ವಿಜಯಪುರ, 15 ಆಗಸ್ಟ್ (ಹಿ.ಸ.) :
ಆ್ಯಂಕರ್ : ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಆಸ್ಪತ್ರೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶುಕ್ರವಾರದಿಂದ ಪ್ರತಿನಿತ್ಯ ಬಿ.ಎಲ್.ಡಿ.ಇ.ಸಂಸ್ಥೆಯ ಎ.ವ್ಹಿ.ಎಸ್ ಆಸ್ಪತ್ರೆಯಲ್ಲಿ ಉಚಿತ ಯೋಗ ತರಬೇತಿ ಪ್ರಾರಂಭವಾಗಿದೆ.
ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನೆರವೇರಿಸಿದರು. ಇದಾದ ಬಳಿಕ ಆಸ್ಪತ್ರೆಯ ಸ್ವಸ್ತವೃತ್ತ ವಿಭಾಗದ ವತಿಯಿಂದ ಹಳೆಯ ವಿದ್ಯಾರ್ಥಿ ಮತ್ತು ವೈದ್ಯರು ಈ ಯೋಗ ಶಿಬಿರಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಅಶೋಕ ಪಾಟೀಲ, ಜಗತ್ತಿನ ಪ್ರತಿಯೊಂದು ಜೀವರಾಶಿಗೆ ಆರೋಗ್ಯ ಭಾಸ್ಕರನಂತೆ ಜ್ಞಾನ ಸುಧೆಯಾದ ಆಯುರ್ವೇದ ಶಾಸ್ತ್ರ ಜನಸಾಮಾನ್ಯರ ಸಧೃಡ ಆರೋಗ್ಯಕ್ಕೆ ಸಂಜೀವಿನಿಯಾಗಿದೆ. ಸಧೃಡ ಸಮಾಜದಿಂದಲೇ ಸಶಕ್ತ ಭಾರತ ಸಮೃದ್ಧ ಭಾರತ ನಿರ್ಮಿಸಬಹುದು. ಈಗ ಪ್ರಾರಂಭಿಸಲಾಗಿರುವ ಯೋಗ ತರಬೇತಿ ಬಾನುವಾರ ಮತ್ತು ಸರಕಾರಿ ರಜೆ ದಿನಗಳನ್ನು ಹೊರತು ಪಡಿಸಿ ಉಳಿದ ಎಲ್ಲ ದಿನಗಳಲ್ಲಿ ಪ್ರತಿದಿನ ಬೆಳಿಗ್ಗೆ 7 ರಿಂದ 8 ಗಂಟೆಯವರೆಗೆ ನಡೆಯಲಿದೆ. ಎಲ್ಲರೂ ಈ ಯೋಗ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಅನುಭವಿ ಯೋಗಗುರುಗಳ ಮಾರ್ಗದರ್ಶನದಲ್ಲಿ ಸರಳ ಮತ್ತು ಪ್ರಾಯೋಗಿಕವಾಗಿ ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನ ವಿಧಾನಗಳನ್ನು ಕಲಿಸಿಕೊಡಲಾಗುತ್ತದೆ. ದೇಹ ಮತ್ತು ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ದಿನನಿತ್ಯದ ಒತ್ತಡವನ್ನು ಕಡಿಮೆ ಮಾಡಲು ಈ ಶಿಬಿರ ಪ್ರಯೋಜನವಾಗಿದೆ ಎಂದು ಅವರು ಹೇಳಿದರು.
ಇದೇ ವೇಳೆ ನಾನಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು. ಅಲ್ಲದೇ, ಸ್ವಾತಂತ್ರ್ಯ ಯೋಧರನ್ನು ಸ್ಮರಿಸುವ ಮತ್ತು ಯುವ ಸಬಲಿಕರಣದ ಅಂಗವಾಗಿ ಯುವ ಜನಾಗಂಕ್ಕೆ ವ್ಯಸನಮುಕ್ತ ಸಂದೇಶ ನೀಡುವ ನೃತ್ಯ ರೂಪಕಗಳನ್ನು ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande