ಬೆಂಗಳೂರು, 23 ಜುಲೈ (ಹಿ.ಸ.) :
ಆ್ಯಂಕರ್ : ಆದಾಯಕ್ಕೂ ಮೀರಿ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕದ ಹಲವೆಡೆ ಬುಧವಾರ ಬೆಳಿಗ್ಗೆ ಲೋಕಾಯುಕ್ತ ಇಲಾಖೆ ಅಧಿಕಾರಿಗಳು ದಿಢೀರ ದಾಳಿ ನಡೆಸಿದ್ದಾರೆ. ಬೆಂಗಳೂರು, ಮೈಸೂರು, ಬಳ್ಳಾರಿ, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳ ಹಲವಾರು ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಈ ದಾಳಿ ನಡೆದಿದೆ.
ಐಎಎಸ್ ಅಧಿಕಾರಿ ಮನೆ ಮೇಲೆ ದಾಳಿ
ಬೆಂಗಳೂರು ಆರ್‌ಟಿ ನಗರದಲ್ಲಿರುವ ಹಿರಿಯ ಐಎಎಸ್ ಅಧಿಕಾರಿ ವಾಸಂತಿ ಅಮರ್ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಸರ್ಕಾರಿ ಜಮೀನನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪ ಇವರ ಮೇಲೆ ಕೇಳಿಬಂದಿದ್ದು, ಅವರು ನಗರ ವಿಶೇಷ ಡಿಸಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಮೈಸೂರು ದಾಳಿ:
ಮೈಸೂರಿನಲ್ಲಿ ಪಾಲಿಕೆ ಉಪ ವಿಭಾಗಾಧಿಕಾರಿ ವೆಂಕಟರಾಮ್ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥಸ್ವಾಮಿ ಅವರ ಮನೆಗಳ ಮೇಲೂ ದಾಳಿ ನಡೆದಿದೆ. ಇಬ್ಬರ ಮೇಲೂ ಆದಾಯಕ್ಕೂ ಮೀರಿ ಆಸ್ತಿ ಹೊಂದಿರುವ ಆರೋಪವಿದೆ.
ಬಳ್ಳಾರಿ ದಾಳಿ:
ಬೆಂಗಳೂರು ಟೌನ್ ಮತ್ತು ರೂರಲ್ ಪ್ಲ್ಯಾನಿಂಗ್ ಅಧಿಕಾರಿ ಮಾರುತಿ ಬಗಲಿ ವಿರುದ್ಧ ಬಳ್ಳಾರಿಯಲ್ಲಿ ಮೂರು ಕಡೆ ದಾಳಿ ನಡೆದಿದೆ. ಮಾರುತಿ ಬಗಲಿ ಬೆಂಗಳೂರು ನಿವಾಸಿಯಾಗಿದ್ದು, ಹಲವೆಡೆ ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿದ್ದಾರೆ.
ಕೊಪ್ಪಳದಲ್ಲಿ ದಾಳಿ
ಕೊಪ್ಪಳ ಜಿಲ್ಲೆಯ ಕೈಗಾರಿಕೆ ಮತ್ತು ವಾಣಿಜ್ಯ ವಿಭಾಗದ ಉಪನಿದೇಶಕ ಶೇಕು ಚವ್ಹಾಣ್ ಮನೆ ಮೇಲೆ ಲೋಕಾಯುಕ್ತ ತಂಡ ದಾಳಿ ನಡೆಸಿದ್ದು, ಅಭಿಷೇಕ ಬಡಾವಣೆ ಮತ್ತು ಕೀರ್ತಿ ಕಾಲೋನಿಯಲ್ಲಿರುವ ಅವರ ಮನೆಗಳಲ್ಲಿ ಪರಿಶೀಲನೆ ನಡೆದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa