ಬೆಂಗಳೂರು, 18 ಜುಲೈ (ಹಿ.ಸ.) :
ಆ್ಯಂಕರ್ : ಬೇಕರಿ, ಕಾಂಡಿಮೆಂಟ್ ಸೇರಿದಂತೆ ಸಣ್ಣ ವ್ಯಾಪಾರಿಗಳನ್ನೂ ಜಿಎಸಟಿ ವ್ಯಾಪ್ತಿಗೆ ತರುವ ಮೂಲಕ ರಾಜ್ಯದಲ್ಲಿ ಬರಿದಾಗುತ್ತಿರುವ ಖಜಾನೆಯ ಖಾಲಿ ಡಬ್ಬದ ಸದ್ದು ಕೇಳಿಸುತ್ತಿದೆ, ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಬಿಗಡಾಯಿಸಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ತಮ್ಮ ಆಸ್ತಿ ಅಡಮಾನವಿಟ್ಟು ಸಾಲ ತೆಗೆದುಕೊಳ್ಳುವವರಿಗೂ ದುಪ್ಪಟ್ಟು ನೋಂದಣಿ ಶುಲ್ಕ ಹೇರಿ ಸಾಲ ಪಾವತಿಸುವ ಮುನ್ನವೇ ಶೂಲಕ್ಕೆ ಏರಿಸುತ್ತಿರುವ ಕಾಂಗ್ರೆಸ್ ಸರಕಾರ ಕಷ್ಟಪಟ್ಟು ಸಣ್ಣ ವ್ಯಾಪಾರದಿಂದ ಬದುಕು ಕಟ್ಟಿಕೊಳ್ಳಲು ಬೆವರು ಸುರಿಸುತ್ತಿರುವ ಸಣ್ಣ ವ್ಯಾಪಾರಿಗಳಿಗೂ ಜಿಎಸಟಿ ನೋಂದಾಯಿಸುವಂತೆ ವಾಣಿಜ್ಯ ತೆರಿಗೆ ಇಲಾಖೆ ಮೂಲಕ ನೋಟಿಸ್ ಜಾರಿ ಮಾಡಿರುವುದು ಅತ್ಯಂತ ನಾಚಿಕೆಗೇಡಿನ ಕ್ರಮವಾಗಿದೆ.
ಅಭಿವೃದ್ಧಿ ಕೆಲಸಗಳನ್ನು ಮೂಲೆಗೆ ತಳ್ಳಿರುವ ಕಾಂಗ್ರೆಸ್ ಸರ್ಕಾರಕ್ಕೆ ‘ಗೊತ್ತಿರುವುದು ಎರಡೇ’ ಒಂದು-ಜನ ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಸುವುದು ಹೇಗೆ? ಮತ್ತೊಂದು-ಯಾರಮೇಲೆ, ಯಾವುದರ ಮೇಲೆ ತೆರಿಗೆ ವಿಧಿಸುವುದು ಹೇಗೆ? ಇದಕ್ಕಾಗಿ ನಿತ್ಯ ಸಂಶೋಧಿಸಲು ತಜ್ಞರ ತಂಡವನ್ನೇ ಕಾಂಗ್ರೆಸ್ ಸರ್ಕಾರ ಜತೆಗಿರಿಸಿಕೊಂಡಂತಿದೆ? ಕಸ ವಿಲೇವಾರಿ ಮಾಡುವುದಕ್ಕೂ ತೆರಿಗೆ ವಿಧಿಸಿರುವ ಈ ಸರ್ಕಾರ ತಳ್ಳುಗಾಡಿ, ಬೀದಿಬದಿ ವ್ಯಾಪಾರಿಗಳನ್ನೂ ತೆರಿಗೆಯ ವ್ಯಾಪ್ತಿಗೆ ತರುವುದೊಂದೇ ಬಾಕಿ ಉಳಿಸಿಕೊಂಡಿದೆ, ಮುಂದೊಂದು ದಿನ ಭಿಕ್ಷಾಟನೆ ಮಾಡುವವರನ್ನೂ ಹುಡುಕಿ ತೆರಿಗೆ ವಿಧಿಸಿದರೂ ಆಶ್ಚರ್ಯವಿಲ್ಲ ಎಂಬಂತೆ ಸರ್ಕಾರ ನಡೆದುಕೊಳ್ಳುತ್ತಿದೆ.
ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿದಂತೆ ತನ್ನ ಎಲ್ಲಾ ವೈಫಲ್ಯಗಳು ಹಾಗೂ ಜನವಿರೋಧಿ ನಿರ್ಧಾರಗಳನ್ನು ಕೇಂದ್ರ ಸರ್ಕಾರದ ಮೇಲೆ ಹೊರಿಸುವ ಕುಯುಕ್ತಿ ಕಾಂಗ್ರೆಸ್ಸಿಗರಿಗೆ ಕರಗತವಾಗಿದೆ, ಕರ್ನಾಟಕದ ಜನತೆ ಪ್ರಬುದ್ಧರು ಎನ್ನುವುದನ್ನು ಕಾಂಗ್ರೆಸ್ ಮರೆಯಬಾರದು. ಸದ್ಯ ₹40 ಲಕ್ಷ ಮೇಲ್ಪಟ್ಟು ವಹಿವಾಟು ನಡೆಸುವ ಬೇಕರಿ ಹಾಗೂ ಸಣ್ಣ ವ್ಯಾಪಾರಗಳನ್ನು ಮಾತ್ರ ತೆರಿಗೆ ವ್ಯಾಪ್ತಿಗೆ ತರುತ್ತಿರುವುದಾಗಿ ಹೇಳುತ್ತಿರುವುದು ಸರ್ಕಾರದ ಕಣ್ಣೊರೆಸುವ ತಂತ್ರವಾಗಿದೆ. ಆದರೆ ಹಂತ ಹಂತವಾಗಿ ಸಣ್ಣ ವ್ಯಾಪಾರಿ ಕ್ಷೇತ್ರವನ್ನು ಸಂಪೂರ್ಣವಾಗಿ GST ವ್ಯಾಪ್ತಿಗೆ ತರುವುದೇ ಈ ಸರ್ಕಾರದ ಉದ್ದೇಶವಾಗಿದೆ ಎಂಬುದು ಸರ್ಕಾರ ಹೊರಡಿಸುತ್ತಿರುವ ಆದೇಶಗಳನ್ನು ಗಮನಿಸಿದರೆ ಸ್ಪಷ್ಟವಾಗುತ್ತದೆ.
ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಆತಂಕಕ್ಕೊಳಗಾಗಿರುವ ವ್ಯಾಪಾರಿಗಳ ಹೋರಾಟಕ್ಕೆ ನಮ್ಮ ಬೆಂಬಲವಿದೆ, ಪರಿಸ್ಥಿತಿ ಬಿಗಡಾಯಿಸುವುದಕ್ಕೆ ಅವಕಾಶನೀಡದೇ ಈ ಕೂಡಲೇ ಸಣ್ಣ ಪುಟ್ಟ ವ್ಯಾಪಾರಿಗಳನ್ನು GST ವ್ಯಾಪ್ತಿಗೆ ತರುವ ನಿರ್ಧಾರವನ್ನು ಸರ್ಕಾರ ಕೈಬಿಡುವಂತೆ ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa