ಪಾಟ್ನಾ, 23 ಜುಲೈ (ಹಿ.ಸ.) :
ಆ್ಯಂಕರ್ : ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಿರ್ಮಿಸಲಾದ ಬುದ್ಧ ಸಮ್ಯಕ್ ದರ್ಶನ ವಸ್ತು ಸಂಗ್ರಹಾಲಯ ಮತ್ತು ಸ್ಮೃತಿ ಸ್ತೂಪವನ್ನು ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ಜುಲೈ 29ರಂದು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ.
ಬೌದ್ಧ ಧರ್ಮದ ಧಾರ್ಮಿಕ-ಸಾಂಸ್ಕೃತಿಕ ಪ್ರಭಾವದ ಪ್ರತೀಕವಾಗಿರುವ ಈ ಭವ್ಯ ಸಂಕೀರ್ಣವು, ಜಾಗತಿಕ ಬೌದ್ಧ ಸಮುದಾಯದ ಭಕ್ತಿ ಕೇಂದ್ರವಾಗಲಿದೆ.
15 ಬೌದ್ಧ ರಾಷ್ಟ್ರಗಳ ಸನ್ಯಾಸಿಗಳ ಉಪಸ್ಥಿತಿ ಸಾಧ್ಯತೆ
ಉದ್ಘಾಟನಾ ಸಮಾರಂಭದಲ್ಲಿ ಚೀನಾ, ಜಪಾನ್, ಶ್ರೀಲಂಕಾ, ನೇಪಾಳ, ಥೈಲ್ಯಾಂಡ್, ಟಿಬೆಟ್, ಮ್ಯಾನ್ಮಾರ್, ವಿಯೆಟ್ನಾಂ, ಲಾವೋಸ್, ಮಲೇಷ್ಯಾ, ಭೂತಾನ್, ಬಾಂಗ್ಲಾದೇಶ, ಇಂಡೋನೇಷ್ಯಾ, ಕಾಂಬೋಡಿಯಾ ಮತ್ತು ಮಂಗೋಲಿಯಾ ಸೇರಿ 15 ಬೌದ್ಧ ರಾಷ್ಟ್ರಗಳ ಧಾರ್ಮಿಕ ನಾಯಕರು ಭಾಗವಹಿಸುವ ಸಾಧ್ಯತೆ ಇದೆ.
ಭವ್ಯ ಯೋಜನೆ – ಐತಿಹಾಸಿಕ ಹಾಗೂ ತಾಂತ್ರಿಕ ವಿಶಿಷ್ಟತೆ
ಬಳಕೆ ಇಲ್ಲದ 72 ಎಕರೆ ಭೂಮಿಯಲ್ಲಿ 550 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸಂಕೀರ್ಣದಲ್ಲಿ ಧ್ಯಾನ ಕೇಂದ್ರ, ಗ್ರಂಥಾಲಯ, ವಸ್ತುಸಂಗ್ರಹಾಲಯ ಬ್ಲಾಕ್, ಆಂಫಿಥಿಯೇಟರ್, ಕೆಫೆಟೇರಿಯಾ, ಪಾರ್ಕಿಂಗ್ ಸೇರಿದಂತೆ 500 ಕಿಲೋವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕವಿದೆ. ಸ್ತೂಪವನ್ನು ಸಂಪೂರ್ಣವಾಗಿ ರಾಜಸ್ಥಾನದಿಂದ ತರಲಾದ ಮರಳುಗಲ್ಲುಗಳಿಂದ ನಿರ್ಮಿಸಲಾಗಿದೆ.
ಬುದ್ಧನ ಪವಿತ್ರ ಅವಶೇಷಗಳು ಪ್ರಧಾನ ಆಕರ್ಷಣೆ
1958-62ರ ಉತ್ಖನನದಲ್ಲಿ ಪತ್ತೆಯಾದ ಭಗವಾನ್ ಬುದ್ಧನ ಪವಿತ್ರ ಅವಶೇಷಗಳನ್ನು ವಸ್ತುಸಂಗ್ರಹಾಲಯದ ಮೊದಲ ಮಹಡಿಯಲ್ಲಿ ಸಂಗ್ರಹಿಸಲಾಗುತ್ತದೆ. ಇವು ಈ ಸ್ಮಾರಕದ ಭಕ್ತಿಯ ಕೇಂದ್ರವಾಗಲಿವೆ. ಒಡಿಶಾದ ಶಿಲ್ಪಿಗಳಿಂದ ನಿರ್ಮಿಸಲಾದ ಭಗವಾನ್ ಬುದ್ಧನ ಪ್ರತಿಮೆ ಈ ಸ್ಥಳದ ಆಧ್ಯಾತ್ಮಿಕ ಆಕರ್ಷಣೆಯಾಗಿ ಮೆರೆಯಲಿದೆ.
ವೈಶಾಲಿಗೆ ಜಾಗತಿಕ ಸ್ಥಾನಮಾನ
ಈ ಸ್ಮಾರಕ ಬೌದ್ಧ ಪರಂಪರೆಯ ಪ್ರತೀಕವಾಗಿ ವೈಶಾಲಿ ಜಿಲ್ಲೆ ಜಾಗತಿಕ ಧಾರ್ಮಿಕ ಭೂಪಟದಲ್ಲಿ ಸ್ಥಾಪಿಸಲು ಸಹಾಯಕವಾಗುತ್ತದೆ. ಸ್ಥಳೀಯ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಉದ್ಯೋಗಕ್ಕೆ ಇದು ಹೊಸ ಬಾಗಿಲು ತೆರೆಯಲಿದ್ದು, ಬಿಹಾರದ ಸಾಂಸ್ಕೃತಿಕ ಘನತೆಯ ಸಂಕೇತವಾಗಿದೆ ಎಂದು ಇಲಾಖೆ ಕಾರ್ಯದರ್ಶಿ ಕುಮಾರ್ ರವಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa