ಶಿಮ್ಲಾ, 21 ಜುಲೈ (ಹಿ.ಸ.):
ಆ್ಯಂಕರ್:ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯು ಭೀಕರ ಪರಿಣಾಮ ಬೀರುತ್ತಿದ್ದು, ರಾಜ್ಯದ ಅನೇಕ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹಲವಾರು ಉಪವಿಭಾಗಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಚಂಬಾ ಜಿಲ್ಲೆಯಲ್ಲಿ ಮನೆ ಮೇಲೆ ಬಿದ್ದ ಕಲ್ಲಿನಿಂದ ಇಬ್ಬರು ಸಾವಿಗೀಡಾಗಿದ್ದು, ಭೂಕುಸಿತದಿಂದ ಹಲವಾರು ರಸ್ತೆಗಳ ಸಂಪರ್ಕ ಕಡಿತವಾಗಿದೆ. ರಾಜ್ಯದ ಶಿಮ್ಲಾ, ಮಂಡಿ, ಕಾಂಗ್ರಾ, ಸಿರ್ಮೌರ್, ಕುಲ್ಲು ಸೇರಿ ಹಲವು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆ ಮುಂದಿನ 72 ಗಂಟೆಗಳವರೆಗೆ ತೀವ್ರವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಕಿತ್ತಳೆ ಎಚ್ಚರಿಕೆ ನೀಡಿದೆ.
ಭೂಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿ 305 ಸೇರಿದಂತೆ ಹಲವು ಪ್ರಮುಖ ರಸ್ತೆಗಳು ಬಂದ್ ಆಗಿದ್ದು, ನದಿಗಳ ನೀರಿನ ಮಟ್ಟ ಹೆಚ್ಚಳದ ಕಾರಣ ಕೆಲ ಅಣೆಕಟ್ಟುಗಳಿಂದ ನೀರು ಹೊರಬಿಡಲಾಗಿದೆ. ಜನರು ನದಿಗಳಿಂದ ದೂರವಿರಲು ಸೂಚಿಸಲಾಗಿದೆ.
ಇದುವರೆಗೆ 119 ಜನರು ಸಾವಿಗೀಡಾಗಿದ್ದು, 34 ಜನರು ಕಾಣೆಯಾಗಿದ್ದಾರೆ. 377 ಮನೆಗಳು, 264 ಅಂಗಡಿಗಳು ಸಂಪೂರ್ಣ ನಾಶವಾಗಿವೆ. ಮಂಡಿ ಜಿಲ್ಲೆ ಹೆಚ್ಚು ಹಾನಿಗೆ ಒಳಗಾಗಿದೆ. ರಾಜ್ಯ ಸರ್ಕಾರ ಮತ್ತು ತುರ್ತು ನಿರ್ವಹಣಾ ಘಟಕಗಳು ಕಾರ್ಯಾಚರಣೆಯಲ್ಲಿ ತೊಡಗಿವೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa