ಜಮ್ಮು, 23 ಜುಲೈ (ಹಿ.ಸ.) :
ಆ್ಯಂಕರ್ : ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಭೀಕರ ಭೂಕುಸಿತದಿಂದ ಇಬ್ಬರು ಯುವಕರು ದುರ್ಮರಣಕ್ಕೀಡಾಗಿದ್ದಾರೆ. ಮಹೌರ್‌ನ ಬಡೋರಾ ಪ್ರದೇಶದಲ್ಲಿರುವ ಪ್ರಸಿದ್ಧ ಶಿವ ಗುಹೆ ಬಳಿ ತಡರಾತ್ರಿ ಈ ಘಟನೆ ಸಂಭವಿಸಿದೆ.
ಅಧಿಕಾರಿಗಳ ಪ್ರಕಾರ, ಘಟನೆ ವೇಳೆ ಇಬ್ಬರು ಯುವಕರು ಗುಹೆಯ ಸಮೀಪದಲ್ಲಿರುವ ಟೆಂಟ್‌ನಲ್ಲಿ ವಿಶ್ರಾಂತಿಯಲ್ಲಿದ್ದರು. ಆ ಸಮಯದಲ್ಲಿ ಹತ್ತಿರದ ಪರ್ವತದಿಂದ ಬಿದ್ದ ಅವಶೇಷಗಳು ಟೆಂಟ್ ಮೇಲೆ ಕುಸಿದಿದ್ದು, ಭಾರದಿಂದಾಗಿ ಟೆಂಟ್ ಕುಸಿದುಬಿದ್ದು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರಶ್ಪಾಲ್ ಸಿಂಗ್ (26), ರವಿ ಕುಮಾರ್ (23) ಮೃತ ದುರ್ದೈವಿಗಳು.
ಈ ಇಬ್ಬರೂ ಯುವಕರು ಶಿವ ಗುಹಾ ದೇವಾಲಯದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದ ತಯಾರಿಗೆ ಸ್ಥಳದಲ್ಲಿ ಇದ್ದರು ಎನ್ನಲಾಗಿದೆ.
ಮಾಹಿತಿ ಪಡೆದ ಸ್ಥಳೀಯ ಪೊಲೀಸ್ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಶವಗಳನ್ನು ತೆರವುಗೊಳಿಸಿದ್ದಾರೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa