ಬಳ್ಳಾರಿ, 26 ಜುಲೈ (ಹಿ.ಸ.) :
ಆ್ಯಂಕರ್ : ದೇಶಕ್ಕೆ ಸೈನಿಕರು ಮತ್ತು ರೈತರು ಎರಡು ಕಣ್ಣುಗಳಂತೆ ಇದ್ದು, ರೈತರು 140 ಕೋಟಿ ಜನಕ್ಕೆ ಅನ್ನ ನೀಡುತ್ತಿದ್ದು, ಸೈನಿಕರು 140 ಕೋಟಿ ಜನಕ್ಕೆ ಆಂತರಿಕ ಮತ್ತು ಬಾಹ್ಯ ರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಮಾಜಿ ಅರಸೇನಾ ಸೈನಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಪ್ರಹ್ಲಾದ ರೆಡ್ಡಿ ಅವರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ಕಚೇರಿಯ ಮುಂಭಾಗದಲ್ಲಿರುವ `ಅಮರ್ ಜವಾನ್' ಸ್ಮಾರಕದಲ್ಲಿ ಶನಿವಾರ ನಡೆದ ಕಾರ್ಗಿಲ್ ವಿಜಯ ದಿವಸದ ಸಮಾರಂಭದಲ್ಲಿ ಮಾತನಾಡಿದ ಅವರು, ಸೈನಿಕರು ಚಳಿ, ಮಳೆ, ಪ್ರತಿಕೂಲ ವಾತಾವರಣದಲ್ಲಿ ದೇಶಕ್ಕಾಗಿ ತ್ಯಾಗಿ ಮಾಡುತ್ತಾರೆ. ಸೈನಿಕರ ದೇಶಾಭಿಮಾನ, ರಾಷ್ಟ್ರಭಕ್ತಿ ಸದಾ ಸ್ಮರಣೀಯ ಎಂದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್ ಅವರು, ಪಾಕಿಸ್ತಾನದ ಸೈನ್ಯದ ಕುತಂತ್ರದಿಂದ ನಡೆದ ಕಾರ್ಗಿಲ್ ಯುದ್ಧವು 60 ದಿನಗಳ ಕಾಲ ನಡೆದು, ಅನೇಕ ವೀರಯೋಧರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿ ಅಮರರಾಗಿ ದೇಶಕ್ಕೆ ವಿಜಯವನ್ನು ತಂದುಕೊಟ್ಟರು. ಈ ಹಿನ್ನಲೆಯಲ್ಲಿ ಪ್ರತೀ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಗುತ್ತಿದೆ ಎಂದರು.
ಬಳ್ಳಾರಿ ಜಿಲ್ಲಾ ಪಂಚಾಯತಿ ಸಿಇಓ ಎಂ.ಡಿ. ಹ್ಯಾರೀಸ್ ಸುಮೈರ್, ಬಳ್ಳಾರಿ ಕೇಂದ್ರ ಕಾರಾಗೃಹದ ಅಧೀಕ್ಷಕಿ ಲತಾ, ಮಹಾನಗರ ಪಾಲಿಕೆ ಸದಸ್ಯ ಕೆ. ಹನುಮಂತಪ್ಪ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪ್ರತಾಪ್, ಚನ್ನಾರೆಡ್ಡಿ, ಅಣ್ಣಾ ಫೌಂಡೇಶನ್‍ನ ರಾಜಶೇಖರ್ ಮುಲಾಲಿ ಇನ್ನಿತರರು ವೇದಿಕೆಯಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್