕ್ಷಿಕೆಗಳನ್ನು ಆಯೋಜಿಸಲಾಗಿದೆ. ಖುಷ್ಕಿ ತೋಟಗಾರಿಕೆ ಬಗ್ಗೆಯೂ ಪ್ರಾತ್ಯಕ್ಷಿಕೆ ಹಾಗೂ ಸಮಗ್ರ ಮಾಹಿತಿ ನೀಡಲಾಗುತ್ತಿದೆ. ಸಾವಯವ ತೋಟಗಾರಿಕೆ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದೆ. ವಿವಿಧ ಹಣ್ಣಿಗಳು, ತರಕಾರಿ, ಔಷಧೀ ಬೆಳೆಗಳ ಬಗ್ಗೆ ಮಾಹಿತಿ ಲಭ್ಯವಿದ್ದು, ಚಿಕ್ಕ ಮಕ್ಕಳು ಮಹಿಳೆಯರು ತೋಟಗಾರಿಕೆಯಲ್ಲಿ ಆಸಕ್ತಿ ಮೂಡಿಸುವ ವಿವಿಧ ಪ್ರಾತ್ಯಾಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
ಅಣಬೆ ಬೆಳೆಯುವ ಮತ್ತು ಜೇನು ಸಾಕಾಣಿಕೆಗೆ ಆಸಕ್ತ ರೈತರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗುತ್ತದೆ. ತೋಟಗಾರಿಕೆಯಲ್ಲಿ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಇಂದಿನ ಅವಶ್ಯಕವಾಗಿದ್ದು, ರೈತರ ಆದಾಯ ದ್ವಿಗುಣಗೊಳಿಸಲು ಸಮಗ್ರ ಮಾಹಿತಿ ಲಭ್ಯವಿದೆ. ಒಂದು ಜಿಲ್ಲೆ ಒಂದು ಬೆಳೆ ಬಗ್ಗೆ ಸಮಗ್ರ ಮಾಹಿತಿ ನೀಡಲಾಗುತ್ತಿದೆ. ಇದರ ಜೊತೆಗೆ ಬೆಳೆ ವಿಮೆ, ಬ್ಯಾಂಕಿನಿಂದ ತೋಟಗಾರಿಕೆ ಆರಂಭಿಸಲು ಸಾಲ ಪಡೆಯುವ ಬಗ್ಗೆ ಬ್ಯಾಂಕಿನಿಂದ ಅಧಿಕಾರಿಗಳು ಆಗಮಿಸಿ ಮಾಹಿತಿ ನೀಡುವ ಕಾರ್ಯಕ್ರಮವನ್ನ ಸಹ ಆಯೋಜಿಸಲಾಗಿದೆ.
ಒಟ್ಟಾರೆ 6 ದಿನಗಳ ಕಾಲ ನಡೆಯುವ ಈ ತೋಟಗಾರಿಕೆ ಅಭಿಯಾನವು ರೈತರಿಗೆ, ಸಾರ್ವಜನಿಕ ಗ್ರಾಹಕರಿಗೆ ಮತ್ತು ಮಹಿಳೆಯರು ಹಾಗೂ ಮಕ್ಕಳಿಗೂ ಸಹ ಆಸಕ್ತಿ ಮೂಡಿಸಬಹುದಾಗಿದೆ. ಇದಕ್ಕಾಗಿ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದಾಗಿದೆ.
ಈ ಸಂದರ್ಭದಲ್ಲಿ ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಶ್ರೀನಿವಾಸ್ ಗುಪ್ತಾ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ್, ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ಧಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕೊಪ್ಪಳ ಜಿಲ್ಲಾ ಹಾಪ್‍ಕಾಮ್ಸ್ ಅಧ್ಯಕ್ಷರಾದ ಯಂಕಣ್ಣ ಯರಾಶಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಕೊಪ್ಪಳದ ತೋಟಗಾರಿಕೆ ಉಪ ನಿರ್ದೇಶಕ ಕೃಷ್ಣ ಸಿ. ಉಕ್ಕುಂದ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಂಜುನಾಥ ದೊಡ್ಡಪತ್ತಾರ ಹಾಗೂ ಇತರೆ ಜನಪ್ರತಿನಿಧಿಗಳು, ತೋಟಗಾರಿಕೆ ಬೆಳೆಗಾರರು, ರೈತರು, ತೋಟಗಾರಿಕೆ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್