ಬೆಂಗಳೂರು, 11 ಆಗಸ್ಟ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ತಮ್ಮ ವಿವಾದತ್ಮಕ ಹೇಳಿಕೆ ಹಿನ್ನೆಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಲೋಕ ಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರ ಸೂಚನೆಯ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಪುತ್ರ ರಾಜೇಂದ್ರ ಮುಖಾಂತರ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ರಾಜೀನಾಮೆಗೆ ಕಾರಣ : ಆ. 8ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಹುಲ್ ಗಾಂಧಿ, ಚುನಾವಣಾ ಆಯೋಗದ ವಿರುದ್ಧ “ಮತಗಳ್ಳತನ” ಆರೋಪ ಮಾಡಿದರು. ಈ ಹೇಳಿಕೆಗೆ ವಿರುದ್ಧವಾಗಿ ರಾಜಣ್ಣ, “ನಾವು ಮೊದಲು ಮತಪಟ್ಟಿ ಪರಿಶೀಲಿಸದೇ ಈಗ ಹೇಳುತ್ತಿರುವುದಕ್ಕೆ ನಮಗೆ ನಾಚಿಕೆ ಆಗಬೇಕು. ನಮ್ಮದೇ ಸರಕಾರ ಇರುವಾಗ ಮತಪಟ್ಟಿ ಸಿದ್ಧವಾಗಿತ್ತು, ಆಗೇನು ಕಣ್ಮುಚ್ಚಿ ಕುಳಿತಿದ್ದರಾ ಎಂದು ಪ್ರಶ್ನಿಸಿದ್ದರು.
ಈ ಹೇಳಿಕೆ ವಿಡಿಯೋ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ, ಬಿಜೆಪಿ ಅದನ್ನು ರಾಹುಲ್ ಗಾಂಧಿಗೆ ತಿರುಗೇಟು ನೀಡಲು ಬಳಸಿತು.
ವಿಡಿಯೋವನ್ನು ಎಐಸಿಸಿ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಹೈಕಮಾಂಡ್‌ಗೆ ಕಳುಹಿಸಿದರು. ಪರಿಶೀಲನೆ ನಡೆಸಿದ ನಂತರ, ವೇಣುಗೋಪಾಲ್ ರಾಹುಲ್ ಗಾಂಧಿಯವರ ಗಮನಕ್ಕೆ ತಂದಿದ್ದಾರೆ.
ಹೈಕಮಾಂಡ ತುರ್ತು ಕ್ರಮ : ವಿಡಿಯೋ ವೀಕ್ಷಿಸಿದ ರಾಹುಲ್ ಗಾಂಧಿ, ರಾಜಣ್ಣ ಮಾತನಾಡಿರುವುದು ತಮ್ಮ ಹೋರಾಟಕ್ಕೆ ಅವಮಾನಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ತಕ್ಷಣ ರಾಜೀನಾಮೆ ಪಡೆಯುವಂತೆ ಸೂಚಿಸಿದರು.
ಸುರ್ಜೇವಾಲಾ ಈ ಸಂದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರವಾನಿಸಿದರು. ಆದೇಶ ಬಂದ ಕೆಲವೇ ಗಂಟೆಗಳಲ್ಲಿ, ರಾಜಣ್ಣ, ಪುತ್ರ ರಾಜೇಂದ್ರ ಮೂಲಕ ರಾಜೀನಾಮೆ ಪತ್ರ ಸಲ್ಲಿಸಿದ್ದು. ಮುಖ್ಯಮಂತ್ರಿ ತಕ್ಷಣ ಅಂಗೀಕರಿಸಿ ರಾಜ್ಯಪಾಲರಿಗೆ ರವಾನಿಸಿದ್ದು ರಾಜ್ಯಪಾಲರು ರಾಜಣ್ಣ ರಾಜೀನಾಮೆ ಅಂಗೀಕರಿಸಿದ್ದಾರೆ.
ರಾಜಣ್ಣ ರಾಜೀನಾಮೆ ವಿಧಾನಸಭೆಯಲ್ಲಿ ಗದ್ದಲ : ರಾಜಣ್ಣ ರಾಜೀನಾಮೆಯ ವಿಚಾರ ಇಂದಿನಿಂದ ಆರಂಭವಾದ ಅಧಿವೇಶನದಲ್ಲಿ ಚರ್ಚೆಗೆ ಕಾರಣವಾಯಿತು.
ವಿಧಾನ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್, “ರಾಜೀನಾಮೆ ಕೊಟ್ಟು ಸಚಿವ ಸ್ಥಾನದಲ್ಲಿ ಹೇಗೆ ಕುಳಿತುಕೊಳ್ಳುತ್ತಾರೆ? ನಾಚಿಕೆ ಆಗಲ್ವಾ?” ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಸದಸ್ಯ ಸುನಿಲ್ ಕುಮಾರ್, “ಈಗ ಅವರನ್ನು ಏನೆಂದು ಸಂಬೋಧಿಸಬೇಕು?” ಎಂದು ಪ್ರಶ್ನಿಸಿದರು.
ಪ್ರತಿಪಕ್ಷ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜಣ್ಣ, “ನನಗೆ ಕಾನೂನು ಸಚಿವರು ಮಾತನಾಡಬೇಡ ಎಂದು ಹೇಳಿದ್ದಾರೆ. ಕೀಳುಮಟ್ಟದ ಮಾತು ಬೇಡ, ಕೀಳುಮಟ್ಟದ ಮಾತುಗಳನ್ನಾಡುವ ನಿಮಗೆ ನಾಚಿಕೆ ಆಗಬೇಕು” ಎಂದು ವಾಗ್ದಾಳಿ ನಡೆಸಿದರು.
ಪಕ್ಷದೊಳಗಿನ ಅಸಮಾಧಾನ ಮತ್ತು ಹಿನ್ನೆಲೆ : ಕೆ.ಎನ್. ರಾಜಣ್ಣ, ಸಿದ್ದರಾಮಯ್ಯ ಅವರ ಆಪ್ತರಾಗಿದ್ದು, ಕಾಂಗ್ರೆಸ್‌ನಲ್ಲಿ ಐದು ದಶಕಗಳ ಸೇವೆ ಸಲ್ಲಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರ ಹೇಳಿಕೆಗಳು ಪಕ್ಷದ ಒಗ್ಗಟ್ಟಿಗೆ ಧಕ್ಕೆ ತಂದು, ಹೈಕಮಾಂಡ್‌ಗೆ ಮುಜುಗರ ಉಂಟು ಮಾಡಿವೆ. ಜೂನ್ 27, 2025ರಂದು ಅವರು “ಸೆಪ್ಟೆಂಬರ್ ನಂತರ ರಾಜಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಲಿವೆ” ಎಂದು ಹೇಳಿದ್ದು ಪಕ್ಷದೊಳಗೆ ಗೊಂದಲಕ್ಕೆ ಕಾರಣವಾಗಿತ್ತು.
ಈ ಬಾರಿ ಮತಗಳ್ಳತನ ವಿವಾದದಲ್ಲಿ, ತಮ್ಮದೇ ರಾಷ್ಟ್ರೀಯ ನಾಯಕನ ಹೇಳಿಕೆಗೆ ವಿರುದ್ಧವಾಗಿ ಮಾತನಾಡಿದ ರಾಜಣ್ಣ, ಕಾಂಗ್ರೆಸ್ ಹೈಕಮಾಂಡ್ ಕೋಪಕ್ಕೆ ಗುರಿಯಾಗಿದ್ದು ಅಗತ್ಯವಿದ್ದರೆ ಪಕ್ಷದಿಂದಲೇ ಉಚ್ಚಾಟನೆ ಮಾಡುವ ಎಚ್ಚರಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa