ರಾಯಚೂರು, 06 ಜುಲೈ (ಹಿ.ಸ.) :
ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಘಟಕದ ಸಹಯೋಗದೊಂದಿಗೆ ಡೆಂಗ್ಯೂ ವಿರೋಧಿ ಮಾಸಾಚರಣೆಯು ಲಯನ್ಸ್ ಕ್ಲಬ್ ಶಾಲೆಯಲ್ಲಿ ನಡೆಯಿತು.
ಕೀಟ ಶಾಸ್ತ್ರಜ್ಞರಾದ ಗಂಗೋತಿ ಅವರು ಮಾತನಾಡಿ, ಜಗತ್ತಿನಲ್ಲಿ ಹಲವಾರು ಜಾತಿಯ ಸೊಳ್ಳೆಗಳಿವೆ. ಆದರೆ ಈಡೀಸ್ ಈಜಿಪ್ಟ್, ಅನಾಫಿಲಿಸ್, ಕ್ಯೂಲೆಕ್ಸ ಈ ಮೂರು ಸೊಳ್ಳೆಗಳು ಮನುಷ್ಯರನ್ನು ಹೆಚ್ಚಿಗೆ ಕಾಡುತ್ತವೆ. ಈಡೀಸ್ ಈಜಿಪ್ಟೈ ಎಂಬ ಹೆಣ್ಣು ಸೋಂಕಿತ ಸೊಳ್ಳೆ ಕಚ್ಚುವುದರಿಂದ ಡೆಂಗೆ ಜ್ವರ ಬರುತ್ತದೆ.
ನೀರಿನ ಪರಿಕರಗಳಲ್ಲಿ, ಘನ ತ್ಯಾಜ್ಯ ವಸ್ತುಗಳಲ್ಲಿ, ಮಳೆ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುತ್ತವೆ. ನಿಂತ ನೀರು ಸೊಳ್ಳೆ ಉತ್ಪತ್ತಿ ತಾಣಗಳಾಗಿವೆ ಎಂದು ತಿಳಿಸಿದರು.
ಈ ವೇಳೆ ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಸರೋಜ.ಕೆ ಅವರು ಮಾತನಾಡಿ, ಡೆಂಗೆ ಜ್ವರಕ್ಕೆ ಚಿಕಿತ್ಸೆ ಇರುವುದಿಲ್ಲ. ರೋಗದ ಲಕ್ಷಣಗಳ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದರು.
ಸ್ವಯಂರಕ್ಷಣಾ ವಿಧಾನ ಅನುಸರಿಸಬೇಕು. ಮೈ ತುಂಬಾ ಬಟ್ಟೆ ಧರಿಸಬೇಕು. ಸೊಳ್ಳೆ ಪರದೆ ಉಪಯೋಗಿಸಬೇಕು. ಕಿಟಿಕಿಗಳಿಗೆ ಜಾಲರಿ ಅಳವಡಿಸಬೇಕು, ಗುಡ್ ನೈಟ್, ಸೊಳ್ಳೆ ಹೊಡೆಯುವ ಬ್ಯಾಟ್ ಉಪಯೋಗಿಸಬೇಕು. ಮನೆಯಲ್ಲಿರುವ ನೀರಿನ ಪರಿಕರಗಳು ವಾರಕ್ಕೊಮ್ಮೆ ತೊಳೆದು ಒಣಗಿಸಬೇಕು. ಯಾವುದೇ ಜ್ವರ ಇರಲಿ ಹತ್ತಿರದ ಆಸ್ಪತ್ರೆಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದರು.
ಈ ವೇಳೆ ಮಲೇರಿಯಾ ತಾಂತ್ರಿಕ ಮೇಲ್ವಿಚಾರಕರಾದ ಸಂಧ್ಯಾ ನಾಯಕ ಅವರು ಮಾತನಾಡಿ, ಸಮುದಾಯದಲ್ಲಿ ಪ್ರತಿಯೊಬ್ಬರು ಮನೆಯ ಒಳಾಂಗಣ ಹಾಗೂ ಹೊರಾಂಗಣ ಸುತ್ತಲಿನ ಪರಿಸರದ ಸ್ವಚ್ಚತೆಗೆ ಆದ್ಯತೆ ಕೊಡಬೇಕು. ಉತ್ತಮ ಪರಿಸರವಿದ್ದಲ್ಲಿ ಆರೋಗ್ಯದಿಂದಿರಬಹುದು ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ದತ್ತಾತ್ರೇಯ, ದೈಹಿಕ ಶಿಕ್ಷಣ ಶಿಕ್ಷಕ ರಾಜರಾಮ, ಆರೋಗ್ಯ ನಿರೀಕ್ಷಣಾಧಿಕಾರಿ ಅರುಣ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್