ನವದೆಹಲಿ, 29 ಜುಲೈ (ಹಿ.ಸ.) :
ಆ್ಯಂಕರ್ : ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಪ್ರತಿ ಪಕ್ಷಗಳ ಸದಸ್ಯರು ತೀವ್ರ ಗದ್ದಲ ನಡೆಸಿದ್ದರಿಂದ ರಾಜ್ಯ ಸಭೆಯ ಕಲಾಪವನ್ನು ಉಪ ಸಭಾಪತಿ ಮಧ್ಯಾಹ್ನ 2 ಗಂಟೆವರೆಗೆ ಮುಂದೂಡಿದ್ದಾರೆ.
ಕಲಾಪ ಆರಂಭವಾಗುತ್ತಿದ್ದಂತೆಯೇ ಉಪ ಸಭಾಪತಿ ಹರಿವಂಶ್ ಅವರು ನಿಯೋಜಿತ ಸಂಸದರಿಂದ ವರದಿಗಳನ್ನು ಮಂಡಿಸಲು ವಿನಂತಿಸಿದರು.
ಈ ಬಳಿಕ ಅವರು ರಾಜ್ಯಸಭೆಗೆ ಮಾಹಿತಿ ನೀಡಿದಂತೆ, ಇಂದು ನಿಯಮ 267ರ ಅಡಿಯಲ್ಲಿ 24 ನೋಟಿಸ್‌ಗಳನ್ನು ಪ್ರತಿ ಪಕ್ಷಗಳ ಸದಸ್ಯರು ಸಲ್ಲಿಸಿದ್ದರು. ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ, ಕ್ಯಾಥೋಲಿಕ್ ಸನ್ಯಾಸಿನಿಯ ಬಂಧನ ಮತ್ತು ಕೆಲವು ರಾಜ್ಯಗಳಲ್ಲಿ ಬಂಗಾಳಿ ಭಾಷಿಕರ ವಿರುದ್ಧ ತಾರತಮ್ಯ ಮತ್ತು ದೌರ್ಜನ್ಯ ನಡೆಯುತ್ತಿದೆ ಎಂಬ ವಿಷಯಗಳ ಕುರಿತು ಚರ್ಚೆ ನಡೆಸಬೇಕೆಂದು ನೋಟಿಸ್‌ಗಳಲ್ಲಿ ಆಗ್ರಹಿಸಲಾಗಿತ್ತು. ಆದರೆ ಎಲ್ಲ ನೋಟಿಸ್‌ಗಳನ್ನು ತಿರಸ್ಕರಿಸಲಾಗಿದೆ.
ನೋಟಿಸ್‌ಗಳು ತಿರಸ್ಕೃತವಾದ ಹಿನ್ನೆಲೆಯಲ್ಲಿ ಪ್ರತಿ ಪಕ್ಷದ ಸದಸ್ಯರು ಗದ್ದಲ ಸೃಷ್ಟಿಸಿದರು. ಈ ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಉಪ ಸಭಾಪತಿ ಶೂನ್ಯ ವೇಳೆ ಹಾಗೂ ಪ್ರಶ್ನೋತ್ತರಾವಧಿಯನ್ನು ಸ್ಥಗಿತಗೊಳಿಸಿ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa