ಬೆಂಗಳೂರು, 26 ಜುಲೈ (ಹಿ.ಸ.) :
ಆ್ಯಂಕರ್ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧಾರ್ಮಿಕ ಕೇಂದ್ರ ಧರ್ಮಸ್ಥಳದ ಸುತ್ತಮುತ್ತ ಕಳೆದ ಎರಡು ದಶಕಗಳಲ್ಲಿ ನೂರಾರು ಅಸಹಜ ಸಾವುಗಳು ನಡೆದಿವೆ ಎಂಬ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಕರ್ನಾಟಕ ರಾಜ್ಯ ಸಮಿತಿಯು ಆಗ್ರಹಿಸಿದೆ.
ಪಕ್ಷದ ರಾಜ್ಯ ಕಾರ್ಯದರ್ಶಿ ಕೆ. ಉಮಾ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ, ಅನನ್ಯಾ ಭಟ್, ಸೌಜನ್ಯ ಸೇರಿದಂತೆ ಅನೇಕ ಎಳೆಯ ಬಾಲಕಿಯರ ಮೃತ್ಯು ಪ್ರಕರಣಗಳು ಇನ್ನೂ ಪರಿಹಾರಕ್ಕೆ ಬಂದಿಲ್ಲ ಎಂದು ಉಲ್ಲೇಖಿಸಲಾಗಿದೆ. ಇತ್ತೀಚೆಗೆ ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕನೊಬ್ಬ, ನೂರಾರು ಮಹಿಳಾ ಶವಗಳನ್ನು ಹೂತಿರುವುದಾಗಿ ಸ್ಫೋಟಕ ಹೇಳಿಕೆ ನೀಡಿದ್ದು, ಪ್ರಕರಣಕ್ಕೆ ಗಂಭೀರತೆಯ ಮೂಡಿಸಿದೆ.
ರಾಜ್ಯ ಸರ್ಕಾರವು ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿ ತನಿಖೆ ಆರಂಭಿಸಿರುವುದನ್ನು ಎಸ್‌ಯುಸಿಐ(ಸಿ) ಸ್ವಾಗತಿಸಿದ್ದು. ಆದರೆ ಯಾವುದೇ ರಾಜಕೀಯ ಅಥವಾ ಧಾರ್ಮಿಕ ಪ್ರಭಾವದಿಂದ ಮುಕ್ತವಾಗಿ, ಸತ್ಯಾಂಶ ಅನಾವರಣಗೊಳ್ಳಬೇಕು ಹಾಗೂ ಅಪರಾಧಿಗಳಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದರ ಮೇಲಷ್ಟೇ ಪಕ್ಷದ ಒತ್ತಾಯವಿದೆ ಎಂದು ಕೆ.ಉಮಾ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa