ಕೃಷಿ ಮಹಾವಿದ್ಯಾಲಯದಿಂದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ
ಕೃಷಿ ಮಹಾವಿದ್ಯಾಲಯದಿಂದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ
ಚಿತ್ರ : ಕೋಲಾರ ತಾಲೂಕಿನ ಚಿಟ್ನಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಸಹಭಾಗಿತ್ವ ಅಧ್ಯಯನ ಕಾರ್ಯಕ್ರಮ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ವಿವಿಧ ನಕ್ಷೆಗಳ ಮಾದರಿ ತಯಾರಿಸಿ ರೈತರಿಗೆ ಮಾಹಿತಿ ನೀಡಲಾಯಿತು.


ಕೋಲಾರ, ೨೯ ಜುಲೈ (ಹಿ.ಸ.) :

ಆ್ಯಂಕರ್ : ರೈತರು ಕಾಲ,ಮಾರುಕಟ್ಟೆ ವೈಪರಿತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಬೆಳೆ ಪದ್ದತಿ ಅಳವಡಿಸಿಕೊಂಡು ಕೃಷಿಯನ್ನು ಲಾಭದಾಯಕವಾಗಿಸಿಕೊಳ್ಳಬೇಕು ಎಂದು ಚಿಂತಾಮಣಿ ರೇಷ್ಮೆ,ಕೃಷಿ ಮಹಾವಿದ್ಯಾಲಯದ ಕೀಟಶಾಸ್ತ್ರವಿಭಾಗದ ಡೀನ್ ಡಾ.ಪಿ.ವೆಂಕಟರಮಣ ಕರೆ ನೀಡಿದರು.

ಕೋಲಾರ ತಾಲ್ಲೂಕಿನ ಚಿಟ್ನಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಸಹಭಾಗಿತ್ವ ಅಧ್ಯಯನ ಕಾರ್ಯಕ್ರಮದಡಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮತ್ತು ಚಿಂತಾಮಣಿ ರೇಷ್ಮೆ ಕೃಷಿ ಮಹಾವಿದ್ಯಾಲಯದಿಂದ ೪ನೇ ವರ್ಷದ ಬಿಎಸ್ಸಿ ಕೃಷಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ-೨೦೨೫-೨೬ ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

ಇಂದಿನ ಶಿಬಿರದಲ್ಲಿ ಗ್ರಾಮದ ಸಾಮಾಜಿಕ ನಕ್ಷೆ, ಬೆಳೆಯ ಶ್ರೇಣಿ, ಚಲನಶೀಲತೆಯ ನಕ್ಷೆ, ಸಂಪನ್ಮೂಲ ನಕ್ಷೆ, ಋತುಮಾನ ನಕ್ಷೆ, ಸಮಸ್ಯಾತ್ಮಕ ನಕ್ಷೆಯ ಕುರಿತು ಗ್ರಾಮದ ಅಷ್ಟಮೂರ್ತಮ್ಮ ದೇವಾಲಯದ ಮುಂಭಾಗದ ಆವರಣದಲ್ಲಿ ಮಾದರಿಗಳನ್ನು ನಿರ್ಮಿಸಿ ರೈತರಿಗೆ ಅರಿವು ಮೂಡಿಸಲಾಯಿತು.

ರೈತರು ಭೂಮಿಯಲ್ಲಿ ಒಂದೇ ಬೆಳೆಯನ್ನು ನಿರಂತರವಾಗಿ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ನಾಶವಾಗುತ್ತದೆ, ರೋಗಗಳು ಹೆಚ್ಚುತ್ತವೆ ಎಂದು ಎಚ್ಚರಿಸಿದ ಅವರು, ಋತುಮಾನಕ್ಕೆ ತಕ್ಕಂತೆ ಬೆಳೆ ಪದ್ದತಿ ಅಳವಡಿಸಿಕೊಳ್ಳಿ, ಕೃಷಿಯಲ್ಲಿ ಈಗ ಆಧುನಿಕ ಪದ್ದತಿಗಳನ್ನು ಅಳವಡಿಸಿಕೊಳ್ಳಿ, ಬೆಳೆನಷ್ಟವಾಯಿತು ಎಂದು ದುಃಖ ಪಡುವ ಬದಲಿಗೆ ಮಾರುಕಟ್ಟೆ ವೈಪರಿತ್ಯಗಳನ್ನು ಅರಿತು ಬೆಳೆ ಪದ್ದತಿ ಇರಲಿ, ಬೇರೆಬೇರೆ ಬೆಳೆಗಳನ್ನು ಬೆಳೆದು ಲಾಭ ಗಳಿಸಿ ಎಂದರು.

ಕಾರ್ಯಕ್ರಮದಲ್ಲಿ ಕೀಟಶಾಸ್ತ್ರ ವಿಭಾಗದ ಡಾ.ಶ್ರೀನಿವಾಸರೆಡ್ಡಿ, ವಿವಿಧ ಬೆಳೆಗಳಿಗೆ ಬರುವ ರೋಗಗಳು, ಅವುಗಳ ನಿಯಂತ್ರಣದ ಕುರಿತು ಅರಿವು ಮೂಡಿಸಿ, ರೋಗ ನಿಯಂತ್ರಣಕ್ಕೆ ಜೈವಿಕ ವಿಧಾನ ಹೆಚ್ಚು ಸೂಕ್ತ ಎಂದರು.

ಸಸ್ಯರೋಗ ಶಾಸ್ತ್ರ ವಿಭಾಗದ ಡಾ.ಮಹೇಶ್, ರೋಗ ನಿಯಂತ್ರಣದ ಜತೆಗೆ ಆಧುನಿಕ ಬೇಸಾಯಪದ್ದತಿಗಳನ್ನು ಅಳವಡಿಸಿಕೊಳ್ಳಿ, ಬಿತ್ತನೆ ಬೀಜ ಪಡೆಯುವಾಗ ಎಚ್ಚರಿಕೆ ಇರಲಿ, ಗುಣಮಟ್ಟದ ಕುರಿತು ಖಾತ್ರಿ ಇರಲಿ, ರಸೀದಿ ಕೇಳಿ ಪಡೆಯಿರಿ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಮಣ್ಣಿನ ಪರೀಕ್ಷೆಯ ಮಹತ್ವ, ಮಣ್ಣಿನ ಮಾದರಿ ಸಂಗ್ರಹಣೆ, ಮಣ್ಣು ಮಾದರಿ ಎಲ್ಲಿ ತೆಗದುಕೊಳ್ಳಬೇಕೆಂದು ತಿಳಿಸಿಕೊಟ್ಟರು.

ಈ ಸಂದರ್ಭದಲ್ಲಿ ಬೇಸಾಯಶಾಸ್ತ್ರವಿಭಾಗದ ಡಾ.ವೆಂಕಟರವಣ ನಾಯಕ್, ರೇಷ್ಮೆ ಕೃಷಿಯ ಡಾ.ಮಮತಾ, ಗ್ರಾಮದ ರೈತರಾದ ನಾಗರಾಜ್, ಮುನಿವೆಂಕಟರೆಡ್ಡಿ, ಪುರುಷೋತ್ತಮ್, ಚಂದ್ರಪ್ಪ ಮತ್ತಿತರರು ಹಾಜರಿದ್ದರು.

ಚಿತ್ರ : ಕೋಲಾರ ತಾಲೂಕಿನ ಚಿಟ್ನಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಸಹಭಾಗಿತ್ವ ಅಧ್ಯಯನ ಕಾರ್ಯಕ್ರಮ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ವಿವಿಧ ನಕ್ಷೆಗಳ ಮಾದರಿ ತಯಾರಿಸಿ ರೈತರಿಗೆ ಮಾಹಿತಿ ನೀಡಲಾಯಿತು.

.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande