ಬೆಂಗಳೂರು, 15 ಆಗಸ್ಟ್ (ಹಿ.ಸ.):
ಆ್ಯಂಕರ್ : ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನದ ಹೆಸರನ್ನು ಸದ್ಯದ SIT ತನಿಖೆಯಲ್ಲಿ ಆರೋಪ ಎದುರಿಸುತ್ತಿರುವ ಧರ್ಮಾಧಿಕಾರಿಗಳ ರಕ್ಷಣೆಗೆ ಬಳಸಿಕೊಳ್ಳುವುದನ್ನು ನಿರ್ಬಂಧಿಸಲು ಭಕ್ತರಿಬ್ಬರು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಿರುತ್ತಾರೆ.
ಭಾರತದ ಕಾನೂನಿನಡಿ ಹಿಂದೂ ದೇವರಿಗೆ ಅಥವಾ ದೇವಮಂದಿರಕ್ಕೆ ಮನುಷ್ಯ ಒಡೆಯನಿರುವುದಿಲ್ಲ. ಯಾವುದೇ ಹಿಂದೂ ದೇವಾಲಯವನ್ನು ಯಾವುದೇ ವ್ಯಕ್ತಿಯ ಖಾಸಗಿ ಆಸ್ತಿಯನ್ನಾಗಿ ಪರಿಗಣಿಸುವಂತಿಲ್ಲ. ಹೀಗಿರುವಾಗ, ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನದ ಹೆಸರನ್ನು ಆರೋಪ ಎದುರಿಸುತ್ತಿರುವ ಅದರ ಆಡಳಿತಗಾರರ ರಕ್ಷಣೆಗೆ ಕೆಲವು ಹೋರಾಟಗಾರರು, ಮಾಧ್ಯಮಗಳು ಮತ್ತು ರಾಜಕಾರಣಿಗಳು ಬಳಸಿಕೊಳ್ಳಲು ಅವರಿಗೆ ಅನುಮತಿ ನೀಡಿದವರು ಯಾರು? ದೇವಸ್ಥಾನದ ಭಕ್ತರ ಸಮ್ಮತಿಯಿರುವದೇ ಈ ದುರ್ಬಳಕೆಗೆ?
ಈ ಗುರುತರ ಪ್ರಶ್ನೆಗಳಿಗೆ ಬರುವ 23 - ಆಗಸ್ಟ್ ರಂದು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯವು ನಿರ್ಧಿಷ್ಟ ಉತ್ತರ ನೀಡುತ್ತಲೇ, ಆರೋಪಿಗಳ ರಕ್ಷಣೆಗೆ ಧರ್ಮಸ್ಥಳ ದೇವಸ್ಥಾನದ ಬಳಕೆ/9ದುರ್ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಸಾಧ್ಯತೆಯಿರುತ್ತದೆ.
ಬೆಂಗಳೂರಿನಲ್ಲಿ ನೆಲೆಸಿರುವ ಇಬ್ಬರು ವ್ಯಕ್ತಿಗಳು, ಪ್ರತಿವರ್ಷ ಹಲವಾರು ಬಾರಿ ಧರ್ಮಸ್ಥಳ ಮಂಜುನಾಥನ ದೇವಸ್ಥಾನಕ್ಕೆಂದು ಹೋಗಿ ಬರುತ್ತಾರೆ. ಅವರ ಭಕ್ತಿಗೆ ಬಂಗ ತರುವಂತಹ ಅಕ್ಷಮ್ಯ ಅಪರಾಧವೊಂದಿದೆ - ಅದೇನೆಂದರೆ, SIT ಯು ನಡೆಸುತ್ತಿರುವ ತನಿಖೆಯಲ್ಲಿ ಆರೋಪಿಯ ಸ್ಥಾನದಲ್ಲಿರುವ ದೇವಸ್ಥಾನದ ಆಡಳಿತಾಧಿಕಾರಿಗಳ ರಕ್ಷಣೆಗೆಂದು ದೇವಸ್ಥಾನವದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೆಲವು ಹಿತಾಸಕ್ತಿಗಳ ವಿರುಧ್ದ ದಾವೆಯಲ್ಲಿ ದೂರಿರುತ್ತಾರೆ.
ಸದ್ಯದ SIT ರಚನೆಯ ಆದೇಶ, ಅದರ ಹಿಂದಿನ ದೂರುದಾರ ಭೀಮನ ದೂರು, ಪ್ರಥಮ ವರ್ತಮಾನ ವರದಿ ಮತ್ತು ಇತರೆ ದೂರುಗಳನ್ನೆಲ್ಲಾ ದಾವೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಈ ಇಬ್ಬರು ಮಂಜುನಾಥ ಸ್ವಾಮಿಯ ಭಕ್ತರು, ತಮ್ಮ ದೇವರು ಮತ್ತು ದೇವಾಲಯವನ್ನು ಯಾವುದೇ ಮನುಷ್ಯ ವ್ಯಕ್ತಿಯ ವಿರುದ್ಧದ ಆರೋಪದ ನಿರಾಕರಣೆಗೆ ಬಳಸಿಕೊಳ್ಳದಂತೆ ನಿರ್ಬಂಧ ಹೇರಬೇಕೆಂದು ಕೋರಿರುತ್ತಾರೆ.
ದಾವೆಯಲ್ಲಿ ಸುವರ್ಣ ನ್ಯೂಸ್, ರಿಪಬ್ಲಿಕ್ ಕನ್ನಡ, ವಸಂತ್ ಗಿಳಿಯಾರ್ ಮತ್ತು ಹೆಸರಿಸದ ಅಸಂಖ್ಯಾತ ಪ್ರತಿವಾದಿಗಳನ್ನು(ಅಶೋಕ್ ಕುಮಾರ್) ಪ್ರತಿವಾದಿಗಳನ್ನಾಗಿ ಸೇರಿಸಲಾಗಿದೆ.
ವಸಂತ್ ಗಿಳಿಯಾರ್ ಎನ್ನುವ ವ್ಯಕ್ತಿಯು ಮಾಧ್ಯಮ ಸಂದರ್ಶನದಲ್ಲಿ ದೇವಸ್ಥಾನದ ಆಡಳಿತಾಧಿಕಾರಿಗಳ ವಿರುದ್ಧದ ಆರೋಪವು ದೇವಾಸ್ಥಾನದ ವಿರುದ್ಧದ ಆರೋಪವೆಂದು ಪ್ರತಿಪಾದಿಸಿರುವ ತುಣುಕುಗಳನ್ನು ದಾವೆಯಲ್ಲಿ ನೀಡಲಾಗಿದೆ ಮತ್ತು, ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಭಾವಚಿತ್ರಕ್ಕೆ ಧರ್ಮಕಲಹ ತರುವಂತಹ ಸಲ್ಲದ ಹೇಳಿಕೆಗಳನ್ನು ಸೇರಿಸಿರುವುದರಿಂದ ಆತ ಎದುರಿಸುತ್ತಿರುವ FIR, ಮೊನ್ನೆಯಷ್ಟೇ ಧರ್ಮಸ್ಥಳದ ಅಪರಾಧಗಳ ತನಿಖೆಯನ್ನು ಹಿಂದೂ-ಮುಸಲ್ಮಾನ ನಡುವಿನ ಸಂಘರ್ಷವೆಂದು ಪ್ರತಿಪಾದಿಸಿದಕ್ಕಾಗಿ ದಾಖಲಾದ ಮತ್ತೊಂದು FIR ಮತ್ತು ಧರ್ಮಸ್ಥಳದ SIT ತನಿಖೆಯನ್ನು ವಿರೋಧಿಸಲು ಮಂಜುನಾಥ ಸ್ವಾಮಿಯ ಭಕ್ತರು ಶಸ್ತ್ರಸಜ್ಜಿತರಾಗಬೇಕೆಂದು ಮಾಧ್ಯಮದಲ್ಲಿ ಆತ ನೀಡಿರುವ ಕರೆಯ ತುಣುಕನ್ನು ದಾವೆಯಲ್ಲಿ ಸೇರಿಸಲಾಗಿದೆ.
ದಾವೆ ಸಂಖ್ಯೆ 5813/2025. ವಾದವನ್ನು ಆಲಿಸಿದ ಮಾನ್ಯ ನ್ಯಾಯಧೀಶರಾದ ಮೊಹಮ್ಮದ್ ಮೊಯಿನುದ್ದೀನ್ ರವರು ಪ್ರತಿವಾದಿಗಳಿಗೆ 14 ಆಗಸ್ಟ್ ರಂದೇ ತುರ್ತು ನೋಟೀಸ್ ಜಾರಿ ಮಾಡಿರುತ್ತಾರೆ. ಆಗಸ್ಟ್ 23 ರಂದು ಮಧ್ಯಂತರ ತಡೆಯಾಜ್ಞೆಯ ಕುರಿತು ನಿರ್ಧರಿಸಲಿದ್ದಾರೆ.
ಇಂತಿ,
ಯಶಸ್ ಬಿ ಕೆ
ವಕೀಲ
ಮೊ.ಸಂ. 8904662055
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ