ಲಿಂಗಸುಗೂರು, 29 ಜುಲೈ (ಹಿ.ಸ.) :
ಆ್ಯಂಕರ್ : 998 ಕೋಟಿ ರೂ ವೆಚ್ಚದಲ್ಲಿ ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕರ ಹೊಸ ವಸತಿ ಸಮುಚ್ಛಯ ನಿರ್ಮಾಣ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆಗಸ್ಟ್ 6ರಂದು ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ ಎಂದು ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ಅಧ್ಯಕ್ಷರು ಆಗಿರುವ ಬೀಳಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಟಿ. ಪಾಟೀಲ ಅವರು ತಿಳಿಸಿದ್ದಾರೆ.
ಲಿಂಗಸುಗೂರು ತಾಲೂಕಿನ ಹಟ್ಟಿಯ ಚಿನ್ನದ ಗಣಿ ಕಂಪನಿಯ ಸಭಾಂಗಣದಲ್ಲಿ ಜುಲೈ 29ರಂದು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಹಟ್ಟಿಯಲ್ಲಿ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕರ ಹೊಸ ವಸತಿ ಸಮುಚ್ಛಯ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಅಂದಾಜು 998 ಕೋಟಿ ರೂ ವೆಚ್ಚದಲ್ಲಿ ವಸತಿ ಗೃಹಗಳು, ಶಾಲೆ, ಆಸ್ಪತ್ರೆ, ಕ್ರೀಡಾ ಸಂಕೀರ್ಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ಆಗಲಿವೆ.
2 ಬಿಎಚ್ ಕೆಯ 16 ಕ್ವಾರ್ಟರ್‌ಗಳ 1 ಬ್ಲಾಕ್ ನಿರ್ಮಾಣವಾಗಲಿದೆ. ಇದರಲ್ಲಿ ಲಿಫ್ಟ್ ಎಲಿವೇಟರನಂತಹ ಬೇರೆ ಬೇರೆ ಆಧುನಿಕ ಸೌಲಭ್ಯಗಳು ಇರಲಿವೆ. ಅದೇ ರೀತಿಯಲ್ಲಿ 3 ಬಿಎಚ್ ಕೆ ರೆಸಿಡೆಂಟಲ್ ಹೌಸಗಳು ನಿರ್ಮಾಣವಾಗಲಿವೆ. 16 ಕ್ವಾರ್ಟರ್‌ಗಳ ಈ ಬ್ಲಾಕನಲ್ಲಿ ಸಹ ಲಿಫ್ಟ್, ಎಲಿವೇಟರ್ ಸೌಲಭ್ಯ ಇರುತ್ತದೆ. ಅದೇ ರೀತಿ ನೆಲ ಮತ್ತು ಎರಡು ಮಹಡಿಯ 130 ಹಾಸಿಗೆಗಳ ಆಸ್ಪತ್ರೆ ನಿರ್ಮಾಣವಾಗಲಿದೆ. ಇದರಲ್ಲಿ ಸಮಾಲೋಚಕರ ಕೊಠಡಿಗಳು, ರಕ್ತದ ಮಾದರಿ ಪರೀಕ್ಷಾ ಪ್ರಯೋಗಾಲಯ, ಐಸಿಯು ವಾರ್ಡ್, ಶಸ್ತ್ರಚಿಕಿತ್ಸಾ ಕೊಠಡಿ ಸೇರಿದಂತ ಅಗತ್ಯ ವಾರ್ಡ್ಗಳು ಮತ್ತು ಉಪಕರಣಗಳು ಇರಲಿವೆ ಎಂದರು.
ಗಣಿ ಕಂಪನಿಯ ಕಾರ್ಮಿಕರ ಮಕ್ಕಳಿಗೆ ಅನುಕೂಲವಾಗಲು ಪ್ರಾಥಮಿಕ ಶಾಲಾ ಬ್ಲಾಕ್ ಹಾಗೂ ಮಾಧ್ಯಮಿಕ ಶಾಲಾ ಬ್ಲಾಕ್ ಗಳನ್ನು ನಿರ್ಮಿಸಲಾಗುತ್ತದೆ. ಜೊತೆಗೆ 51110 ಚದರ ಅಡಿ ಏರಿಯಾದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಾಣವಾಗಲಿದೆ. ಈ ಕ್ರೀಡಾ ಸಂಕೀರ್ಣವು ಕ್ರೀಡಾ ಸಭಾಂಗಣ, ಬಹುಪಯೋಗಿ ಕ್ರೀಡಾ ಸಭಾಂಗಣ, ಫಿಟ್‌ನೆಸ್ ಕೇಂದ್ರ, ಪ್ರಥಮ ಚಿಕಿತ್ಸಾ ಕೊಠಡಿ, ಲಾಕರ್ ಕೊಠಡಿಗಳು, ರನ್ನಿಂಗ್ ಟ್ರ‍್ಯಾಕ್, ಬ್ಯಾಸ್ಕೆಟ್ ಬಾಲ್, ವಾಲಿ ಬಾಲ್ ಕೋಟ್, ಟೆನಿಸ್ ಕೋಟ್, ಖೋ-ಖೋ ಕೋಟ್, ಈಜುಕೊಳ, ವೀಕ್ಷಕರ ಗ್ಯಾಲರಿ ಸೌಕರ್ಯ ಒಳಗೊಂಡಿದೆ ಎಂದು ಶಾಸಕರು ತಿಳಿಸಿದರು.
ಈ ಹೊಸ ಸಮುಚ್ಚಯದಲ್ಲಿ ಬೇರೆ ಬೇರೆ ಮೂಲಸೌಕರ್ಯ ಕಲ್ಪಿಸಲಾಗುತ್ತದೆ. ಕಾಂಕ್ರಿಟ್ ರಸ್ತೆ, ಚರಂಡಿ, ಭದ್ರತಾ ಬ್ಲಾಕ್, ಪಾತ್ ವೇ, ಪಾರ್ಕಿಂಗ್ ಸ್ಥಳಗಳು, ಕಾಂಪೌ0ಡ್ ಗೋಡೆ, ಮಳೆನೀರು ಕೊಯ್ಲು, ಯೋಗ ಪ್ರದೇಶ, ಮಕ್ಕಳ ಆಟದ ಪ್ರದೇಶ, ತಡೆಗೋಡೆ, ಪ್ರವೇಶ ಕಮಾನು, ಸಂಪ್ ಟ್ಯಾಂಕ್, ಎಸ್ಟಿಪಿ, ಇಟಿಪಿ ಓವರ್ ಹೆಡ್ ಟ್ಯಾಂಕ್, ಜಿಎಲ್ ಎಸ್ ಆರ್ ಟ್ಯಾಂಕ್, ಬಾಹ್ಯ ವಿದ್ಯುದೀಕರಣ ಮತ್ತು ನೀರು ಸರಬರಾಜು ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಚಿನ್ನದ ಉತ್ಪಾದನೆ ಪ್ರಮಾಣದಲ್ಲಿ ಹೆಚ್ಚಳ: ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಈ ಮೊದಲು ವರ್ಷಕ್ಕೆ 1500 ಕೆ.ಜಿ.ಯಷ್ಟು ಚಿನ್ನ ಉತ್ಪಾದನೆಯ ಗುರಿ ಇತ್ತು. ತಾವು ಅಧಿಕಾರ ಸ್ವೀಕರಿಸಿದ ಮೇಲೆ ವಾರ್ಷಿಕವಾಗಿ 1605 ಕೆ.ಜಿ ಚಿನ್ನವನ್ನು ಉತ್ಪಾದಿಸಲಾಗಿದೆ. ಇದೀಗ 2025-26ನೇ ಸಾಲಿನಲ್ಲಿ ವಾರ್ಷಿಕವಾಗಿ 1700 ಕೆ.ಜಿ. ಚಿನ್ನವನ್ನು ಉತ್ಪಾದಿಸಲಾಗುವುದು ಎಂದು ಅಧ್ಯಕ್ಷರಾದ ಜೆ.ಟಿ.ಪಾಟೀಲ ಅವರು ಪತ್ರಿಕಾಗೋಷ್ಟಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಉತ್ತಮ ಬೆಳವಣಿಗೆ: ಕಂಪನಿಯ ಸಿಬ್ಬಂದಿ ಮತ್ತು ಕಾರ್ಮಿಕರ ಸಂಘದಿAದ ಚುನಾಯಿತರಾದ ಪ್ರತಿನಿಧಿಗಳು ಪ್ರತಿದಿನ ಗೈರಾಗದೆ ಕೆಲಸ ನಿರ್ವಹಿಸಲು ಒಪ್ಪಿದ ರೀತಿಯು ಕಂಪನಿಯ ಬೆಳವಣಿಗೆಗೆ ಅನುಕೂಲವಾಗಲಿದೆ. ಸಾಮಾಜಿಕ ಕಾಳಜಿ ಹೊಂದಿ ಚುನಾಯಿತ ಪ್ರತಿನಿಧಿಗಳು ತೆಗೆದುಕೊಂಡ ಈ ನಿರ್ಣಯವು ಕಂಪನಿಯ ಇತರೆ ಕಾರ್ಮಿಕರಿಗೆ ಕೆಲಸ ಮಾಡಲು ಪ್ರೇರಣೆಯಾಗಲಿದೆ ಎಂದು ಅಧ್ಯಕ್ಷರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಆರ್ ಶಿಲ್ಪಾ, ಮುಖಂಡರಾದ ವೇಣುಗೋಪಾಲಗೌಡ ಪಾಟೀಲ ಜಾಲಹಳ್ಳಿ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್