ಮುಂಬಯಿ, 15 ಜುಲೈ (ಹಿ.ಸ.) :
ಆ್ಯಂಕರ್ : ಹಿರಿಯ ಬಾಲಿವುಡ್ ನಟ ಹಾಗೂ ನಿರ್ಮಾಪಕ ಧೀರಜ್ ಕುಮಾರ್ (79) ಇಂದು ಮುಂಜಾನೆ ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೆಲ ದಿನಗಳಿಂದ ನ್ಯುಮೋನಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಧೀರಜ್ ಅವರನ್ನು ಕೋಕಿಲಾಬೆನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ವೆಂಟಿಲೇಟರ್ ಸಹಾಯದಲ್ಲಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಧೀರಜ್ ಕುಮಾರ್ ಅವರ ನಿಧನದ ಸುದ್ದಿ ಬಾಲಿವುಡ್ ಹಾಗೂ ಟಿವಿ ಲೋಕದಲ್ಲಿ ಆಘಾತ ಉಂಟುಮಾಡಿದೆ. ನಟ, ನಿರ್ಮಾಪಕ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಅವರು 1970–80ರ ದಶಕಗಳಲ್ಲಿ ಹಲವು ಪ್ರಖ್ಯಾತ ಸಿನಿಮಾಗಳಲ್ಲಿ ನಟಿಸಿದ್ದರು. ರೋಟಿ ಕಪ್ಡಾ ಔರ್ ಮಕಾನ್, ಕ್ರಾಂತಿ, ಸ್ವಾಮಿ, ಹೀರಾ ಪನ್ನಾ ಮೊದಲಾದ ಸಿನಿಮಾಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಪಂಜಾಬಿ ಚಿತ್ರರಂಗದಲ್ಲಿಯೂ ಯಶಸ್ಸು ಪಡೆದಿದ್ದ ಧೀರಜ್, ನಂತರ ಸಣ್ಣ ಪರದೆಯತ್ತ ಧೃಷ್ಟಿ ಹರಿಸಿ ಪೌರಾಣಿಕ ಧಾರಾವಾಹಿಗಳ ನಿರ್ಮಾಣಕ್ಕೆ ಮುಂದಾದರು. ಅವರ ಬ್ಯಾನರ್ ಕ್ರಿಯೇಟಿವ್ ಐ ಲಿಮಿಟೆಡ್ ಮೂಲಕ ಓಂ ನಮಃ ಶಿವಾಯ, ಜೈ ಸಂತೋಷಿ ಮಾ, ಶ್ರೀ ಗಣೇಶ್ ಹಾಗೂ ಜಪ್ ತಪ್ ವ್ರತ್ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳನ್ನು ನಿರ್ಮಿಸಿದರು.
ಇದಿವರೆಗೂ ಕುಟುಂಬದಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲದಿದ್ದರೂ, ಧೀರಜ್ ಕುಮಾರ್ ಅವರ ಅಗಲಿಕೆಯ ಸುದ್ದಿ ಅವರ ಅಭಿಮಾನಿಗಳಲ್ಲಿ ಹಾಗೂ ಚಿತ್ರರಂಗದ ವಲಯದಲ್ಲಿ ಶೋಕದ ನೆರಳು ಮೂಡಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ನೂರಾರು ಮಂದಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಅವರ ಈ ಅಕಾಲಿಕ ನಿಧನವು ಭಾರತೀಯ ಚಿತ್ರ-ದೂರದರ್ಶನ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa