ಉಡುಪಿ, 15 ಆಗಸ್ಟ್ (ಹಿ.ಸ.) :
ಆ್ಯಂಕರ್ : 2024 -25 ನೇ ಆರ್ಥಿಕ ವರ್ಷದಲ್ಲಿ ನಮ್ಮ ರಾಜ್ಯವು ದೇಶದಲ್ಲಿಯೇ ಅತೀ ಹೆಚ್ಚು ತಲಾ ಆದಾಯ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ. ರಾಜ್ಯ ಸರ್ಕಾರವು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ದೃಷ್ಠಿಯಿಂದ ವಿತ್ತೀಯ ನಿರ್ವಹಣೆಯಲ್ಲಿ ತನ್ನ ಕಾರ್ಯಕ್ಷಮತೆಯನ್ನು ತೋರಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಅಜ್ಜರಕಾಡಿನಲ್ಲಿರುವ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೇರವೇರಿಸಿ, ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದ ಸಚಿವರು, ಜಿ.ಎಸ್.ಟಿ ಸಂಗ್ರಹದಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿರುವುದು ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದರು.
ಸ್ವಾತಂತ್ರ್ಯ ಹೋರಾಟದ ನಾಯಕತ್ವವನ್ನು ವಹಿಸಿ, ಜಗತ್ತಿನ ಚರಿತ್ರೆಯಲ್ಲಿ ಮೊದಲ ಬಾರಿಗೆ ಅಹಿಂಸೆಯ ಮೂಲಕ ಸ್ವಾತಂತ್ರ್ಯವನ್ನು ತಂದುಕೊಟ್ಟ ಮಹಾತ್ಮಾ ಗಾಂಧೀಜಿಯವರು ಉಡುಪಿಗೆ ಆಗಮಿಸಿ, ಅಜ್ಜರಕಾಡಿನಲ್ಲಿ ದೇಶ ಪ್ರೇಮಿಗಳ ಹೋರಾಟಕ್ಕೆ ಕರೆ ನೀಡಿದ್ದು ಮರೆಯಲಾಗದ ಘಟನೆ. ಅದರ ಸ್ಮಾರಕವೂ ಈ ನೆಲದಲ್ಲಿ ಇಂದು ಚಿರಸ್ಥಾಯಿಯಾಗಿದೆ. ಜಾತಿ-ಮತ ಭೇಧವಿಲ್ಲದೇ ಉಡುಪಿ ಜಿಲ್ಲೆಯ ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯಂತಹ ನಾಯಕರ ಕರೆಗೆ ಓಗೊಟ್ಟು ಭಾಗವಹಿಸಿರುವುದು ಸದಾ ಮರೆಯಲಾಗದ ಐತಿಹಾಸಿಕ ಘಟನೆ ಎಂದು ಸಚಿವರು ಸ್ಮರಿಸದರು.
ಶಾಲಾ ಮಕ್ಕಳಿಗೆ ವರ್ಷಕ್ಕೊಮ್ಮೆ ಇಲಾಖೆಯಿಂದಲೇ ಆರೋಗ್ಯ ತಪಾಸಣೆ ನಡೆಸಲು ತೀರ್ಮಾನಿಸಲಾಗಿದೆ.
ಅಂಗನವಾಡಿಗಳಲ್ಲಿ ಎಲ್.ಕೆ.ಜಿ, ಯು.ಕೆ.ಜಿ ನಡೆಸಲು 10 ಸಾವಿರ ಅಂಗನವಾಡಿ ಕೇಂದ್ರಗಳನ್ನು ಗುರುತಿಸಲಾಗಿದ್ದು, 4 ರಿಂದ 5 ಸಾವಿರ ಅಂಗನವಾಡಿಗಳಲ್ಲಿ ಸದ್ಯದಲ್ಲಿಯೇ ತರಗತಿಗಳನ್ನು ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲ ಕೇಂದ್ರಗಳಿಗೆ ವಿಸ್ತರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಇದೇ ವೇಳೆ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕ ಪಡೆದ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 'ಮೌಲಾನಾ ಅಬ್ದುಲ್ ಕಲಾಂ ಅಜಾದ್ ಪ್ರತಿಭಾ ಪುರಸ್ಕಾರ' ನೀಡಿ ಗೌರವಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa