ನವದೆಹಲಿ, 15 ಜುಲೈ (ಹಿ.ಸ.) :
ಆ್ಯಂಕರ್ : ಲೈಂಗಿಕ ಕಿರುಕುಳದಿಂದ ನೊಂದ ಒಡಿಶಾದ ಬಾಲಸೋರ್‌ನ ವಿದ್ಯಾರ್ಥಿನಿಯೊಬ್ಬರು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ ಪ್ರಕರಣದ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದೇಶದ ಮಗಳೊಬ್ಬರು ನ್ಯಾಯಕ್ಕಾಗಿ ಹೊತ್ತಿ ಉರಿದಿದ್ದಾರೆ. ಆದರೆ ಪ್ರಧಾನಿ ಮೋದಿ ಮೌನವಿದ್ದಾರೆ. ಜನರಿಗೆ ಬೇಕಾಗಿರುವುದು ನಿಮ್ಮ ಮೌನವಲ್ಲ, ನಿಮ್ಮ ಉತ್ತರ, ಎಂದು ರಾಹುಲ್ ಗಾಂಧಿ ಎಕ್ಸ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫಕೀರ ಮೋಹನ್ ಸ್ವಾಯತ್ತ ಕಾಲೇಜಿನ ಬಿ.ಎಡ್ ದ್ವಿತೀಯ ವರ್ಷದ ವಿದ್ಯಾರ್ಥಿನಿ, ಪ್ರಾಧ್ಯಾಪಕರ ಲೈಂಗಿಕ ಕಿರುಕುಳದಿಂದ ಬೇಸತ್ತು, ಪ್ರಾಂಶುಪಾಲರ ಕಚೇರಿ ಎದುರು ಬೆಂಕಿ ಹಚ್ಚಿಕೊಂಡಿದ್ದರು. ಭಾರೀ ಸುಟ್ಟ ಗಾಯಗಳಿಂದಾಗಿ ಭುವನೇಶ್ವರದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ನಿಧನರಾದರು.
ಈ ಕುರಿತು ಕಿಡಿ ಕಾರಿರುವ ರಾಹುಲ್ ಗಾಂಧಿ, ಇದು ಆತ್ಮಹತ್ಯೆಯಲ್ಲ. ಇದು ಸಂಘಟಿತ ಕೊಲೆ. ಬಿಜೆಪಿ ಆಪಾದಿತರನ್ನು ರಕ್ಷಣೆಗೆ ಮುಂದಾಗಿದೆ ಎಂದು ಆರೋಪಿಸಿದ್ದಾರೆ.
ಮೋದಿ ಜೀ, ದೇಶದ ಮಗಳು ನ್ಯಾಯಕ್ಕಾಗಿ ಕಾತರಿಸಿದೆ. ಭದ್ರತೆ ಹಾಗೂ ನ್ಯಾಯವೇ ಅವಳ ಹಕ್ಕು. ನಿಮ್ಮ ಮೌನವಲ್ಲ, ನಿಮ್ಮ ಸ್ಪಷ್ಟ ಉತ್ತರವೇ ಇಡೀ ರಾಷ್ಟ್ರಕ್ಕೆ ಬೇಕಾಗಿದೆ, ಎಂದು ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa