ಚಂಡೀಗಢ, 15 ಜುಲೈ (ಹಿ.ಸ.) :
ಆ್ಯಂಕರ್ : ವಿಶ್ವದ ಅತ್ಯಂತ ಹಿರಿಯ ಕ್ರೀಡಾಪಟು ಮತ್ತು ಪ್ರಸಿದ್ಧ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ (114) ರಸ್ತೆ ಅಪಘಾತದಲ್ಲಿ ಗಾಯಗೊಂಡು ನಿನ್ನೆ ರಾತ್ರಿ ಪಂಜಾಬ್‌ನ ಜಲಂಧರ್‌ನ ಖಾಸಗಿ ಆಸ್ಪತ್ರೆಯಲ್ಲಿ , ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ಬಿಯಾಸ್ ಪಿಂಡ್ ಎಂಬ ಅವರ ಸ್ವಗ್ರಾಮದಲ್ಲಿ ನಡೆಯಲಿದೆ.
ಸೋಮವಾರ ರಾತ್ರಿ ಊಟದ ಬಳಿಕ ಫೌಜಾ ಸಿಂಗ್ ಮನೆಯಿಂದ ಹೊರಗೆ ನಡೆದುಕೊಂಡು ಹೋಗುತ್ತಿದ್ದಾಗ ಅತಿವೇಗದಿಂದ ಬಂದ ಕಾರೊಂದು ಡಿಕ್ಕಿ ಹೊಡೆದಿದ್ದು, ತೀವ್ರ ಗಾಯಗೊಂಡ ಅವರನ್ನು ಕುಟುಂಬದವರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರೂ, ಅವರು ಬದುಕುಳಿಯಲಿಲ್ಲ. ಅಪಘಾತಕ್ಕೆ ಸಂಬಂಧಿಸಿದಂತೆ ಆದಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ಕಾರಣವಾದ ಕಾರು ಹಾಗೂ ಚಾಲಕನ ಗುರುತು ಕಂಡುಬಂದಿಲ್ಲ.
ಟರ್ಬನ್ ಟೊರ್ನಾಡೊ ಎಂಬ ಹೆಸರಿನಲ್ಲಿ ಖ್ಯಾತಿ ಪಡೆದವರು:
ಫೌಜಾ ಸಿಂಗ್ ಅವರು 1911ರ ಏಪ್ರಿಲ್ 1ರಂದು ಪಂಜಾಬ್‌ನ ಜಲಂಧರ್ ಜಿಲ್ಲೆಯ ಬಿಯಾಸ್ ಪಿಂಡ್ ಗ್ರಾಮದಲ್ಲಿ ಜನಿಸಿದ್ದರು. ಅಸಾಧಾರಣ ಶಕ್ತಿಶಾಲಿ ಮನೋಬಲ ಹಾಗೂ ಶಾರೀರಿಕ ಕ್ಷಮತೆ ಹೊಂದಿದ್ದ ಅವರು, 90ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಮ್ಯಾರಥಾನ್ ಓಟಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದರು. 2004ರಲ್ಲಿ ಲಂಡನ್ ಮ್ಯಾರಥಾನ್ ಹಾಗೂ 2011ರಲ್ಲಿ ಟೊರೊಂಟೊ ಮ್ಯಾರಥಾನ್‌ನಲ್ಲಿ ಯಶಸ್ವಿಯಾಗಿ ಓಡಿದ ಅವರು, 100ನೇ ವಯಸ್ಸಿನಲ್ಲಿ ಎಂಟು ದಾಖಲೆಗಳನ್ನು ನಿರ್ಮಿಸಿದರು.
ವಿದೇಶಿ ಪೌರತ್ವ:
1990ರ ದಶಕದಲ್ಲಿ ಇಂಗ್ಲೆಂಡ್‌ಗೆ ವಲಸೆ ಹೋದ ಫೌಜಾ ಸಿಂಗ್, ಅಲ್ಲಿಯೇ ಪೌರತ್ವ ಪಡೆದು ನೆಲೆಸಿದ್ದರು. 2013ರಲ್ಲಿ, ತಮ್ಮ 102ನೇ ವಯಸ್ಸಿನಲ್ಲಿ ಸ್ಪರ್ಧಾತ್ಮಕ ಮ್ಯಾರಥಾನ್ ಓಟಗಳಿಂದ ನಿವೃತ್ತರಾದರು.
ಕ್ರೀಡಾ ಲೋಕಕ್ಕೆ ಅಪರಿಮಿತ ಕೊಡುಗೆ:
ಶ್ರಮ, ಸದೃಡ ಮತ್ತು ದೃಢ ಇಚ್ಛಾಶಕ್ತಿಯ ಮೂಲಕ ನೂರಾರು ಮಂದಿಗೆ ಪ್ರೇರಣೆಯಾಗಿದ್ದ ಫೌಜಾ ಸಿಂಗ್ ಅವರು ಟರ್ಬನ್ ಟೊರ್ನಾಡೊ ಎಂಬ ಹೆಸರಿನಲ್ಲಿ ಜಾಗತಿಕ ಖ್ಯಾತಿಗೆ ಪಾತ್ರರಾಗಿದ್ದರು. ಅವರು ಮನುಷ್ಯನ ಸಾಮರ್ಥ್ಯದ ಪರಮಾವಧಿಯನ್ನು ಸಾಬೀತುಪಡಿಸಿದ ಜೀವಂತ ಉದಾಹರಣೆಯಾಗಿ ಉಳಿದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa