ಬಳ್ಳಾರಿ, 29 ಜುಲೈ (ಹಿ.ಸ.) :
ಆ್ಯಂಕರ್ : ತುಂಗಭದ್ರಾ ಜಲಾಶಯದಿಂದ ಒಂದು ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದೆ, ಕಂಪ್ಲಿ ಗಂಗಾವತಿ ಮೇಲ್ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಮುಂಜಾಗ್ರತೆಗಾಗಿ ವಾಹನಗಳ ಸಂಚಾರ ಸ್ಥಗಿತ ಮಾಡಲಾಗಿದೆ. ಹಾಗೂ ತುರ್ತು ಪರಿಸ್ಥಿತಿಗೆ ಬೋಟ್‍ಗಳ ವ್ಯವಸ್ಥೆಯನ್ನು ಮಾಡಲು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಂಗಳವಾರ ನಡೆದ ವಿಡಿಯೋ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಮುಂಗಾರು ಮಳೆ ಮತ್ತೆ ಚುರುಕಾಗಿದ್ದು, ಜಲಾಶಯಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಹೆಚ್ಚಳವಾಗಿದ್ದು, ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಜಲಾಶಯಗಳ ನೀರಿನ ಮಟ್ಟ, ಒಳ ಹರಿವು, ಹೊರ ಹರಿವು ಹೆಚ್ಚಾಗಿದ್ದು ಜಲಾಶಯದಲ್ಲಿ 105.788 ಟಿ.ಎಂ.ಸಿ ನೀರಿನ ಸಂಗ್ರಹಣಾ ಸಾಮಥ್ರ್ಯ ಹೊಂದಿದ್ದು, ಈಗಾಗಲೇ 80.001 ಟಿ.ಎಂ.ಸಿ ಭರ್ತಿಯಾಗಿದೆ ಎಂದರು.
ನದಿ ಪಾತ್ರದಲ್ಲಿರುವ ಜನರಲ್ಲಿ ಆರೋಗ್ಯ, ಊಟದ ವ್ಯವಸ್ಥೆ, ಮೂಲ ಸೌಕರ್ಯವನ್ನು ಕಲ್ಪಿಸಬೇಕು. ಮಳೆಯಿಂದ ಶಾಲೆಗಳ ಮೇಲ್ಚವಾಣಿ ಹಾನಿಯಾಗಿದ್ದರೆ ಅದನ್ನು ಸರಿಪಡಿಸಿ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಕೇಂದ್ರ ಸರ್ಕಾರದಿಂದ ರಸಗೊಬ್ಬರ ಹಂಚಿಕೆ ಮತ್ತು ಸರಬರಾಜು ಪ್ರಕ್ರಿಯೆ ಆರಂಭವಾಗಿದ್ದು, ಇದರಿಂದಾಗಿ ರಾಜ್ಯದಲ್ಲಿ ಯೂರಿಯಾ ರಸಗೊಬ್ಬರದ ಪ್ರಾರಂಬಿಕ ದಾಸ್ತಾನನ್ನು ಪರಿಗಣಿಸಿ, ಯೂರಿಯಾ ರಸಗೊಬ್ಬರದ ಕಡಿಮೆ ಹಂಚಿಕೆ ಮಾಡಿರುವುದು ಕೊರತೆಗೆ ಮೂಲ ಕಾರಣವಾಗಿದೆ. ರಸಗೊಬ್ಬರದ ಬಗ್ಗೆ ಸ್ಥಳೀಯ ರೈತರಿಂದ ಮಾಹಿತಿಯನ್ನು ತಿಳಿದುಕೊಳ್ಳಬೇಕು. ತಾಲ್ಲೂಕುವಾರು ತಹಶೀಲ್ದಾರರು ಮತ್ತು ರೈತ ಸಂಪರ್ಕ ಕೇಂದ್ರ ಅಧಿಕಾರಿಗಳು ರೈತರಿಗೆ ಹೋಲ್ ಸೇಲ್, ರಿಟೇಲ್ ಅಂಗಡಿಗಳಿಂದ ತೊಂದರೆಯಾದರೆ ಕ್ರಮವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪಿ.ಪ್ರಮೋದ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟ ಅಧಿಕಾರಿಗಳು ಇತರರು ಉಪಸ್ಥಿತರಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್