ಗದಗ, 29 ಜುಲೈ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಭರತ್ ಎಸ್ ಅವರು ರೋಣ ತಾಲೂಕಿನ ಬಾಸಾಲಪೂರ, ಹಿರೇಮಣ್ಣೂರ,ಸಂದಿಗವಾಡ, ಹಾಗೂ ಡ.ಸ.ಹಡಗಲಿ ಗ್ರಾಮಗಳಿಗೆ ಭೇಟಿ ನೀಡಿ, ಜಲ ಜೀವನ್ ಮಿಷನ್ (ಜೆಜೆಎಂ) ಹಾಗೂ ಬಹು ಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರೊಂದಿಗೆ ಕುಡಿಯುವ ನೀರಿನ ಪೂರೈಕೆಯ ಗುಣಮಟ್ಟ, ಸಮಸ್ಯೆಗಳು ಮತ್ತು ಸವಾಲುಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರ ಸೂಚನೆಯಂತೆ, ಜಲ ಜೀವನ್ ಮಿಷನ್ ಯೋಜನೆಯಡಿ ಪೂರ್ಣಗೊಂಡ ಕಾಮಗಾರಿಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವ ಜವಾಬ್ದಾರಿಯನ್ನು ಜಿಲ್ಲಾ ಪಂಚಾಯತ್ ಸಿಇಒ ಭರತ್ ಎಸ್ ಅವರು ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ರೋಣ ತಾಲೂಕಿನ ಆಯ್ದ ಗ್ರಾಮಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಜೆಜೆಎಂ ಕಾಮಗಾರಿಗಳು,ಸಂಪರ್ಕಗಳ ಗುಣಮಟ್ಟ, ಮೀಟರ್ ಅಳವಡಿಕೆ, ರಸ್ತೆ ಪುನಶ್ಚೇತನ, ನೀರಿನ ಗುಣಮಟ್ಟ, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳ ಕಾರ್ಯ ನಿರ್ವಹಣೆ ಮತ್ತು ನಿರ್ವಹಣೆ ಕುರಿತು ವಿವರವಾದ ಪರಿಶೀಲನೆ ನಡೆಸಿದರು.
ಈ ಭೇಟಿಯಲ್ಲಿ ರೋಣ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ ಬಿ ಕಂದಕೂರ,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಪ್ರಭಾರ ಕಾರ್ಯಪಾಲಕ ಎಂಜಿನಿಯರ್ ರಾಘವೇಂದ್ರ ದೊಡ್ಡಮನಿ, ಸಹಾಯಕ ಎಂಜಿನಿಯರ್, ಮಹದೇವಪ್ಪ ಹೊಸಮನಿ, ಪವನ ಪವಾರ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಚಂದ್ರಕಾಂತ ನರ್ಲೆಕರ, ಸಹಾಯಕ ಇಂಜಿನಿಯರ ಶರಣಬಸವ ಎಸ್ ಎಸ್, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಗ್ರಾಮಸ್ಥರೊಂದಿಗಿನ ಚರ್ಚೆಯಲ್ಲಿ, ಕುಡಿಯುವ ನೀರಿನ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಬಗೆಹರಿಸುವ ಭರವಸೆಯನ್ನು ಸಿಇಒ ಭರತ್ ಎಸ್ ನೀಡಿದರು. ಜಲ ಜೀವನ್ ಮಿಷನ್ ಯೋಜನೆಯಡಿ ಗುಣಮಟ್ಟದ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಪ್ರತಿ ಮನೆಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಗುರಿಯನ್ನು ಜಿಲ್ಲಾ ಪಂಚಾಯತ್ ಹೊಂದಿದೆ ಎಂದು ಗ್ರಾಮಸ್ಥರಿಗೆ ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP