3,400 ಕೋಟಿ ಯೋಜನೆಗಳಿಗೆ ಅನುಮೋದನೆ : ಮುಖ್ಯಮಂತ್ರಿ
ಚಿಕ್ಕಬಳ್ಳಾಪುರ, 02 ಜುಲೈ (ಹಿ.ಸ.) : ಆ್ಯಂಕರ್ : ನಂದಿಬೆಟ್ಟದ ಐತಿಹಾಸಿಕ ನಂದಿ ಗಿರಿಧಾಮದಲ್ಲಿ ಇಂದು ನಡೆದ ರಾಜ್ಯ ಸರ್ಕಾರದ 14ನೇ ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಸಭೆಯಲ್ಲಿ 48 ವಿಷಯಗಳ ಬಗ್ಗೆ ಚರ್ಚೆ ನಡೆಯಿದ್ದು, ₹3,400 ಕೋಟಿಯ ಯೋಜನೆಗಳಿಗೆ ಅನುಮ
Cabinet


ಚಿಕ್ಕಬಳ್ಳಾಪುರ, 02 ಜುಲೈ (ಹಿ.ಸ.) :

ಆ್ಯಂಕರ್ : ನಂದಿಬೆಟ್ಟದ ಐತಿಹಾಸಿಕ ನಂದಿ ಗಿರಿಧಾಮದಲ್ಲಿ ಇಂದು ನಡೆದ ರಾಜ್ಯ ಸರ್ಕಾರದ 14ನೇ ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಸಭೆಯಲ್ಲಿ 48 ವಿಷಯಗಳ ಬಗ್ಗೆ ಚರ್ಚೆ ನಡೆಯಿದ್ದು, ₹3,400 ಕೋಟಿಯ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ಬೆಂಗಳೂರು ವಿಭಾಗಕ್ಕೆ ಶೇ.90% ಆದ್ಯತೆ:

ಈ ಬಾರಿ ಸಭೆಯಲ್ಲಿ ಬೆಂಗಳೂರಿಗೆ ಸಂಬಂಧಪಟ್ಟ ವಿಷಯಗಳಿಗೆ ಹೆಚ್ಚಿನ ಒತ್ತುಗೊಡಲಾಗಿದ್ದು, 31 ಪ್ರತ್ಯೇಕ ವಿಷಯಗಳಿಗೆ ₹2250 ಕೋಟಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಬೆಂಗಳೂರು ಉತ್ತರ ಜಿಲ್ಲೆ ಎಂದು ಮರು ನಾಮಕರಣ ಮತ್ತು ಬಾಗೇಪಲ್ಲಿ ಪಟ್ಟಣವನ್ನು ಭಾಗ್ಯನಗರ ಎಂದು ಹೆಸರಿಡಲು ತೀರ್ಮಾನಿಸಲಾಗಿದೆ.

ಎತ್ತಿನಹೊಳೆ ಯೋಜನೆಗೆ ತೀರ್ಮಾನಗಳು:

ಎತ್ತಿನಹೊಳೆ ನೀರಾವರಿ ಯೋಜನೆಗೆ ಈಗಾಗಲೇ ₹17,147 ಕೋಟಿ ಖರ್ಚಾಗಿದ್ದು, ಸಂಪುಟ ಸಭೆಯಲ್ಲಿ ಯೋಜನೆಯ ಉಳಿದ ಭಾಗಗಳಿಗೆ ವೇಗ ನೀಡಲು ತೀರ್ಮಾನಿಸಲಾಗಿದೆ. ಇದರ ಪರಿಷ್ಕೃತ ಅಂದಾಜು ವೆಚ್ಚ ₹23,251 ಕೋಟಿ ಆಗಿದೆ. ಈ ಯೋಜನೆಯ ಮೂಲಕ 9 ಜಿಲ್ಲೆಗಳ 75 ಲಕ್ಷ ಜನರಿಗೆ ಕುಡಿಯುವ ನೀರನ್ನು ಪೂರೈಸಲು ಉದ್ದೇಶಿಸಲಾಗಿದೆ. ಮುಖ್ಯ ಗ್ರಾವಿಟಿ ಕೆನಲ್ ನ ಕೆಲಸ 85% ಮುಗಿದಿದ್ದು, ಇದಕ್ಕೆ ಇನ್ನೂ ₹8000 ಕೋಟಿ ಅಗತ್ಯವಿದೆ.

ವಿದ್ಯೆ ಮತ್ತು ಆರೋಗ್ಯಕ್ಕೆ ಹೆಚ್ಚಿನ ಅನುದಾನ:

ಶಿಕ್ಷಣ ಕ್ಷೇತ್ರಕ್ಕೆ ₹1627.25 ಕೋಟಿ ನೀಡಲಾಗಿದೆ. ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆಗಳ ನಿರ್ಮಾಣಕ್ಕೆ ₹1125.25 ಕೋಟಿ ವಿನಿಯೋಗ ಮಾಡಲಾಗಿದ್ದು, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್ ತರಬೇತಿ ನೀಡಲು ಬೆಂಗಳೂರಿನಲ್ಲಿ ₹10 ಕೋಟಿ ವೆಚ್ಚದಲ್ಲಿ ಎರಡು ವಸತಿ ನಿಲಯಗಳನ್ನು ಸ್ಥಾಪಿಸಲಾಗುತ್ತದೆ.

ಆರೋಗ್ಯ ಕ್ಷೇತ್ರದಲ್ಲಿ ₹123 ಕೋಟಿ ವೆಚ್ಚದಲ್ಲಿ ಯೋಜನೆಗಳಿಗೆ ಅನುಮೋದನೆ ದೊರೆತಿದೆ. ಹೊಸ ತಾಲ್ಲೂಕುಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವುದು, ಚಿಕ್ಕಬಳ್ಳಾಪುರ ಮತ್ತು ಹುಬ್ಬಳ್ಳಿಯಲ್ಲಿ ಮೆಡಿಕಲ್ ಕಾಲೇಜುಗಳಿಗೆ ಎಂಆರ್‌ಐ ಯಂತ್ರ ಖರೀದಿಸುವುದು, ಕೈವಾರ ಮತ್ತು ಮಂಚೇನಹಳ್ಳಿಯ ಆಸ್ಪತ್ರೆಗಳನ್ನು ಉನ್ನತೀಕರಣ ಮಾಡುವುದು ಪ್ರಮುಖ ತೀರ್ಮಾನಗಳಾಗಿವೆ.

ನೆರೆಯ ಪ್ರದೇಶದ ಕೆರೆಗಳಿಗೆ ಶುದ್ಧ ನೀರು:

ಬೆಂಗಳೂರು ನಗರದ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಶಿಡ್ಲಘಟ್ಟ ಮತ್ತು ಚಿಂತಾಮಣಿ ತಾಲ್ಲೂಕಿನ 164 ಕೆರೆಗಳಿಗೆ ತುಂಬಿಸುವ ಯೋಜನೆಗೆ ₹237 ಕೋಟಿ ಅನುದಾನ ನೀಡಲಾಗಿದೆ.

ಹೂವಿನ ಉದ್ಯಮಕ್ಕೆ ಪ್ರೋತ್ಸಾಹ:

ಈ ಭಾಗದ ಪ್ರಸಿದ್ಧ ಹೂವು ಬೆಳೆಗೆ ಉತ್ತೇಜನ ನೀಡಲು ₹10 ಕೋಟಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರ ಮತ್ತು ₹141.5 ಕೋಟಿ ವೆಚ್ಚದಲ್ಲಿ ಎಪಿಎಂಸಿ ಮೂಲಕ ಹೈಟೆಕ್ ಹೂವಿನ ಮಾರುಕಟ್ಟೆ ಸ್ಥಾಪಿಸಲು ತೀರ್ಮಾನಿಸಲಾಗಿದೆ.

ಅಕ್ರಮ ಗಣಿಗಾರಿಕೆ ಪರಿಶೀಲನೆಗೆ ಉಪಸಮಿತಿ:

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಸಚಿವ ಹೆಚ್.ಕೆ.ಪಾಟೀಲ್ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆಗೆ ತೀರ್ಮಾನಿಸಲಾಗಿದೆ.

ರಾಜ್ಯ ಸರ್ಕಾರವು ಕೇವಲ ಬೆಂಗಳೂರು ಕೇಂದ್ರಿತ ಆಡಳಿತದಿಂದ ಹೊರಬಂದು, ವಿಕೇಂದ್ರೀಕೃತ ವ್ಯವಸ್ಥೆಯ ಮೂಲಕ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ರಾಜ್ಯದ ವಿವಿಧ ಭಾಗಗಳಲ್ಲಿ ಸಂಪುಟ ಸಭೆಗಳನ್ನು ನಡೆಸುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande