ರಾಯ್ಪುರ,18 ಜುಲೈ (ಹಿ.ಸ.) :
ಆ್ಯಂಕರ್ : ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಭಿಲಾಯಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅವರ ಪುತ್ರ ಚೈತನ್ಯ ಬಘೇಲ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
ಚೈತನ್ಯ ಬಘೇಲ್ ಕೂಡ ಭಿಲಾಯಿಯಲ್ಲಿಯೇ ವಾಸಿಸುತ್ತಿರುವ ಹಿನ್ನೆಲೆಯಲ್ಲಿ, ಪಿಎಂಎಲ್‌ಎ ಅಡಿಯಲ್ಲಿ ಹೊಸ ಸಾಕ್ಷ್ಯಾಧಾರಗಳ ಮೇರೆಗೆ ಈ ಶೋಧ ಕಾರ್ಯ ನಡೆದಿದೆ. ಈ ಹಿಂದೆ 2025ರ ಮಾರ್ಚ್‌ನಲ್ಲಿ ಸಹ ಇ.ಡಿ ಅಧಿಕಾರಿಗಳು ಚೈತನ್ಯ ಬಘೇಲ್ ಮೇಲೆ ದಾಳಿ ನಡೆಸಿದ್ದರು.
ದಾಳಿ ಕುರಿತು ಎಕ್ಸನಲ್ಲಿ ಪ್ರತಿಕ್ರಿಯೆ ನೀಡಿರುವ ಭೂಪೇಶ್ ಬಘೇಲ್ , ''ಇ.ಡಿ ಅಧಿಕಾರಿಗಳು ಆಗಮಿಸಿದ್ದಾರೆ. ಇಂದು ವಿಧಾನಸಭೆ ಅಧಿವೇಶನದ ಕೊನೆಯ ದಿನ. ತಮ್ನಾರ್‌ನಲ್ಲಿ ಮರಗಳನ್ನು ಕಡಿಯುವ ವಿಚಾರವನ್ನು ಪ್ರಸ್ತಾಪಿಸಲು ಮುಂದಾಗಿದ್ದೆ. ಆದರೆ 'ಸಾಹೇಬ್' ನನ್ನ ಮನೆಗೆ ಇ.ಡಿಯನ್ನು ಕಳುಹಿಸಿದ್ದಾರೆ'' ಎಂದು ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದಾರೆ.
ಮದ್ಯ ಹಗರಣದ ಕುರಿತಾಗಿ ಇ.ಡಿ ಮಾಹಿತಿ ಪ್ರಕಾರ, ಈ ಯೋಜನೆಯಿಂದ ರಾಜ್ಯ ಸರ್ಕಾರಕ್ಕೆ ಭಾರೀ ನಷ್ಟವಾಗಿದೆ. ಸುಮಾರು ₹2,100 ಕೋಟಿ ಅಕ್ರಮ ಆದಾಯವನ್ನು ಮದ್ಯದ ಸಿಂಡಿಕೇಟ್ ಗಳಿಸಿದ್ದು, ಅದರ ಲಾಭದಲ್ಲಿ ಚೈತನ್ಯ ಬಘೇಲ್ ಪಾಲುದಾರರಾಗಿರಬಹುದು ಎಂಬ ಶಂಕೆಯಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa