ವಿಜಯಪುರ, 29 ಜುಲೈ (ಹಿ.ಸ.) :
ಆ್ಯಂಕರ್ : ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಬಂದರೂ ಯೋಜನೆಗೆ ಬುದುಕು ಕಳೆದುಕೊಂಡ ವಿಜಯಪುರ-ಬಾಗಲಕೋಟೆ ತ್ಯಾಗಿಗಳ ಜಿಲ್ಲೆಗೆ ನೀರಾವರಿ ವಿಷಯದಲ್ಲಿ ಇನ್ನೂ ನ್ಯಾಯ ಸಿಕ್ಕಿಲ್ಲ. ಅವಳಿ ಜಿಲ್ಲೆಗಳ ಸಮಗ್ರ ನೀರಾವರಿಗಾಗಿ 82 ಟಿಎಂಸಿ ಅಡಿ ನೀರು ಇನ್ನೂ ಬಳಕೆಯಾಗಿಲ್ಲ ಎಂದು ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ವಿಷಾದ ವ್ಯಕ್ತಪಡಿಸಿದರು.
ಮಂಗಳವಾರ ನಿಡಗುಂದಿ ಪಟ್ಟಣದ ಕಮದಾಳ ಗ್ರಾಮದಲ್ಲಿ ಶಾಲಾ ಕೋಠಡಿಗಳ ಉದ್ಘಾಟನೆ ಸಮಾರಂಭದಲ್ಲಿ ಸಂತ್ರಸ್ತರ ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ಆಲಮಟ್ಟಿಯ ಲಾಲ ಬಹಾದ್ದರೂ ಶಾಸ್ತ್ರೀ ಜಲಾಶಯ ನಿರ್ಮಾಣಕ್ಕೆ ಅವಿಭಜಿತ ವಿಜಯಪುರ ಜಿಲ್ಲೆಯ ಲಕ್ಷಾಂತರ ಎಕರೆ ಜಮೀನು, ನೂರಾರು ಗ್ರಾಮಗಳ ಲಕ್ಷಾಂತರ ಸಂತ್ರಸ್ತರು ಬದುಕು ತ್ಯಾಗ ಮಾಡಿದ್ದಾರೆ. ಆದರೆ ಯೋಜನೆಯ ಬಾಧಿತ ತ್ಯಾಗಿಗಳ ಜಿಲ್ಲೆಗಳಲ್ಲಿ ನೀರಾವರಿ ಯೋಜನೆಗಳು ಸಂಪೂರ್ಣ ಅನುಷ್ಠಾನಗೊಂಡಿಲ್ಲ. ನಮ್ಮ ಪಾಲಿನ 82 ಟಿಂಎಂಸಿ ಅಡಿ ನೀರು ಬಳಕೆಯಾಗಿ ರೈತರಿಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಸಂತ್ರಸ್ತರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವುದು, ನ್ಯಾಯ ಸಮ್ಮತ ಪರಿಹಾರ ನೀಡುವುದು, ಅವಳಿ ಜಿಲ್ಲೆಗಳ ರೈತರ ಜಮೀನಿಗೆ ನೀರು ಹರಿಸುವ ವಿಷಯದಲ್ಲಿ ಸಂಪೂರ್ಣ ನೀರಾವರಿ ಯೋಜನೆಗಳ ಅನುಷ್ಠಾನದ ವಿಷಯದಲ್ಲಿ ಎಲ್ಲ ಪಕ್ಷಗಳ ಸರ್ಕಾರಗಳ ವೈಫಲ್ಯವೂ ಇದೆ. ಸಂತ್ರಸ್ತರ ಸಮಸ್ಯೆಗಳ ಪರಿಹಾರ ಕೈಗೊಳ್ಳುವಲ್ಲಿ ವೈಫಲ್ಯಗಳೂ ಆಗಿವೆ ಎಂದು ಅಸಮಾಧಾನ ಹೊರಹಾಕಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನದಿಂದ ರಾಯಚೂರು, ಯಾದಗಿರಿ, ಕಲಬುರ್ಗಿ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಂಡರೂ ತ್ಯಾಗಿಗಳಾದ ನಮಗೆ ಪೂರ್ಣ ಪ್ರಮಾಣದಲ್ಲಿ ನೀರು ಸಿಕ್ಕಿಲ್ಲ. ಇದೇ ವಿಷಯವಾಗಿ ನಾನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕರೆದಿದ್ದ ವಿಶೇಷ ಸಭೆಯಲ್ಲಿ ಮಾತನಾಡಿ, ಅವಳಿ ಜಿಲ್ಲೆಗಳ ರೈತರು ಹಾಗೂ ಸಂತ್ರಸ್ತರ ಪರವಾಗಿ ಧ್ವನಿ ಎತ್ತಿದ್ದೇನೆ ಎಂದು ವಿವರಿಸಿದರು.
2008 ರಲ್ಲಿ ಬಸವನಬಾಗೇವಾಡಿ ಕ್ಷೇತ್ರದಲ್ಲಿ ನಾನು ಸೋತರೂ ಜನರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡಿದೆ. 2013 ರಲ್ಲಿ ಆಯ್ಕೆಯಾಗುತ್ತಲೇ ನಿಡಗುಂದಿ, ಕೊಲ್ಹಾರ ಸೇರಿದಂತೆ ಇಡೀ ಬಸವನಬಾಗೇವಾಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವೇಗ ನೀಡಿದೆ. ವಿಶೇಷವಾಗಿ ಸಂತ್ರಸ್ತರೇ ಅಧಿಕ ಪ್ರಮಾಣದಲ್ಲಿ ನೆಲೆಸಿರುವ ಕೊಲ್ಹಾರ, ನಿಡಗುಂದಿ ಭಾಗಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದೇನೆ ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಜೆಟ್‍ನಲ್ಲಿ ಆಲಮಟ್ಟಿಯ ಶಾಸ್ತ್ರೀ ಜಲಾಶಯದ ಪರಿಸರದಲ್ಲಿ ಮೀನುಗಾರಿಕೆ ಕಾಶಲ್ಯ ಅಭಿವೃದ್ಧಿ ಯೋಜನೆ ಘೋಷಣೆಯಾಗಿದ್ದು, 30 ಎಕರೆ ಪ್ರದೇಶದಲ್ಲಿ ಯೋಜನೆ ಸಿದ್ಧವಾಗುತ್ತಿದೆ. ಭವಿಷ್ಯದಲ್ಲಿ ರಾಜ್ಯದ ಎರಡನೇ ಮೀನುಗಾರಿಕೆ ಕಾಲೇಜು ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಆರಂಭಗೊಳ್ಳಲಿದೆ ಎಂದು ವಿವರಿಸಿದರು.
ಜಿವಿವಿಎಸ್ ಸಂಸ್ಥೆಯ ಚೇರ್ಮನ್ ಸಿದ್ಧಣ್ಣ ನಾಗಠಾಣಾ, ರುದ್ರಯ್ಯ ಹಿರೇಮಠ, ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಸಂಗಮೇಶ ಬಳಿಗೇರ, ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವ ರಾಠೋಡ, ಹೈಸ್ಕೂಲ್ ಎಸ್‍ಡಿಎಂಸಿ ಅಧ್ಯಕ್ಷ ಪ್ರಭು ಸಿಂದಗಿ, ಪ್ರಾಥಮಿಕ ಶಾಲೆ ಎಸ್‍ಡಿಎಂಸಿ ಅಧ್ಯಕ್ಷ ಭೀಮಪ್ಪ ದಂಡಿನ, ಮುದ್ದೇರ್ಶವರ ಟ್ರಸ್ಟ್ ಅಧ್ಯಕ್ಷ ಹನುಮಂತ ಮಾಳಗೊಂಡ, ಕರಿಯಪ್ಪ ಸಿಂದಗಿ, ಗ್ರಾಮದ ಪ್ರಮುಖರಾದ ಬಸಪ್ಪ ಮೇಟಿ, ಮುದ್ದಣ್ಣ ಯಳ್ಳಿಗುತ್ತಿ, ರಾಯಣ್ಣ ಹುಗ್ಗಿ, ಯೋಜನೆ ಅನುಷ್ಠಾನದ ಪಂಚಾಯತ್ ರಾಜ್ ಇಂಜಿಯರಿಂಗ್‍ನ ಎಇಇ ವಿಲಾಸ ರಾಠೋಡ, ಬಿಇಒ ವಸಂತ ರಾಠೋಡ ಸೇರಿದಂತೆ ಇತರರು ವೇದಿಕೆ ಮೇಲಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande