ವಿಕಲತೇತನರಿಗೆ ನೆರವಾಗುವುದು ಪ್ರತಿಯೊಬ್ಬರ ಕರ್ತವ್ಯ
ವಿಜಯಪುರ, 15 ಆಗಸ್ಟ್ (ಹಿ.ಸ.) : ವಿಜಯಪುರ : ವಿಕಲತೇತನರಿಗೆ ನೆರವಾಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ. ಶುಕ್ರವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯ ಸಭಾಂಗಣದಲ್ಲಿ ಭಾರತ
ಪಾಟೀಲ


ವಿಜಯಪುರ, 15 ಆಗಸ್ಟ್ (ಹಿ.ಸ.) :

ವಿಜಯಪುರ : ವಿಕಲತೇತನರಿಗೆ ನೆರವಾಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.

ಶುಕ್ರವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯ ಸಭಾಂಗಣದಲ್ಲಿ ಭಾರತ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್(ಬಿ.ಪಿ.ಸಿ.ಎಲ್) ಸಿ.ಎಸ್.ಆರ್ ಯೋಜನೆಯಡಿಯಲ್ಲಿ 80ಕ್ಕೂ ಹೆಚ್ಚು ವಿಕಲಚೇತನರಿಗೆ(ದಿವ್ಯಾಂಗರಿಗೆ) ಕೃತಕ ಅಂಗಾಗಗಳು ಮತ್ತು ಶ್ರವಣ ಸಾಧನಗಳನ್ನು ವಿತರಿಸಿ ಅವರು ಮಾತನಾಡಿದರು.

ಅಪಘಾತಗಳು ಮತ್ತು ಆರೋಗ್ಯ ಚಿಕಿತ್ಸೆ ಸಂದರ್ಭಗಳ್ಲಲಿ ಅಂಗವಿಲತೆ ಎದುರಾಗುವ ಸಾಧ್ಯತೆಗಳಿದ್ದು, ಇವುಗಳ ಬಗ್ಗೆ ಜಾಗೃತಿ ಮೂಡಿಸಬೇಕು. ವಿಕಲಚೇತನರ ಕಲ್ಯಾಣಕ್ಕೆ ಸರಕಾರಗಳು ಯೋಜನೆಗಳನ್ನು ರೂಪಿಸುತ್ತವೆ. ಸರಕಾರಗಳ ಜೊತೆ ಸಂಘ-ಸಂಸ್ಥೆಗಳೂ ಕೈಜೊಡಿಸಬೇಕು. ಬಿ.ಪಿ.ಸಿ.ಎಲ್ ನವರು ಸಿ.ಎಸ್.ಆರ್ ಅನುದಾನವನ್ನು ನೀಡುವ ಮೂಲಕ ನೆರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇನ್ನೂ ಬಾಕಿ ಉಳಿದಿರುವ ಫಲಾನುಭವಿಗಳ ಬಗ್ಗೆ ಜಿಲ್ಲಾ, ತಾಲೂಕು ಆಸ್ಪತ್ರೆಗಳ ಮೂಲಕ ಮಾಹಿತಿ ಸಂಗ್ರಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸಚಿವರು ತಿಳಿಸಿದರು.

ಎಲ್ಲ ಧರ್ಮಗಳಲ್ಲಿಯೂ ಪರೋಪಕಾರ ಮತ್ತು ದಾನದ ಬಗ್ಗೆ ಪ್ರಸ್ತಾಪವಿದೆ. ಅಂಗವಿಕಲರಿಗೆ ಸಹಾನುಭೂತಿ ತೋರಿಸುವ ಬದಲು ಅವರಿಗೆ ನೆರವಾಗಬೇಕು ಎಂಬ ಸದುದ್ದೇಶದಿಂದ ಬಿ.ಎಲ್.ಡಿ.ಇ ಸಂಸ್ಥೆಯಯಲ್ಲಿ 1992ರಲ್ಲಿ ರಾಜ್ಯದ ಮೊದಲ ಜಿಲ್ಲಾ ವಿಕಲಚೇತನ ಮತ್ತು ಪುನರ್ವಸತಿ ಕೇಂದ್ರವನ್ನು ಪ್ರಾರಂಭಿಸಲಾಯಿತು. ಅಂದಿನ ಖ್ಯಾತ ವೈದ್ಯ ಡಾ. ಶಿವರಾಮಪ್ಪ ಅವರು ಮೊಹಂತಿ ಅವರ ಸಹಯೋಗದಲ್ಲಿ ಈ ಕೇಂದ್ರವನ್ನು ಸಮರ್ಥವಾಗಿ ಮುನ್ನಡೆಯೆಲು ಭದ್ರ ಬುನಾದಿ ಹಾಕಿದರು. ಅಂದಿನಿಂದ ಇಂದಿನವರೆಗೂ ಈ ಸಂಸ್ಥೆ ಅಂಗವಿಕಲರು, ಶ್ರವಣದೋಷ ಹೊಂದಿದವರಿಗೆ ಕೃತಕ ಅಂಗಾಂಗ ಮತ್ತು ಸಲಕರಣೆ ಒದಗಿಸುವ ಕೆಲಸ ಅವರಿಗೆ ನೆರವಾಗುವ ಕೆಲಸ ಮಾಡುತ್ತಿದೆ. ಬಿ.ಎಲ್.ಡಿ.ಇ ಸಂಸ್ಥೆ ಸಮಾಜಮುಖಿ ಕಾರ್ಯಗಳಿಗೆ ಸದಾ ಮುಂಚೂಣಿಯಲ್ಲಿದ್ದು, ಮಹಿಳಾ ವಿವಿಗೆ ರೂ. 50 ಲಕ್ಷ ಆರ್ಥಿಕ ನೆರವು ನೀಡಿದೆ. ವೃಕ಼್ಷಥಾನ್ ಗೆ ಪ್ರತಿವರ್ಷ ರೂ. 25 ಲಕ್ಷ ಸಹಾಯಧನ ನೀಡುತ್ತಿದೆ. ಪ್ರತಿವರ್ಷ ಸರಕಾರಿ ಕೋಟಾದಡಿ ಆಯ್ಕೆಯಾಗುವ ಬಡ ಮತ್ತು ಪ್ರತಿಭಾವಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಹಾಸ್ಟೆಲ್ ಮತ್ತು ವಿದ್ಯಾಭ್ಯಾಸಕ್ಕೆ ಅಗತ್ಯವಾದ ಆರ್ಥಿಕ ನೆರವು ನೀಡುತ್ತಿದೆ. ಅಷ್ಟೇ ಅಲ್ಲ ಈಗ ಕೈಗಾರಿಕೆ ಸಚಿವನಾಗಿ ಸಿ.ಎಸ್.ಆರ್ ಅನುದಾನದಡಿ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುತ್ತಿದ್ದೇನೆ. ಮುಂಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲ ಮತಕ್ಷೇತ್ರಗಳ ಸರಕಾರಿ ಶಾಲೆಗಳಿಗೂ ಸಿ.ಎಸ್.ಆರ್ ಅನುದಾನ ನೀಡಲಾಗುವುದು ಎಂದು ಅವರು ಹೇಳಿದರು.

ಬಿ.ಪಿ.ಸಿ.ಎಲ್ ಕರ್ನಾಟಕ ಚೀಫ್ ಮ್ಯಾನೇಜರ್ ವೆಂಕಟೇಶ ಮಾತನಾಡಿ, ವೆಂಕಟೇಶ, ಈ ಮೊದಲು ನಾವು ಸಿ.ಎಸ್.ಆರ್ ಅನುದಾನ ನೀಡುವಾಗ ಎಲ್ಲ ಸಂಘ- ಸಂಸ್ಥೆಗಳು ತಮ್ಮ ವೈಯಕ್ತಿಕವಾಗಿ ನೆರವು ಕೇಳುತ್ತಿದ್ದವು. ಆದರೆ, ಸಚಿವ ಎಂ. ಬಿ. ಪಾಟೀಲ ಅವರು ಮಾತ್ರ ತಮ್ಮ ಬಿ.ಎಲ್.ಡಿ.ಇ ಸಂಸ್ಥೆಗೆ ನೆರವು ಕೇಳುವ ಬದಲು ಜಿಲ್ಲೆಯ ಜನರ ಕಲ್ಯಾಣಕ್ಕಾಗಿ ಈ ಹಣ ಬಳಸಲು ಕೇಳಿದರು. ಇದು ತಮಗೆ ಅಚ್ಚರಿಯ ಜೊತೆಗೆ ಸಂತೋಷವನ್ನು ತಂದಿದೆ. ಸಿ.ಎಸ್.ಆರ್ ನಡಿ ಒಟ್ಟು ರೂ. 50 ಲಕ್ಷ ವೆಚ್ಚದ ಸಲಕರಣೆಗಳನ್ನು ನೀಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡಲು ಬಿ.ಪಿ.ಸಿ.ಎಲ್ ಸಿದ್ಧವಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ವಿಕಲಚೇತನ ಮತ್ತು ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಡಾ. ಈಶ್ವರ ಭಾಗೋಜಿ, ಬಿಪಿಸಿಎಲ್ ಕರ್ನಾಟಕ ಚೀಫ್ ಮ್ಯಾನೇಜರ್ ವೆಂಕಟೇಶ, ಅಲಿಮ್ಕೊ ಕಂಪನಿಯ ಅಭಿಷೇಕಕುಮಾರ ಆನಂದ, ಶ್ರವಣದೋಷ ದೋಷ ತಂತ್ರಜ್ಞ ಕಿಶನಕುಮಾರ, ಟೆಕ್ನಿಶಿಯನ್ ಸೋನು ಕುಮಾರ ಅವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಜಿಲ್ಲಾಧಿಕಾರಿ ಡಾ. ಆನಂದ ಕೆ., ಎಸ್ಪಿ ಲಕ್ಷ್ಣಣ ನಿಂಬರಗಿ, ಜಿ. ಪಂ. ಸಿಇಓ ರಿಷಿ ಆನಂದ, ಬಿ.ಎಲ್.ಡಿ.ಇ ಡೀಮ್ಡ್ ವಿವಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಕೃತಕ ಅಂಗಾಂಗ ತಯಾರಿಕೆ ಎಂಜಿನಿಯರ್ ಕರಣ ಸಿ. ಮೊಹಾಂತಿ, ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ಜಗದೀಶ ಕೆಂಪಲಿಂಗಣ್ಣವರು, ಡಿಡಿಆರ್ ಸಿ ಅಕೌಂಟೆಂಟ್ ಜಿ. ಎಂ. ದೇಶಪಾಂಡೆ ಮುಂತಾದವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande