ಬೆಂಗಳೂರು, 08 ಜುಲೈ (ಹಿ.ಸ.) :
ಆ್ಯಂಕರ್ : ಭಾರತದ ಕೃಷಿ ವಲಯ ಕಳೆದೊಂದು ದಶಕದಲ್ಲಿ ಅಭೂತಪೂರ್ವ ಬೆಳವಣಿಗೆ ಸಾಧಿಸಿದೆ. ಉತ್ಪಾದನೆಯಿಂದ ರಫ್ತುವರೆಗೂ ತನ್ನ ಕದಂಬ ಬಾಹು ಚಾಚಿರುವ ಕೃಷಿ, ದೇಶದ ಆರ್ಥಿಕತೆ ಮತ್ತು ಔದ್ಯೋಗಿಕತೆಗೂ ವಿಶಿಷ್ಠ ಕೊಡುಗೆ ನೀಡುತ್ತ ಭಾರತವನ್ನು ಜಾಗತಿಕ ನಾಯಕತ್ವದತ್ತ ಕೊಂಡೊಯ್ಯುತ್ತಿದೆ.
ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್, ಫಸಲ್ ಬಿಮಾ, ಧನ ಧಾನ್ಯ, ಬೆಂಬಲ ಬೆಲೆ, ಹನಿ ನೀರಾವರಿ, ಆರ್ಥಿಕ ನೆರವು, ಯಂತ್ರೋಪಕರಣ ಖರೀದಿಗೆ ಸಬ್ಸಿಡಿಯಂತಹ ರೈತ ಪರ ಯೋಜನೆಗಳು, ಸಕಾಲಿಕವಾಗಿ ಬಿತ್ತನೆ ಬೀಜ, ಗೊಬ್ಬರ ಪೂರೈಕೆ ಮತ್ತು ಪ್ರದೇಶವಾರು ಬೆಳೆಗೆ ಉತ್ತೇಜನ, ಆಹಾರೋತ್ಪನ್ನಗಳ ಸಂಸ್ಕರಣೆ, ರಫ್ತು ಆದ್ಯತೆ ಹೀಗೆ ಅತ್ಯುಪಯುಕ್ತ ಕ್ರಮಗಳಿಂದಾಗಿ ಕಳೆದ 12 ವರ್ಷಗಳಲ್ಲಿ ದೇಶದ ಕೃಷಿ ವಲಯ ಮೌಲ್ಯವರ್ಧನೆಯಲ್ಲಿ ಮೂರುಪಟ್ಟು ಏರಿಕೆ ಕಂಡಿದೆ.
2012ರಿಂದ 2024ರವರೆಗೆ ಕೃಷಿ ಸಂಬಂಧಿತ ವಲಯಗಳಲ್ಲಿ ಮೂರುಪಟ್ಟು ಮೌಲ್ಯವರ್ಧನೆ (GVA) ಹೆಚ್ಚಾಗಿದೆ. ದೇಶದ ಶೇ.46ರಷ್ಟು ಜನರ ಬದುಕಿಗೆ ಕೃಷಿಯೇ ಮೂಲಾಧಾರವಾಗಿದ್ದು, ರಾಷ್ಟ್ರದ ಆರ್ಥಿಕ ಪ್ರಗತಿಗೆ ಬಂಡವಾಳವಾಗಿದೆ ಎಂಬುದನ್ನ ಕೇಂದ್ರ ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವೇ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ.
2012ರಲ್ಲಿ ₹1,500 ಸಾವಿರ ಕೋಟಿ ಮಟ್ಟದಲ್ಲಿದ್ದ ಕೃಷಿ ವಲಯದ ಒಟ್ಟು ಮೌಲ್ಯವರ್ಧನೆ (GVA) 2024ಕ್ಕೆ ಬರೋಬ್ಬರಿ ₹4,800 ಸಾವಿರ ಕೋಟಿಗೆ ಏರಿಕೆಯಾಗಿದೆ. 2023–2024ರ ಮಧ್ಯೆ ಶೇ.22ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಕೃಷಿ ವಲಯದ ಈ ಐತಿಹಾಸಿಕ ಬೆಳವಣಿಗೆ ದೇಶದ ಉತ್ಪಾದನಾ ವಲಯದ ಶಕ್ತಿ ಮತ್ತು ರೈತರ ಆದಾಯ ಹೆಚ್ಚಳಕ್ಕೆ ನಿದರ್ಶನವಾಗಿದೆ. ಇದೇ ಅವಧಿಯಲ್ಲಿ ಒಟ್ಟು ಉತ್ಪನ್ನದ ಮೌಲ್ಯ (GVO) ₹1,900 ಸಾವಿರ ಕೋಟಿಯಿಂದ ₹3,000 ಸಾವಿರ ಕೋಟಿಗೆ ಜಿಗಿದಿದ್ದು, ಬರೋಬ್ಬರಿ ಶೇ.55 ಪ್ರತಿಶತದಚ್ಟು ಏರಿಕೆ ಕಂಡಿರುವುದು ಸಂಪದ್ಭರಿತ ರಾಷ್ಟ್ರದ ಸಂಕೇತವಾಗಿದೆ.
ಭಾರತದ GDPಗೆ ಪ್ರಸ್ತುತ ಕೃಷಿ ವಲಯ ಶೇ.16ರಷ್ಟು ಕೊಡುಗೆ ನೀಡುತ್ತಿದೆಯಲ್ಲದೆ, ಶೇ.46ರಷ್ಟು ಜನಸಂಖ್ಯೆಗೆ ಆಹಾರ-ಆದಾಯ, ಉದ್ಯೋಗವನ್ನೂ ಕಲ್ಪಿಸಿದೆ. ಗ್ರಾಮೀಣ ಭಾಗದಲ್ಲಿ ಉತ್ಪನ್ನ, ಉದ್ಯೋಗ ಮಾತ್ರವಲ್ಲ ವ್ಯಾಪಾರ-ವಹಿವಾಟು ಮೂಲಕ ಹಳ್ಳಿಗರ ಭವಿಷ್ಯ ಸಹ ರೂಪಿಸುತ್ತಿದೆ.
ಆಹಾರ ಧಾನ್ಯೋತ್ಪಾದನೆ ಕೃಷಿ ವಲಯದ ಶಕ್ತಿಯಾಗಿದ್ದು, ಒಟ್ಟು GVO ಯಲ್ಲಿ ಬೆಳೆಗಳ ಪಾಲು ಶೇ.54ಕ್ಕಿಂತ ಹೆಚ್ಚಾಗಿದೆ. ಧಾನ್ಯಗಳಲ್ಲಿ ಭತ್ತ ಮತ್ತು ಗೋಧಿ ಒಟ್ಟಿಗೆ ಶೇ.85ರಷ್ಟು GVO ಪಾಲು ಹೊಂದಿವೆ. ಹಣ್ಣು ಮತ್ತು ತರಕಾರಿಗಳು ಶೇ.52ಕ್ಕೆ ಏರಿಕೆಯಾಗಿದ್ದು, ಇದೆಲ್ಲಾ ದೇಶದ ಆಹಾರೋತ್ಪನ್ನ ಚಟುವಟಿಕೆಯಲ್ಲಿ ಪ್ರಾಬಲ್ಯವನ್ನು ಎತ್ತಿ ತೋರಿಸುತ್ತಿದೆ.
ದೇಶದಲ್ಲಿ ಉತ್ತರ ಪ್ರದೇಶ ಕೃಷಿ ಸಂಬಂಧಿತ ವಲಯದ GVOಯಲ್ಲಿ ಶೇ.17ರಷ್ಟು ಕೊಡುಗೆ ನೀಡುತ್ತ ಅಗ್ರ ಸ್ಥಾನದಲ್ಲಿದ್ದರೆ, ಮಧ್ಯಪ್ರದೇಶ, ಪಂಜಾಬ್, ತೆಲಂಗಾಣ ಮತ್ತು ಹರಿಯಾಣ ರಾಜ್ಯಗಳು ಮುಖ್ಯ ಉತ್ಪಾದನಾ ಕೇಂದ್ರಗಳಾಗಿ ಹೊರಹೊಮ್ಮಿವೆ. ಈ ಐದು ರಾಜ್ಯಗಳು ದೇಶದ ಒಟ್ಟಾರೆ ಶೇ.53ರಷ್ಟು ಕೃಷಿ ಉತ್ಪಾದನೆಗೆ ಅನನ್ಯ ಕೊಡುಗೆ ನೀಡುತ್ತಿವೆ.
*ಹಣ್ಣು-ತರಕಾರಿ, ಹೂವಿನ ಕೃಷಿಗೆ ಹೊಸ ಸ್ಪರ್ಶ:* ಹಣ್ಣು-ತರಕಾರಿ, ಹೂವಿನ ಕೃಷಿಗೂ ಭಾರತ ಹೊಸ ಸ್ಪರ್ಶ ನೀಡಿದೆ. ದೇಶಿ ಮಾರುಕಟ್ಟೆ ಮಾತ್ರವಲ್ಲ ವಿದೇಶಗಳಲ್ಲೂ ಭಾರತದ ತರಕಾರಿ ಮತ್ತು ಹೂವಿನ ಪರಿಮಳ ಆಕರ್ಷಿಸಿದೆ. 2024ರಲ್ಲಿ ಬಾಳೆಹಣ್ಣು ವಹಿವಾಟು ಹಣ್ಣಿನ ರಾಜನನ್ನು ಮೀರಿಸಿದೆ. ₹47,000 ಕೋಟಿ ಮೌಲ್ಯದ ವಹಿವಾಟು ನಡೆದಿದೆ. ಹಣ್ಣಿನ ರಾಜ ಮಾವು ₹46,100 ಕೋಟಿ ಮೌಲ್ಯದ ವ್ಯಾಪಾರ ದಾಖಲಿಸಿದೆ. ತರಕಾರಿಗಳಲ್ಲಿ ಆಲೂಗಡ್ಡೆ 2012ರಲ್ಲಿ ₹21.3 ಸಾವಿರ ಕೋಟಿ, 2024ಕ್ಕೆ ₹37.2 ಸಾವಿರ ಕೋಟಿ GVO ತಲುಪಿದ್ದು, ಇದು ಗ್ರಾಹಕರ ಬೇಡಿಕೆಗೆ ತಕ್ಕಂತೆ ಕೃಷಿ ಮಾರುಕಟ್ಟೆ ಸಹ ಬದಲಾಗುತ್ತಿರುವುದನ್ನು ದೃಢಪಡಿಸುತ್ತಿದೆ. ಹೂವಿನ ಕೃಷಿ ಇದಕ್ಕಿಂತ ಹೆಚ್ಚಿನ ಆಶಾವಾದ ಮೂಡಿಸಿದೆ. 2012ರಲ್ಲಿ ₹17.4 ಸಾವಿರ ಕೋಟಿ ಇದ್ದ ಹೂವಿನ ಉತ್ಪಾದನಾ ಮೌಲ್ಯ 2024ಕ್ಕೆ ₹28.1 ಸಾವಿರ ಕೋಟಿಗೆ ಏರಿಕೆ ಕಂಡಿದೆ.
*ಪಶು ಸಂವರ್ಧನೆಗೆ ನವ ಚೈತನ್ಯ:* ಪಶು ಸಂಗೋಪನೆ, ಸಂವರ್ಧನೆ ಸಹ ಗ್ರಾಮೀಣ ಆರ್ಥಿಕತೆಯ ಶಕ್ತಿಯಾಗಿದೆ. 2012ರಲ್ಲಿ ₹4.88 ಲಕ್ಷ ಕೋಟಿ ಮೌಲ್ಯದ ಪಶು ಸಂಗೋಪನೆ, ಸಂವರ್ಧನೆ GDP 2024ರಲ್ಲಿ ₹9.19 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದರಲ್ಲಿ ಶೇ.66ರಷ್ಟು ಹಾಲಿನ ಪಾಲು ಹಾಗೂ ಶೇ.24ರಷ್ಟು ಮಾಂಸದ ಪಾಲಿದೆ. ಹೈಟೆಕ್ ಡೈರಿ ಘಟಕಗಳು, ಮಾಂಸ ಪ್ಯಾಕೇಜಿಂಗ್ ಘಟಕಗಳು ಹಾಗೂ ಪಶು ಆಧಾರಿತ ಉಪ ಉತ್ಪನ್ನಗಳ ರಫ್ತಿಗೆ ಬಾಗಿಲು ತೆರೆದಿದೆ.
*ಭಾರತದ ಅಭಿವೃದ್ಧಿ ಶಿಖರಕ್ಕೆ ಕೃಷಿ ಕೊಡುಗೆ:* ಸ್ವಾವಲಂಬಿ ಭಾರತದ ದೃಷ್ಟಿಕೋನಕ್ಕೆ ಕೃಷಿ ಕೂಡ ತನ್ನದೇ ಆದ ಶಕ್ತಿ ನೀಡುತ್ತಿದೆ. ಹೊಸ ನೀತಿಗಳು ಶೇ.50ಕ್ಕಿಂತ ಹೆಚ್ಚಿನ ರೈತರ ಖಾತೆಗಳಿಗೆ ನೇರ ಹಣ ವರ್ಗಾವಣೆ, ಇ-ನಾಮ್ ಮೂಲಕ ಮಾರುಕಟ್ಟೆಗೆ ನೇರ ಪ್ರವೇಶ, ಪಿಎಂ ಕೃಷಿ ಸಿಂಚಾಯ್ ಯೋಜನೆಗಳ ಅನುಷ್ಠಾನ ಇವೆಲ್ಲವೂ ಕೃಷಿ ವಲಯದ ಅನನ್ಯ ಬೆಳವಣಿಗೆಗೆ ಕಾರಣ.
ತಂತ್ರಜ್ಞಾನ ಆಧಾರಿತ ಕೃಷಿ, ಡ್ರೋನ್‌ನಿಂದ ಫರ್ಟಿಲೈಸರ್ ಸಿಂಪಡಣೆ, ಮಣ್ಣು ಪರೀಕ್ಷೆ, ಕೃಷಿ ಉತ್ಪನ್ನಗಳ ವಹಿವಾಟಿನಲ್ಲಿ ಡಿಜಿಟಲ್ ಸ್ಪರ್ಶ, ನವೀನ ಮಾದರಿ ಬೆಳೆಗಳ ಉತ್ಪಾದನೆ ಮತ್ತು ರೈತರ ಆದಾಯವನ್ನು ಗಗನಕ್ಕೇರಿಸಿವೆ. ಈ ಬೆಳವಣಿಗೆ ಭಾರತವನ್ನು ಆಹಾರ ಶಕ್ತಿಕೇಂದ್ರ ಮಾತ್ರವಲ್ಲದೇ ಭವಿಷ್ಯದಲ್ಲಿ ಅಭಿವೃದ್ಧಿಯ ಶಿಖರವನ್ನಾಗಿ ಸಹ ರೂಪಿಸುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa