ನವದೆಹಲಿ, 23 ಜುಲೈ (ಹಿ.ಸ.) :
ಆ್ಯಂಕರ್ : ಬಾಂಗ್ಲಾದೇಶದಲ್ಲಿ ನಡೆದ ಭಯಾನಕ ಸೇನಾ ವಿಮಾನ ಅಪಘಾತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಭಾರತವು ಸುಟ್ಟಗಾಯಗಳ ತಜ್ಞ ವೈದ್ಯರು ಹಾಗೂ ದಾದಿಯರ ತಂಡವನ್ನು ಢಾಕಾಗೆ ಕಳುಹಿಸಿದೆ. ಈ ತಂಡವು ಮಂಗಳವಾರ ರಾತ್ರಿ ದೆಹಲಿಯಿಂದ ಹೊರಟಿದ್ದು, ಢಾಕಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತರಿಗೆ ಅಗತ್ಯ ವೈದ್ಯಕೀಯ ನೆರವನ್ನು ಒದಗಿಸುತ್ತದೆ.
ಜುಲೈ 21 ರಂದು ಢಾಕಾದ ಮೈಲ್‌ಸ್ಟೋನ್ ಶಾಲೆ ಮತ್ತು ಕಾಲೇಜು ಕಟ್ಟಡಕ್ಕೆ ಬಾಂಗ್ಲಾದೇಶ ವಾಯುಪಡೆಯ ಚೀನಾ ನಿರ್ಮಿತ F-7 BGI ತರಬೇತಿ ಯುದ್ಧ ವಿಮಾನ ಅಪ್ಪಳಿಸಿತು. ತಾಂತ್ರಿಕ ದೋಷದಿಂದ ಸಂಭವಿಸಿದ ಈ ಅಪಘಾತದಲ್ಲಿ ಕನಿಷ್ಠ 31 ಜನರು ಸಾವನ್ನಪ್ಪಿದ್ದು, ಅವರಲ್ಲಿ ಹೆಚ್ಚಿನವರು ಶಾಲಾ ಮಕ್ಕಳು ಎಂದು ದೃಢಪಡಿಸಲಾಗಿದೆ. ಇನ್ನು 165 ಮಂದಿ ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ.
ಭಾರತದಿಂದ ತೆರಳಿದ ವೈದ್ಯರ ತಂಡದಲ್ಲಿ ದೆಹಲಿಯ ರಾಮ್ ಮನೋಹರ್ ಲೋಹಿಯಾ ಹಾಗೂ ಸಫ್ದರ್ಜಂಗ್ ಆಸ್ಪತ್ರೆಗಳ ತಜ್ಞರು ಇದ್ದಾರೆ. ಅವರು ಗಾಯಾಳುಗಳ ಸ್ಥಿತಿಯನ್ನು ಪರಿಗಣಿಸಿ, ಅಗತ್ಯವಿದ್ದರೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಭಾರತಕ್ಕೆ ತರಲು ಶಿಫಾರಸು ಮಾಡುವ ಸಾಧ್ಯತೆ ಇದೆ.
ಅಪಘಾತದ ಬಳಿಕ, ಮೃತರ ಪರಿಚಯದ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ, ಮತ್ತು ಹಳೆಯ ಯುದ್ಧ ವಿಮಾನಗಳನ್ನು ಬಳಕೆ ಮುಕ್ತಗೊಳಿಸುವಂತೆ ಢಾಕಾದಲ್ಲಿ ನಾಗರಿಕರು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಮಧ್ಯಂತರ ಸರ್ಕಾರದ ಪ್ರಮುಖ ಸಲಹೆಗಾರ ಸ್ಥಳಕ್ಕೆ ಭೇಟಿ ನೀಡಿದಾಗ, ಜನರ ಭಾರೀ ವಿರೋಧಕ್ಕೆ ಗುರಿಯಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa