ಕೊಪ್ಪಳ, 14 ಆಗಸ್ಟ್ (ಹಿ.ಸ.) :
ಆ್ಯಂಕರ್ : ಅಪ್ರಾಪ್ತ ವಯಸ್ಸಿನ ಪರಿಶಿಷ್ಟ ಪಂಗಡಕ್ಕೆ ಸೇರಿದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ರಾಜಾಸಾಬ ಹಳ್ಳಿಕೇರಿ ಇತನ ಮೇಲಿನ ಆರೋಪ ಧೃಡಪಟ್ಟಿದೆ ಎಂದು ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ (ಪೋಕ್ಸೊ) ಇವರು ಅಪರಾಧಿಗೆ ಶಿಕ್ಷೆ ವಿಧಿಸಿರುತ್ತಾರೆ.
ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ರಾಜಾಸಾಬ ಹಳ್ಳಿಕೇರಿ ಇತನು ಬಾಧಿತಳಿಗೆ ಪರಿಚಯ ಮಾಡಿಕೊಂಡು ಸಲುಗೆಯಿಂದ ಮಾತನಾಡಿಸುತ್ತ ಪ್ರೀತಿಸುವುದಾಗಿ ಹೇಳಿದ್ದು ನೀನು ಪ್ರೀತಿಸದಿದ್ದರೆ ಸಾಯುವುದಾಗಿ ಹೆದರಿಕೆ ಹಾಕಿರುತ್ತಾನೆ. ಹೀಗೆ ಸುಮಾರು ವರ್ಷಗಳಿಂದ ಕದ್ದು ಮುಚ್ಚಿ ಮಾತನಾಡುತ್ತ ವಿಷಯವನ್ನು ಯಾರಿಗೂ ಹೇಳದಂತೆ ತಾಕೀತು ಮಾಡಿದ್ದು, ಈ ವಿಷಯ ಬಾಧಿತಳ ಮನೆಯವರಿಗೆ ಗೊತ್ತಾಗಿ ಬುದ್ದಿವಾದ ಹೇಳಿದರೂ ಕೇಳದೇ ದಿ: 31-01-2022 ರ ರಾತ್ರಿ 7-30 ಗಂಟೆ ಸುಮಾರಿಗೆ ಅಳವಂಡಿಯ ಕಾಲೇಜ ಹತ್ತಿರ ಆರೋಪಿತನು ಬಾಧಿತಳನ್ನು ಕರೆಯಿಸಿಕೊಂಡು ಓಡಿ ಹೋಗಿ ಮದವೆಯಾಗೋಣ ಎಂದು ಪುಸಲಾಯಿಸಿ ಮೋಟಾರ ಸೈಕಲ್ ಮೇಲೆ ತಳಕಲ್ ಗ್ರಾಮಕ್ಕೆ ಕರೆದುಕೊಂಡು ಹೋಗಿ ಅಲ್ಲಿನ ಮುಸ್ಲಿಂ ದರ್ಗಾದ ಮುಂದೆ ಬಾಧಿತಳು ಅಪ್ರಾಪ್ತಳು ಎಂದು ತಿಳಿದಿದ್ದರೂ ತಾಳಿ ಕಟ್ಟಿ ಬಾಲ್ಯ ವಿವಾಹವಾಗಿರುತ್ತಾನೆ. ಅಲ್ಲಿಂದ ನಿಟ್ಟಾಲಿ ಗ್ರಾಮಕ್ಕೆ ಹೋಗಿ ರಾತ್ರಿಯಾಗಿದ್ದರಿಂದ ಅಲ್ಲಿನ ಬಸ್ ನಿಲ್ದಾಣದಲ್ಲಿ ಮಲಗಿಕೊಂಡು ಭಾನಾಪುರಕ್ಕೆ ಬಂದು ಮೋಟಾರ ಸೈಕಲ್ ಬಿಟ್ಟು ರೇಲ್ವೆ ಹಾಗೂ ಬಸ್ ಮೂಲಕ ಮಂಗಳೂರಿನ ಸುಳ್ಯಕ್ಕೆ ಹೋಗುವಾಗ ಮಾರ್ಗ ಮಧ್ಯೆ ಬಾಧಿತಳ ಮಾವನಿಗೆ ಪೋನ್ ಮಾಡಿ ಬಾಧಿತಳನ್ನು ನನಗೆ ಕೊಟ್ಟು ಮದುವೆ ಮಾಡಿಕೊಡಬೇಕು ಇಲ್ಲದಿದ್ದರೆ ಹೆಣ ನೋಡಬೇಕಾಗುತ್ತದೆ ಎಂದು ಹೆದರಿಕೆ ಹಾಕಿರುತ್ತಾನೆ. ನಂತರ ಪೋನಿನಲ್ಲಿಯ ಸಿಮ್ ತೆಗೆದು ಬಿಸಾಕಿ ಸಾಕ್ಷಿ ಪುರಾವೆ ನಾಶಪಡಿಸಿರುತ್ತಾನೆ. ನಂತರ ಸುಳ್ಯದಲ್ಲಿ ಈ ಹಿಂದೆ ಕೆಲಸ ಮಾಡಿದ ಸಿಮೆಂಟ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು ಅಂಗಡಿ ಹಿಂದಿರುವ ರೂಮಿನಲ್ಲಿ ವಾಸವಾಗಿದ್ದ ಅವಧಿಯಲ್ಲಿ ರಾತ್ರಿ ಸಮಯದಲ್ಲಿ ಆರೋಪಿತನು ಬಾಧಿತಳ ಮೇಲೆ 3 ಸಲ ಅತ್ಯಾಚಾರ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಅಳವಂಡಿ ಪೋಲಿಸ ಠಾಣೆಯ ಶಿಲ್ಪಾ ಶೆಟ್ಟರ ಪಿಎಸ್‍ಐ ಇವರು ದೂರು ಸ್ವೀಕರಿಸಿ ಪ್ರಥಮ ಹಂತದ ತನಿಖೆಯನ್ನು ನಿರ್ವಹಿಸಿ, ಗೀತಾ ಬೆನಹಾಳ ಡಿಎಸ್‍ಪಿ ಕೊಪ್ಪಳ ಇವರು ಮುಂದಿನ ತನಿಖೆಯನ್ನು ನಿರ್ವಹಿಸಿ ಆರೋಪಿತನ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಶಿವಕುಮಾರ ಸಿಎಚ್‍ಸಿ ಡಿಎಸ್‍ಪಿ ಕಛೇರಿ ಇವರು ತನಿಖಾ ಸಹಾಯಕ ಕರ್ತವ್ಯ ನಿರ್ವಹಿಸಿರುತ್ತಾರೆ.
ಈ ಪ್ರಕರಣವು ಸ್ಪೇ.ಎಸ್‍ಸಿ (ಪೋಕ್ಸೊ) ಸಂ: 15/2022ರಲ್ಲಿ ದಾಖಲಾಗಿದ್ದು, ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ಆರೋಪಿತನ ಮೇಲಿನ ಆರೋಪಣೆಗಳು ಸಾಭೀತಾಗಿದ್ದರಿಂದ 20 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ. 10,000 ಗಳ ದಂಡವನ್ನು ಭರಿಸುವಂತೆ ಆದೇಶಿಸಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ (ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶರಾದ ಕುಮಾರ ಡಿ.ಕೆ ಅವರು ದಿ: 06-08-2025 ರಂದು ತೀರ್ಪು ಹೊರಡಿಸಿರುತ್ತಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಅವರು ಪ್ರಕರಣ ನಡೆಸಿ ವಾದ ಮಂಡಿಸಿದ್ದರು. ಅಳವಂಡಿ ಪೋಲಿಸ ಠಾಣೆಯ ಸಿಬ್ಬಂದಿ ರಾಘವೇಂದ್ರ ಅವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರಪಡಿಸುವಲ್ಲಿ ಸಾಕಷ್ಟು ಸಹಕರಿಸಿರುತ್ತಾರೆ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರ ಕಛೇರಿಯ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್