ನವದೆಹಲಿ, 13 ಆಗಸ್ಟ್ (ಹಿ.ಸ.) :
ಆ್ಯಂಕರ್ : ಧರ್ಮಸ್ಥಳ ವಿಚಾರದಲ್ಲಿ ಸೂಕ್ಷ್ಮವಾಗಿ ವರ್ತಿಸಬೇಕಿದ್ದ ರಾಜ್ಯ ಸರ್ಕಾರ ಅತ್ಯಂತ ಬೇಜವಾಬ್ದಾರಿತನದಿಂದ ನಡೆದುಕೊಂಡಿದೆ. ಏನು ಸಿಗದಿರುವುದಕ್ಕೆ ಮುಖ್ಯಮಂತ್ರಿ ಈಗ ವರಸೆ ಬದಲಿಸುತ್ತಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕಾಂಗ ಸಭೆಯಲ್ಲಿ ಧರ್ಮಸ್ಥಳ ತನಿಖೆಯಲ್ಲಿ ಸರ್ಕಾರದ ಪಾತ್ರವಿಲ್ಲ ಎಂದಿರುವ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಸಚಿವರು, ಎಸ್ಐಟಿ ರಚಿಸಿದ್ದು ತಾವೇ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಎಸ್ಐಟಿ ರಚಿಸಿ ತನಿಖೆಗೆ ಆದೇಶಿಸಿದ ಮುಖ್ಯಮಂತ್ರಿ ಈಗ ಸರ್ಕಾರದ ಪಾತ್ರವಿಲ್ಲವೆಂದು ಉಲ್ಟಾ ಹೊಡೆಯುತ್ತಿದ್ದಾರೆ. ಪರ-ವಿರೋಧ ಚರ್ಚೆಯ ನಡುವೆಯೇ ತರಾತುರಿಯಲ್ಲಿ ಎಸ್ಐಟಿ ರಚಿಸಿ ಉತ್ಖನನಕ್ಕೆ ಆದೇಶ ನೀಡಿದ್ದು ತಾವೇ ಅಲ್ಲವೇ? ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ಧರ್ಮಸ್ಥಳದ 13 ಉತ್ಖನನ ಮಾಡಿದ ಜಾಗಗಳಲ್ಲಿ ಈವರೆಗೂ ಮಣ್ಣು ಅಗೆದಿದ್ದೊಂದೇ ಬಂತು. ಅನಾಮಿಕ ಆರೋಪಿಸಿದಂತೆ ಏನೊಂದೂ ಗುರುತರ ಸಾಕ್ಷಿ, ಶವಗಳ ಅವಶೇಷ ಸಿಗದಾಯಿತು. ಹೀಗಾಗಿ ಮುಖ್ಯಮಂತ್ರಿ ಈಗ ತಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆಂಬ ಕಾರಣಕ್ಕೆ ʼಧರ್ಮಸ್ಥಳ ತನಿಖೆಯಲ್ಲಿ ಸರ್ಕಾರದ ಪಾತ್ರವಿಲ್ಲ' ಎನ್ನುತ್ತಿದ್ದಾರೆಂದು ಸಚಿವ ಜೋಶಿ ಟೀಕಿಸಿದ್ದಾರೆ.
ಧರ್ಮಸ್ಥಳ ಪ್ರಕರಣದಲ್ಲಿ ಮುಖ್ಯಮಂತ್ರಿ ಪಾತ್ರವಿಲ್ಲದೆ ಎಸ್ಐಟಿ ರಚಿಸಲಾಯಿತೆ ಎಂದು ಪ್ರಶ್ನಿಸಿಸಿರುವ ಜೋಶಿ, ಇಷ್ಟೆಲ್ಲ ಹೈಡ್ರಾಮಾ ಮಾಡುವ ಬದಲು ಸರಿಯಾಗಿ ಪೊಲೀಸ್ ತನಿಖೆ ನಡೆಸಬಹುದಿತ್ತು. ಆದರೆ ಅದೇನೋ ಅಗೆದು ಗುಡ್ಡೆ ಹಾಕುವ ಕೆಲಸ ಮಾಡಿದ್ದಾರೆ ಎಂದು ಸರ್ಕಾರದ ವಿರುದ್ಧ ಹರಿ ಹಾಯ್ದಿದ್ದಾರೆ.
ಧರ್ಮಸ್ಥಳಕ್ಕೆ ತಲೆಮಾರಿನ ಇತಿಹಾಸವಿದೆ. ಈ ಪವಿತ್ರ ಕ್ಷೇತ್ರಕ್ಕೆ ಪ್ರತಿ ದಿನ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಆದರೆ ರಾಜ್ಯ ಸರ್ಕಾರ ಜನರ ನಂಬಿಕೆ ವಿಚಾರದಲ್ಲಿ ಆಟವಾಡುತ್ತಿದೆ. ಅತ್ಯಂತ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದ್ದು, ತೀವ್ರ ಖಂಡನೀಯ ಎಂದಿದ್ದಾರೆ.
ದಟ್ಟಾರಣ್ಯ ಪ್ರದೇಶದ ನೇತ್ರಾವತಿ ಸ್ನಾನಘಟ್ಟದ 13 ಭಾಗಗಳಲ್ಲಿ ಶವಗಳನ್ನು ಹೂತು ಹಾಕಿದೆ ಎಂದಿರುವ ಅನಾಮಿಕನ ಆರೋಪದ ಬಗ್ಗೆ ಪರ-ವಿರೋಧ ಚರ್ಚೆ ನಡುವೆಯೇ ಎಸ್ಐಟಿ ರಚಿಸಿ, ಈಗ ಉತ್ಖನನ ಜಾಗದಲ್ಲಿ ಏನೂ ಸಿಗದಿದ್ದರಿಂದ ಧರ್ಮಸ್ಥಳ ತನಿಖೆಯಲ್ಲಿ ಸರ್ಕಾರದ ಪಾತ್ರವಿಲ್ಲ ಎನ್ನುತ್ತಿರುವುದು ನಿಜಕ್ಕೂ ದುರಂತ ಹಾಗೂ ಖಂಡನೀಯ ಎಂದು ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa