ಜಿಲ್ಲಾಡಳಿತದಿಂದ ಡಾ.ಫ.ಗು.ಹಳಕಟ್ಟಿ ಅವರ ಜಯಂತಿ
ರಾಯಚೂರು, 02 ಜುಲೈ (ಹಿ.ಸ.) : ಆ್ಯಂಕರ್ : ಡಾ.ಫ.ಗು.ಹಳಕಟ್ಟಿ ಅವರು ವಚನಗಳ ಹಸ್ತ ಪ್ರತಿಗಳನ್ನು ಸಂಗ್ರಹಿಸಿ, ಪ್ರಕಟಿಸಿ, ಶರಣ ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ರಾಯಚೂರು ತಹಶೀಲ್ದಾರ್ ಸುರೇಶ ವರ್ಮ ಅವರು ಹೇಳಿದ್ದಾರೆ. ಜು.02ರ ಬುಧವಾರ ದಂದು ನಗರದ ಪಂಡಿತ್
ಜಿಲ್ಲಾಡಳಿತದಿಂದ ಡಾ.ಫ.ಗು.ಹಳಕಟ್ಟಿ ಅವರ ಜಯಂತಿ


ರಾಯಚೂರು, 02 ಜುಲೈ (ಹಿ.ಸ.) :

ಆ್ಯಂಕರ್ : ಡಾ.ಫ.ಗು.ಹಳಕಟ್ಟಿ ಅವರು ವಚನಗಳ ಹಸ್ತ ಪ್ರತಿಗಳನ್ನು ಸಂಗ್ರಹಿಸಿ, ಪ್ರಕಟಿಸಿ, ಶರಣ ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ರಾಯಚೂರು ತಹಶೀಲ್ದಾರ್ ಸುರೇಶ ವರ್ಮ ಅವರು ಹೇಳಿದ್ದಾರೆ.

ಜು.02ರ ಬುಧವಾರ ದಂದು ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಡಾ.ಫ.ಗು. ಹಳಕಟ್ಟಿಯವರ ಜನ್ಮದಿನದ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರಳ, ಸಜ್ಜನಿಕೆ, ಕ್ರಿಯಾಶೀಲತೆ, ವಿಶೇಷ ಆಸಕ್ತಿ, ಪರಿಶ್ರಮ ಮತ್ತು ಕನ್ನಡ ನಾಡು, ನುಡಿ, ಹಾಗೂ ಸಾಹಿತ್ಯದ ಬಗ್ಗೆ ಅವರಿಗೆ ವಿಶೇಷ ಕಾಳಜಿ, ಪ್ರೀತಿ ಇದ್ದದ್ದನ್ನು ಗಮನಿಸಬಹುದು. ಅವರಲ್ಲಿಯ ಶಿಸ್ತು, ಶ್ರದ್ದೆ, ವಚನ ಸಾಹಿತ್ಯ ಸಂಗ್ರಹಕ್ಕೆ ಅವರು ಮಾಡಿದ ಸಾಹಸ ಪೂರ್ಣಕಾರ್ಯ ಶ್ಲಾಘನೀಯ ಹಾಗೂ ಸ್ಮರಣೀಯವಾಗಿದೆ ಎಂದರು.

ಹಸ್ತಪ್ರತಿಗಳು ಪ್ರಕಟಣೆಗೆಂದೇ ಶಿವಾನುಭವ ಪತ್ರಿಕೆಯನ್ನು 1926ರಲ್ಲಿ ಪ್ರಾರಂಭಿಸಿದರು. ಈ ಮಾಸ ಪತ್ರಿಕೆ 35ವರ್ಷಗಳ ಕಾಲ ನಿರಂತರ ನಡೆಸಿದರು. 1927ರಲ್ಲಿ ನವಕರ್ನಾಟಕ ವಾರ ಪತ್ರಿಕೆ ಆರಂಭಿಸಿದರು. ಈ ಎರಡು ಪತ್ರಿಕೆ ಸಂಪಾದಕ, ಮುದ್ರಿಕೆ ಫ.ಗು.ಹಳಕಟ್ಟಿಯವರೇ ಆಗಿದ್ದಾರೆ ಎಂದು ಹೇಳಿದರು.

ಉಪನ್ಯಾಸಕರಾಗಿ ಹಿರಿಯ ಸಾಹಿತಿ ಡಾ.ಚನ್ನಬಸವ ಹಿರೇಮಠ ಅವರು ಮಾತನಾಡಿ, ಫ.ಗು.ಹಳಕಟ್ಟಿ ಅವರು ಶರಣರ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸಿ ಸಂಶೋಧನಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. 1923 ರಲ್ಲಿ ಹಲವಾರು ವಚನ ಸಾಹಿತ್ಯದ ಹಸ್ತ ಪುಟಗಳನ್ನು ಪ್ರಕಟಿಸುವ ಉದ್ದೇಶದಿಂದ ಪ್ರಕಟಕರ ಜೊತೆ ಮಾತನಾಡಿ, ಅವುಗಳ ಪ್ರಕಟಣೆ ಮಾಡಿ ರಕ್ಷಣೆ ಮಾಡಿದರು. ವಚನ ಸಾಹಿತ್ಯದ ರಕ್ಷಣೆಗಾಗಿ ತಮ್ಮ ಸ್ವಂತ ಮನೆಯನ್ನೇ ಮಾರಿದ ಧೀಮಂತರಾಗಿದ್ದಾರೆ. ಹಲವಾರು ವಚನಕಾರರ ಸಾಹಿತ್ಯದ ಪ್ರಚಾರವನ್ನು ಮಾಡಿದರು. ಇಂದಿನ ಪೀಳಿಗೆಗೆ ವಚನ ಸಾಹಿತ್ಯದ ಜ್ಞಾನವು ಅತ್ಯವಶ್ಯಕ ಎಂದು ತಿಳಿಸಿದರು.

ಇಂಗ್ಲೀಷ್ ಶಿಕ್ಷಣದ ವ್ಯಾಮೋಹದಿಂದ ಇಂದಿನ ಮಕ್ಕಳು ಕನ್ನಡ ಸಾಹಿತ್ಯ ಓದಲು ಹಿಂಜರಿಯುತ್ತಿದ್ದು, ವಿದ್ಯಾರ್ಥಿಗಳು ಕನ್ನಡ ಸಾಹಿತ್ಯವನ್ನು ಹೆಚ್ಚಾಗಿ ಓದಿ ಕನ್ನಡ ಸಾಹಿತ್ಯವನ್ನು ಬೆಳೆಸಿ, ಫ.ಗು.ಹಳಕಟ್ಟಿ ಅವರ ಜೀವನದ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕೆಂದರು.

ಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಜೊತೆಗೆ ಸಂಘಟನೆ, ಬ್ಯಾಂಕಿಂಗ್, ಕೃಷಿ, ನೇಕಾರಿಕೆ, ಸಹಕಾರಿ ಹೀಗೆ ಎಲ್ಲದರಲ್ಲಿಯೂ ತಮ್ಮನ್ನು ತೊಡಗಿಸಿಕೊಂಡರು. 1910ರಲ್ಲಿ ಬಿಜಾಪುರ ಜಿಲ್ಲಾ ಲಿಂಗಾಯತ ವಿದ್ಯಾವರ್ಧಕ ಸಂಘ (ಬಿ.ಎಲ್.ಡಿ.ಇ.). 1912ರಲ್ಲಿ ಶ್ರೀಸಿದ್ದೇಶ್ವರ ಅರ್ಬನ್ ಕೋ..ಆಪರೇಟಿವ್ ಬ್ಯಾಂಕು, ಗ್ರಾಮೀಣ ಅಭಿವೃದ್ಧಿ ಸಂಘ, ಒಕ್ಕಲುತನ ಸಹಕಾರಿ ಸಂಘ, ನೇಕಾರರ ಸಂಘ, ಹತ್ತಿ ಮಾರಾಟಗಾರರು ಸಂಘ, ಸಹಕಾರ ಸಂಘಗಳನ್ನು ಸ್ಥಾಪಿಸಿ ಇವುಗಳ ಬೆಳವಣಿಗೆಗೆ ದುಡಿದರು. ಅಲ್ಲದೆ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಯಲ್ಲಿಯೂ ಇವರು ವಹಿಸಿದ ಪಾತ್ರ ಮಹತ್ವದ್ದಾಗಿದೆ ಎಂದರು.

ಹಳಕಟ್ಟಿ ಅವರು ವಚನ ಸಾಹಿತ್ಯದ ಕಡೆಗೆ ಲಕ್ಷ್ಯ ಹರಿಸದೇ ಇದ್ದರೆ ಇಂದು ನಮಗೆ ಶಿವಶರಣರ ವಚನಗಳು ದೊರಕುತ್ತಿರಲಿಲ್ಲ. ಕತ್ತಲ ಕಾಲ ಗರ್ಭದಲ್ಲಿದ್ದ ವಚನಗಳನ್ನು ಒಬ್ಬ ಸಾಮಾನ್ಯ ವಕೀಲರಾಗಿದ್ದುಕೊಂಡು ಶರಣರ ತತ್ವಾದರ್ಶಗಳು ಅವರೊಳಗಿದ್ದ ವೈಚಾರಿಕ ಮಾನವ ಪ್ರಜ್ಞೆಯನ್ನು ಎತ್ತಿ ತೋರಿಸಿದ ಕೀರ್ತಿಗೆ ಭಾಜನರಾಗಿದ್ದಾರೆ ಎಂದು ಹಿರೇಮಠ ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ವೀರ ಹನುಮಾನ್, ಬಸೀರ್‍ಅಹ್ಮದ್ ಹೊಸಮನಿ, ಯುವ ಸಾಹಿತಿಗಳಾದ ಈರಣ್ಣ ಬೆಂಗಾಲಿ, ವೇಣು ಜಾಲಿಬೆಂಚಿ, ಮಲ್ಲೇಶ, ಎಂ.ಬಿ.ನರಸಿಂಹಲು ಸೇರಿದಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಿಬ್ಬಂದಿ ಇಸ್ಮಾಯಿಲ್, ವಿನೋದ ಸೇರಿದಂತೆ ವಿವಿಧ ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande