ನವದೆಹಲಿ, 12 ಆಗಸ್ಟ್ (ಹಿ.ಸ.) :
ಆ್ಯಂಕರ್ : ಸತ್ಯ ಹೇಳಿದ್ದಕ್ಕೆ ಕಾಂಗ್ರೆಸ್ ಪಕ್ಷ ಇಂದು ಒಬ್ಬ ಎಸ್ಟಿ ನಾಯಕನನ್ನು ಕತ್ತು ಹಿಡಿದು ಹೊರ ದಬ್ಬಿದ್ದು, ಇದು ಅತ್ಯಂತ ಖಂಡನೀಯ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನವದೆಹಲಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿದ ಸಚಿವರು, ಕರ್ನಾಟದಕಲ್ಲಿ ಕೆ.ಎನ್.ರಾಜಣ್ಣ ಎಸ್ಟಿ ಸಮುದಾಯದ ಒಬ್ಬ ಹಿರಿಯ ನಾಯಕರು. ರಾಹುಲ್ ಗಾಂಧಿ ಅವರ ʼಮತಗಳ್ಳತನʼ ಆರೋಪ ಸಂಬಂಧ ರಾಜಣ್ಣ ಇರುವ ಸತ್ಯವನ್ನು ಹೇಳಿದ್ದರು. ಆ ಕಾರಣಕ್ಕೇ ಅವರನ್ನೀಗ ಹೊರ ದಬ್ಬಲಾಗಿದೆ ಎಂದು ವಿಷಾದಿಸಿದರು.
ಕಾಂಗ್ರೆಸ್‌ನಲ್ಲಿ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿರುವುದು ರಾಹುಲ್ ಗಾಂಧಿ ಅಹಂಕಾರಕ್ಕೆ ನಿದರ್ಶನವಾಗಿದೆ ಎಂದು ಆರೋಪಿಸಿದ ಸಚಿವರು, ರಾಜಣ್ಣ ಮಾಡಿದ ತಪ್ಪೇನು? ಎಂಬ ಬಗ್ಗೆ ಇಡೀ ಕಾಂಗ್ರೆಸ್ ಪಕ್ಷ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದಿದ್ದಾರೆ.
ರಾಹುಲ್ ಗಾಂಧಿ ಅವರ ಮತಗಳ್ಳತನ ಆರೋಪ ಕುರಿತಂತೆ ರಾಜಣ್ಣ ಸರಿಯಾಗೇ ಹೇಳಿದ್ದಾರೆ. ʼಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ತಯಾರಿ ನಡೆದಾಗ ನಮ್ಮ ಸರ್ಕಾರವೇ ಇತ್ತು. ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರಿಂದ ಹಿಡಿದು ಎಲ್ಲಾ ಅಧಿಕಾರ ವರ್ಗ ನಮ್ಮವರೇ ಇದ್ದರು ಮತ್ತು ಚುನಾವಣಾ ಆಯೋಗ ಕೊಟ್ಟ ಮತದಾರರ ಪಟ್ಟಿಯನ್ನು ನಾವು ನೋಡಿಕೊಳ್ಳಬೇಕಿತ್ತುʼ ಎಂದಿದ್ದಾರೆ. ಇದರಲ್ಲಿ ಅವರ ತಪ್ಪೇನಿದೆ? ಎಂದು ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದರು.
ಕೆ.ಎನ್.ರಾಜಣ್ಣ 72 ವರ್ಷದ ಹಿರಿಯರು ಮತ್ತು ಎಸ್ಟಿ ಸಮುದಾಯದ ಪ್ರಬಲ ರಾಜಕಾರಣಿ. ಇಂಥವರನ್ನು ವಜಾಗೊಳಿಸಿರುವುದು ಕಾಂಗ್ರೆಸ್ ಪಕ್ಷ ಪರಿಶಿಷ್ಟರನ್ನು, ಸತ್ಯವಂತರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ನಿದರ್ಶನ ಇದಾಗಿದೆ.
ರಾಹುಲ್ ಗಾಂಧಿ ಅವರ ಅಹಂಕಾರದಿಂದಾಗಿ ರಾಜಣ್ಣ ಸತ್ಯ ಹೇಳಿದ್ದಕ್ಕೆ ಶಿಕ್ಷೆ ಅನುಭವಿಸುವಂತಾಗಿದೆ. ನಿಜಕ್ಕೂ ಇದು ದುರಂತ ಮತ್ತು ಖಂಡನೀಯ. ರಾಹುಲ್ ಗಾಂಧಿ ತಮ್ಮ ನಡೆ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಸಚಿವ ಜೋಶಿ ಹೇಳಿದರು.
ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರ ಬಳಿ ಇರುವುದೆಲ್ಲ ಸುಳ್ಳಿನ ಕಂತೆಗಳು. ರಾಜ್ಯ ಮುಖ್ಯ ಚುನಾವಣಾ ಆಯುಕ್ತರು ಕೊಟ್ಟ ದಾಖಲೆಗಳಲ್ಲ. ದೇಶದ ಜನರಿಗೆ ರಾಹುಲ್ ಗಾಂಧಿ ಸುಳ್ಳು ಹೇಳಿದ್ದಾರೆ ಎಂದು ಜೋಶಿ ಆರೋಪಿಸಿದರು.
ಕರ್ನಾಟಕದಲ್ಲಿ ಚುನಾವಣಾ ಆಯೋಗ 27 ಅಕ್ಟೋಬರ್‌ಗೆ ಕರುಡು ವೋಟರ್ ಲೀಸ್ಟ್ ಕೊಟ್ಟಿದೆ. ಜನವರಿ ತಿಂಗಳಲ್ಲಿ ಅಂತಿಮ ಮತದಾರರ ಪಟ್ಟಿ ಕೊಟ್ಟಿದೆ. ಹಾಗಿದ್ದರೂ ಕಾಂಗ್ರೆಸ್ ಪಕ್ಷ ಯಾವುದೇ ಒಂದು ಆಕ್ಷೇಪಣೆಯನ್ನೂ ಸಲ್ಲಿಸಿಲ್ಲ. ಎಲ್ಲಾ ಅಭ್ಯರ್ಥಿಗಳು, ಪಕ್ಷದವರು ಅದನ್ನು ಸ್ವೀಕರಿಸಿದ್ದಾರೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ಇನ್ನು ಡೋರ್ ನಂಬರ್ 35ರ ಒಂದೇ ಕೊಠಡಿಯ ಮನೆಯಿಂದ 80 ಜನ ಮತ ಚಲಾಯಿಸಿದ್ದಾರೆ ಎಂಬ ಆರೋಪ ರಾಹುಲ್ ಗಾಂಧಿ ಮಾಡಿದ್ದಾರೆ. ಆದರೆ, ಇವರಿಗೆ ವಾಸ್ತವದ ಅರಿವೇ ಇಲ್ಲ. ಸತ್ಯಾಂಶ ಏನೆಂಬುದನ್ನು ತಿಳಿಯುವ ಕನಿಷ್ಠ ಪ್ರಯತ್ನವನ್ನೂ ಮಾಡಿಲ್ಲ ಎಂದು ಜೋಶಿ ಟೀಕಿಸಿದರು.
35ʼರಲ್ಲಿ ಇರುವುದು ಒಂದೇ ಒಂದು ರೂಮ್ ಅಲ್ಲ. ಒಂದೇ ನಂಬರ್‌ನಲ್ಲಿ ಚಿಕ್ಕ ಚಿಕ್ಕ ಮನೆಗಳಿರುವ ಒಂದು ದೊಡ್ಡ ವಟಾರ. ಅಲ್ಲಿನ ವಿವಿಧ ಕುಟುಂಬಗಳಲ್ಲಿ 80 ಜನ ಮತದಾರರಿದ್ದರು. ಇದನ್ನು ಸ್ವತಃ ಆ ಕಟ್ಟಡದ ಮಾಲೀಕರೂ ಸ್ಪಷ್ಟಪಡಿಸಿದ್ದಾರೆ. ರಾಹುಲ್ ಗಾಂಧಿ ಇಂಥ ಸತ್ಯ ಸಂಗತಿ ಮರೆ ಮಾಚಿ ದೇಶದ ಜನರೆದುರು ಬರೀ ಸುಳ್ಳನ್ನೇ ಪ್ರದರ್ಶಿಸುತ್ತಿದ್ದಾರೆ ಎಂದು ಸಚಿವ ಜೋಶಿ ಆರೋಪಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa