ಬೆಂಗಳೂರು, 07 ಜುಲೈ (ಹಿ.ಸ.) :
ಆ್ಯಂಕರ್ : ಬೆಂಗಳೂರು ನಗರದ ಹೊರವಲಯದ ಸೋಲದೇವನಹಳ್ಳಿ ಪ್ರದೇಶದಲ್ಲಿ ಹುಡುಗಿಗೆ ಫೋನ್ ಮಾಡಿರುವ” ಕಾರಣಕ್ಕೆ ಯುವಕನೊಬ್ಬನಿಗೆ ಪುಂಡರ ಗುಂಪು ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಕುಶಾಲ್ ಎಂಬ ಯುವಕನನ್ನು ಅಪಹರಿಸಿ, ನಿರ್ಜನ ಪ್ರದೇಶದಲ್ಲಿರುವ ಕೆರೆಗೆ ಎಳೆದೊಯ್ಯಿ, ಬೆತ್ತಲೆ ಮಾಡಿ ನಂತರ ಗುಂಪುಹಲ್ಲೆ ನಡೆಸಲಾಗಿದೆ. ಅತ್ಯಂತ ಕ್ರೂರ ರೀತಿಯಲ್ಲಿ ಮರ್ಮಾಂಗಕ್ಕೆ ತುಳಿದು ಪೀಡನೆ ನಡೆಸಿದ್ದು, ಈ ದೃಶ್ಯವನ್ನು ವಿಡಿಯೋ ಮಾಡಿಕೊಂಡಿದ್ದಾರೆ.
ಪ್ರಾಥಮಿಕ ಮಾಹಿತಿಯಂತೆ, ಕೆಲವು ತಿಂಗಳುಗಳ ಹಿಂದೆ ಕುಶಾಲ್ ಹಾಗೂ ಒಬ್ಬ ಯುವತಿಯ ನಡುವೆ ಪ್ರೇಮ ಸಂಬಂಧವಿದ್ದು, ನಂತರ ಅದು ಮುರಿದು ಬಿದ್ದಿತ್ತು. ಬಳಿಕ ಯುವತಿ ಬೇರೊಬ್ಬರೊಂದಿಗೆ ಸಂಬಂಧ ಬೆಳೆಸಿದ್ದಾಳೆ ಎನ್ನಲಾಗುತ್ತಿದೆ. ಇದರಿಂದ ಉಗ್ರನಾದ ಕುಶಾಲ್, ಆಕೆಗೆ ಅಶ್ಲೀಲ ಮೆಸೆಜ್ ಕಳಿಸಿದ್ದಾನೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಯುವತಿಯ ಹೊಸ ಗೆಳೆಯ ಹಾಗೂ ಸ್ನೇಹಿತರ ತಂಡ ಕುಶಾಲ್ ನನ್ನು ಕರೆಯಿಸಿಕೊಂಡು, ಕಾರಿನಲ್ಲಿ ಅಪಹರಿಸಿ ಕೆರೆಗೆ ಎಳೆದೊಯ್ಯಿ ಹಲ್ಲೆ ನಡೆಸಿದೆ.
ಹಲ್ಲೆ ಮಾಡುವಾಗ, ಇದನ್ನು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಂತೆಯೇ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ.
ಘಟನೆ ಕುರಿತಂತೆ ಹೇಮಂತ್, ಯಶ್ವಂತ್, ಶಿವಶಂಕರ್ ಮತ್ತು
ಶಶಾಂಕ್ ಗೌಡ ಎಂಬುವವರನ್ನು ಸೋಲದೇವನಹಳ್ಳಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇನ್ನೂ ಹಲವು ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರ ಪತ್ತೆಗೆ ಪೋಲಿಸರು ಜಾಲ ಬೀಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa