ಹೊಸಪೇಟೆ, 29 ಜುಲೈ (ಹಿ.ಸ.) :
ಆ್ಯಂಕರ್ : ಮನೆ ಮನೆಗೆ ಶಾಸಕರು, ಮನೆ ಬಾಗಿಲಿಗೆ ಸರ್ಕಾರ ತಲುಪುವ ನಿಟ್ಟಿನಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಅರಿಯಲು ಜನಸ್ಪಂದನಾ ಕಾರ್ಯಕ್ರಮ ಪರಿಣಾಮಕಾರಿಯಾಗಿದೆ ಎಂದು ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದ್ದಾರೆ.
ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಿನಿ ಗ್ರಾಮದಲ್ಲಿನ ಶ್ರೀ ಮರಳುಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಸಹಯೋಗದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಂಗಳವಾರ ಅವರು ಮಾತನಾಡಿದರು. ಜನಸಾಮಾನ್ಯ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಅಧಿಕಾರಿಗಳಿಂದಾಗಬೇಕಿದೆ. ಈ ಜನಸ್ಪಂದನಾ ಕಾರ್ಯಕ್ರಮದಿಂದ ಹೊಸ ಯೋಜನೆಗಳು, ಹೊಸ ಯೋಚನೆಗಳ ಮೂಲಕ ಮುಂದಿನ ಅಧಿವೇಶನದಲ್ಲಿ ಭಾಗವಹಿಸಲು ಸಹಕಾರಿಯಾಗಲಿದೆ ಎಂದರು.
ಜನಸಾಮಾನ್ಯರ ಧ್ವನಿಯಾಗಿ ನಿರಂತರ ನಾನು ಕಾರ್ಯನಿರ್ವಹಿಸುವೆ. ವಿವಿಧ ಇಲಾಖೆಗಳ ಅಧಿಕಾರಿಗಳು ಜನಸ್ಪಂದನದಲ್ಲಿ ಕೌಂಟರ್‌ಗಳನ್ನು ತೆರೆದು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ್ದೀರಿ. ಈ ಎಲ್ಲಾ ಅಹವಾಲುಗಳಿಗೆ ಪರಿಹಾರ ನೀಡಿದಾಗ ಮಾತ್ರ ಇದು ಅರ್ಥಪೂರ್ಣವಾಗಲಿದೆ. ಇಲ್ಲವಾದರೇ ಕಾಟಾಚಾರದ ಜನಸ್ಪಂದನ ಸಭೆ ಆದಂತೆ. ಸಣ್ಣ ಸಣ್ಣ ವಿಚಾರಕ್ಕೆ ಜನರು ತಮ್ಮ ಎಲ್ಲ ಕೆಲಸಗಳನ್ನು ಬಿಟ್ಟು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದು ಸರಿಯಲ್ಲ. ಅಧಿಕಾರಿಗಳು ಜನಸಾಮಾನ್ಯರ ಸಂಕಷ್ಟಗಳನ್ನು ಅರಿತು ಕರ್ತವ್ಯ ನಿರ್ವಹಿಸಬೇಕು. ಇಡೀ ಜಿಲ್ಲೆಯಲ್ಲಿಯೇ ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚು ಹಿಂದುಳಿದ ಕ್ಷೇತ್ರ ಇದಾಗಿದೆ. ಸರ್ಕಾರದಿಂದ ಹೆಚ್ಚೆಚ್ಚು ಅನುದಾನ ತರಲು ಪ್ರಮಾಣಿಕ ಪ್ರಯತ್ನದಲ್ಲಿದ್ದೇನೆ. ಶೀಘ್ರದಲ್ಲೇ ಅಧಿವೇಶನದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರು ಆಗಮಿಸಿ ಕೂಡ್ಲಿಗಿ ಕ್ಷೇತ್ರದ ಕೆರೆ ತುಂಬುವ ಯೋಜನೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದರು. ಗ್ರಾಪಂ ಪಿಡಿಓಗಳು ಎಲ್ಲಾ ಹಳ್ಳಿಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಮೂಲಭೂತ ಸಮಸ್ಯೆಗಳಿಗೆ ಮೊದಲನೇ ಆದ್ಯತೆ ನೀಡಬೇಕು. ಗ್ರಾಮೀಣ ಭಾಗದ ಜನರು ಇಂತಹ ಸಮಸ್ಯೆಗಳಿಗೆ ಶಾಸಕರಿಗೆ ದೂರು ನೀಡುವಂತಾಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪ್ರತ್ಯೇಕ ಕೌಂಟರ್ : ಜನತಾ ಸ್ಪಂದನಾ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ, ಪಂಚಾಯತ್ ರಾಜ್(ತಾಪಂ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಶಿಕ್ಷಣ ಇಲಾಖೆ, ಜೆಸ್ಕಾಂ, ನೋಂದಣಿ ಇಲಾಖೆ, ಸಾರಿಗೆ ಇಲಾಖೆ, ಅಗ್ನಿಶಾಮಕ ಮತ್ತು ತುರ್ತುಸೇವೆ, ಕೆಆರ್‌ಐಡಿಎಲ್, ಅಬಕಾರಿ ಇಲಾಖೆ, ಅರಣ್ಯ ಇಲಾಖೆ, ಪಶುಸಂಗೋಪನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರೇಷ್ಮೆ, ಲೋಕೋಪಯೋಗಿ, ಪೊಲೀಸ್ ಇಲಾಖೆಗಳು ಪ್ರತ್ಯೇಕ ಕೌಂಟರಗಳನ್ನು ತೆರೆದು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಾಯಿತು.
ಈ ವೇಳೆಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಜಿಪಂ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ, ಹರಪನಹಳ್ಳಿ ವಿಭಾಗದ ಸಹಾಯಕ ಆಯುಕ್ತ ಚಿದಾನಂದ ಗುರುಸ್ವಾಮಿ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಕೊಟ್ಟೂರು ತಹಶೀಲ್ದಾರ್ ಜಿ.ಕೆ.ಅಮರೇಶ್, ಕೂಡ್ಲಿಗಿ ತಹಶೀಲ್ದಾರ ನೇತ್ರಾವತಿ, ತಾಪಂ ಇಒ ಡಾ.ಬಿ.ಆನಂದ್ ಕುಮಾರ್, ಉಜ್ಜಿನಿ ಗ್ರಾಪಂ ಅಧ್ಯಕ್ಷ ಚೌಡಪ್ಪ, ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಂಕರನಾಯ್ಕ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗಪ್ಪ ತಳಕೇರಿ, ಜಿಲ್ಲಾ ಪರಿಶಿಷ್ಟ ಪಂಗಡದ ಕಲ್ಯಾಣಾಧಿಕಾರಿ ಕೆ.ರವಿಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್