ಗದಗ, 27 ಜುಲೈ (ಹಿ.ಸ.) :
ಆ್ಯಂಕರ್ : ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಖ್ಯಾತಿಗೊಳ್ಳಿರುವ ಗದಗ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ಮಳೆ ಆಗುತ್ತಿದ್ದು, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಬಿಸಿಲಿನ ನಾಡಿನಲ್ಲಿ ಮಳೆಕಾಲದಲ್ಲಿ ಮಲೆನಾಡಿನ ಅನುಭವ ನೀಡುತ್ತಿರುವ ಈ ಪ್ರದೇಶ, ನೂರಾರು ಜನರನ್ನು ವೀಕೆಂಡ್ ನಲ್ಲಿ ಸೆಳೆಯುತ್ತಿದೆ.
ಮೂಡಲ ಮೂಡಿದ ಹಸಿರು ಗುಡ್ಡಗಳು, ಮೇಘ ಮುಸುಕು, ಮಂಜು ಹಾಸು ಹೊಕ್ಕು ಹಬ್ಬಿರುವ ದೃಶ್ಯ ಪ್ರವಾಸಿಗರ ಕಣ್ಗೆ ಹಬ್ಬವಾಗಿದೆ. ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕುಗಳಲ್ಲಿನ ಸುಮಾರು 33,000 ಹೆಕ್ಟೇರ್ ಪ್ರದೇಶದಲ್ಲಿ ವಿಸ್ತರಿಸಿರುವ ಈ ಕಪ್ಪತ್ತಗುಡ್ಡದ ಸೌಂದರ್ಯವನ್ನು ಕಣ್ಣಾರೆ ನೋಡುವ ನೆಪವಾಗಿ ಪ್ರವಾಸಿಗರು ಕುಟುಂಬ ಸಮೇತ ಆಗಮಿಸುತ್ತಿದ್ದಾರೆ.
ದೇಶದಲ್ಲೇ ಶುದ್ಧ ಗಾಳಿ ನೀಡುವ ಪ್ರದೇಶ : ಕೇಂದ್ರ ಹವಾಮಾನ ಇಲಾಖೆ ಅಭಿಪ್ರಾಯದಂತೆ, ಈ ಪ್ರದೇಶವು ದೇಶದ ಅತ್ಯಂತ ಶುದ್ಧ ಗಾಳಿಯನ್ನು ಹೊಂದಿರುವ ಸ್ಥಳಗಳಲ್ಲಿ ಒಂದಾಗಿದ್ದು, ಇದರಿಂದಾಗಿ ಆರೋಗ್ಯಪರ ಪ್ರೇಮಿಗಳಿಗೆ ಇದು ಹೆಚ್ಚು ಹಿತವಾಗಿದೆ. ಅಪಾರ ಔಷಧೀಯ ಸಸ್ಯಸಂಪತ್ತು ಹೊಂದಿರುವ ಕಪ್ಪತ್ತಗುಡ್ಡ, ತನ್ನ ಸಹಜ ಪ್ರಾಕೃತಿಕ ಸಂಪತ್ತಿನಿಂದ ಪರಿಸರ ಪ್ರೇಮಿಗಳನ್ನು ಆಕರ್ಷಿಸುತ್ತಿದೆ.
ಈ ಪ್ರದೇಶದಲ್ಲಿ ಈಗ ಟ್ರೆಕ್ಕಿಂಗ್ ವ್ಯವಸ್ಥೆ ಪ್ರಾರಂಭಗೊಂಡಿದ್ದು, ಮಳೆಗಾಲದ ಹಸಿರು ಸೌಂದರ್ಯ ನಡುವೆ ಸಾಗುವ ಈ ಪಯಣ ಪ್ರವಾಸಿಗರಿಗೆ ನಿಜವಾದ ಅನುಭವ ನೀಡುತ್ತಿದೆ. ಧಾರವಾಡ, ಬಾಗಲಕೋಟೆ, ಬಳ್ಳಾರಿ, ಹುಬ್ಬಳ್ಳಿ, ಕೊಪ್ಪಳ, ವಿಜಯಪುರ, ಹಾವೇರಿ ಹಾಗೂ ಬೆಳಗಾವಿ ಜಿಲ್ಲೆಗಳಿಂದ ನಿತ್ಯ ನೂರಾರು ಪ್ರವಾಸಿಗರು ಇಲ್ಲಿ ಆಗಮಿಸುತ್ತಿದ್ದು, ವಾರಾಂತ್ಯದಲ್ಲಿ ಐದು ಸಾವಿರಕ್ಕೂ ಹೆಚ್ಚು ಮಂದಿ ಬರುತ್ತಿದ್ದಾರೆ.
ಹಿಂದೆ ರಸ್ತೆಯ ಟ್ರಾಫಿಕ್ ಸಮಸ್ಯೆ ಇದ್ದರೂ, ಇದೀಗ ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತದಿಂದ ಸಾಕಷ್ಟು ಕ್ರಮಗಳನ್ನ ಕೈಗೊಳ್ಳಲಾಗಿದ್ದು, ಪ್ರವಾಸಿಗರಿಗೆ ಅನುಕೂಲವಾಗಿರುವ ವ್ಯವಸ್ಥೆ ಕಲ್ಪಿಸಲಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕುಮಾರ್ ಅವರು, “ಪ್ರವಾಸಿಗರ ಸುರಕ್ಷತೆ ಮತ್ತು ಸೌಕರ್ಯಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಎಲ್ಲರೂ ಜವಾಬ್ದಾರಿಯುತವಾಗಿ ಸಹಕರಿಸಿ ಪರಿಸರ ಸಂರಕ್ಷಣೆಗೂ ಕೈಜೋಡಿಸಬೇಕು” ಎಂದು ತಿಳಿಸಿದ್ದಾರೆ.
ಕಪ್ಪತ್ತಗುಡ್ಡ ಪ್ರವಾಸಿಗರಿಗೆ ಕೇವಲ ದೃಶ್ಯ ವೈಭವವಲ್ಲ, ಶುದ್ಧ ಗಾಳಿ, ಔಷಧೀಯ ಗಿಡಮೂಲಿಕೆಗಳು, ಮತ್ತು ಜೈವ ವೈವಿಧ್ಯತೆಯೊಂದಿಗೆ ಮನಸ್ಸಿಗೆ ಶಾಂತಿ ನೀಡುವ ಸ್ಥಳವಾಗಿ ಪರಿಗಣಿಸಲಾಗಿದೆ. ಇಲ್ಲಿ ಒಮ್ಮೆ ಬಂದವರು ಮತ್ತೆ ಮರಳಿ ಬರಲೇಬೇಕೆಂಬ ಆಸೆ ತರುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP