ನವದೆಹಲಿ, 23 ಜುಲೈ (ಹಿ.ಸ.) :
ಆ್ಯಂಕರ್ : ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿ ಹಾಗೂ ಆಪರೇಷನ್ ಸಿಂಧೂರ್ ಕುರಿತು ಮುಂದಿನ ವಾರ ಸಂಸತ್ತಿನ ಉಭಯ ಸದನಗಳಲ್ಲಿ ವಿಶೇಷ ಚರ್ಚೆ ನಡೆಯಲಿದೆ.
ಇಂದು ನಡೆದ ರಾಜ್ಯ ಸಭೆಯ ವ್ಯವಹಾರ ಸಲಹಾ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿಪಕ್ಷಗಳ ಒತ್ತಾಯದ ಮೇರೆಗೆ, ಈ ಚರ್ಚೆಗೆ ಎರಡು ದಿನಗಳ ಕಾಲ, ಒಟ್ಟು 16 ಗಂಟೆಗಳ ಕಾಲಾವಕಾಶವನ್ನು ನೀಡಲು ಸರಕಾರ ಒಪ್ಪಿಗೆ ಸೂಚಿಸಿದೆ ಎಂದು ರಾಜ್ಯ ಸಭೆಯ ಪ್ರತಿಪಕ್ಷದ ಉಪ ನಾಯಕ ಪ್ರಮೋದ್ ತಿವಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
“ಇದು ರಾಷ್ಟ್ರದ ಭದ್ರತೆ ಮತ್ತು ಭವಿಷ್ಯಕ್ಕೆ ಸಂಬಂಧಿಸಿದ ಅತ್ಯಂತ ಗಂಭೀರ ವಿಷಯ. ಈ ಕಾರಣಕ್ಕಾಗಿ ಚರ್ಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಜರಿರಬೇಕು ಎಂಬುದು ನಮ್ಮ ಸ್ಪಷ್ಟ ಬೇಡಿಕೆ. ಸರ್ಕಾರ ಈ ಬಗ್ಗೆ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ” ಎಂದಿದ್ದಾರೆ ತಿವಾರಿ.
ಈ ಮಧ್ಯೆ, ಪ್ರಧಾನಿ ಮೋದಿ ಜುಲೈ 23ರಿಂದ 26ರವರೆಗೆ ಯುಕೆ ಹಾಗೂ ಮಾಲ್ಡೀವ್ಸ್ ಪ್ರವಾಸದಲ್ಲಿರುವ ಹಿನ್ನೆಲೆಯಲ್ಲಿ, ಅವರು ಹಿಂದಿರುಗಿದ ನಂತರ ಲೋಕ ಸಭೆಯಲ್ಲಿ ಮೊದಲಿಗೆ ಹಾಗೂ ಬಳಿಕ ರಾಜ್ಯ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಇದೇ ವೇಳೆ ರಾಜ್ಯ ಸಭೆಯ ಕಲಾಪವು ಪ್ರತಿ ಪಕ್ಷಗಳ ಗದ್ದಲದ ಹಿನ್ನೆಲೆ ಮಧ್ಯಾಹ್ನ 2 ಗಂಟೆಯ ಬಳಿಕವೂ ಮುಂದುವರಿಯಲು ಸಾಧ್ಯವಾಗದೆ, ಗುರುವಾರ ಬೆಳಿಗ್ಗೆ 11 ಗಂಟೆಗೆ ಮುಂದೂಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa