ಬಳ್ಳಾರಿ, 26 ಜುಲೈ (ಹಿ.ಸ.) :
ಆ್ಯಂಕರ್ : ಕಾರ್ಗಿಲ್ ಯುದ್ಧದ ಗೆಲುವು ಭಾರತೀಯ ಸೈನ್ಯದ ಆತ್ಮಸ್ಥೈರ್ಯ, ಧೈರ್ಯ, ತ್ಯಾಗದ ಜೊತೆಯಲ್ಲಿ ದೇಶಾಭಿಮಾನವನ್ನು ಸಾಕ್ಷೀಕರಿಸುತ್ತದೆ ಎಂದು ಶ್ರೀ ವಾಸವಿ ಎಜ್ಯುಕೇಷನ್ ಟ್ರಸ್ಟನ ಉಪಾಧ್ಯಕ್ಷ ಜಿತೇಂದ್ರ ಪ್ರಸಾದ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶ್ರೀ ವಾಸವಿ ವಿದ್ಯಾಲಯದಲ್ಲಿ ಶನಿವಾರ ನಡೆದ `ಕಾರ್ಗಿಲ್ ವಿಜಯ ದಿವಸ್' ಸಂಭ್ರಮಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾರ್ಗಿಲ್ ವಿಜಯೋತ್ಸವವು ನಮ್ಮ ದೇಶದ ಭವಿಷ್ಯದ ಪೀಳಿಗೆಯಲ್ಲಿ ದೇಶಾಭಿಮಾನವನ್ನು ಮೂಡಿಸುವಲ್ಲಿ ಸ್ಫೂರ್ತಿ ನೀಡಲಿದೆ ಎಂದರು.
ಮುಖ್ಯ ಅತಿಥಿಗಳಾದ ವೀರ ಸೈನಿಕರಾದ ದೇವರಾಜ್ ಅವರು, ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆ ತೋರಿಸಿದ ಅದ್ವಿತೀಯ ಶೌರ್ಯ, ಧೈರ್ಯ ಮತ್ತು ಬಲಿದಾನಗಳು ಈ ಕ್ಷಣವೂ ಅನೇಕರಲ್ಲಿ ರೋಮಾಂಚನ ಅನುಭವವನ್ನು ಮೂಡಿಸುತ್ತವೆ. ನಮ್ಮ ವೀರ ಯೋಧರು ಹಿಮಾಲಯದ ಚಳಿಯಲ್ಲಿ ದೇಶಕ್ಕಾಗಿ ಹೋರಾಡಿದ ಅಭೂತಪೂರ್ವ ಸಾಹಸಗಾಥೆಗಳನ್ನು ಮೂಡಿಸುತ್ತದೆ ಎಂದರು.
ವಿದ್ಯಾರ್ಥಿ ಆದಿತ್ಯಗೌಡ ಅವರು, 1999ರ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ವೀರ ಸೈನಿಕರು ಪ್ರದರ್ಶಿಸಿದ
ಅಪ್ರತಿಮ ಶೌರ್ಯ, ತ್ಯಾಗ ಮತ್ತು ದೇಶಭಕ್ತಿಯ ಬಗ್ಗೆ ವಿವರಿಸಿದರು. ಮುಖ್ಯ ಅತಿಥಿಗಳಾಗಿದ್ದ ವೀರ ಸೈನಿಕರಾದ ದೇವರಾಜ್ ಮತ್ತು ಕುಮಾರಸ್ವಾಮಿ ಅವರನ್ನು ಅಭಿನಂದಿಸಿ, ಗೌರವಿಸಲಾಯಿತು.
ಶ್ರೀ ವಾಸವಿ ಎಜ್ಯುಕೇಷನ್ ಟ್ರಸ್ಟ್‍ನ ಸದಸ್ಯರಾದ ವೆಂಕಟೇಶಬಾಬು, ಶಾಲಾ ಮುಖ್ಯೋಪಾಧ್ಯಾಯ ವೀರೇಶ್ ಯು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿನಿಯರು ದೇಶಭಕ್ತಿ ಮತ್ತು ಯೋಧರ ಬಲಿದಾನದ ತಾತ್ಪರ್ಯದ ಪ್ರಾತಕ್ಷಿಕೆ ಪ್ರದರ್ಶನ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್