ಬೆಂಗಳೂರು, 14 ಜುಲೈ (ಹಿ.ಸ.) :
ಆ್ಯಂಕರ್ : ದೇಶದ ದ್ವಿತೀಯ ಅತಿ ಉದ್ದದ ಕೇಬಲ್ ಸೇತುವೆಯಾಗಿ ಗುರುತಿಸಿಕೊಂಡಿರುವ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಶರಾವತಿ ಹಿನ್ನೀರಿನ ಸೇತುವೆಯನ್ನು ಇಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಲೋಕಾರ್ಪಣೆ ಮಾಡಲಿದ್ದಾರೆ.
ಶರಾವತಿ ದ್ವೀಪದ ನಿವಾಸಿಗಳ ದಶಕಗಳ ಕನಸು ಸಾಕಾರವಾಗುತ್ತಿರುವ ಈ ಸೇತುವೆಯು, ಸುಮಾರು ₹423.15 ಕೋಟಿಯ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, 2010ರಲ್ಲಿ ಪ್ರಾರಂಭವಾಗಿ 2025ರಲ್ಲಿ ಪೂರ್ಣಗೊಂಡಿದೆ. ಸಾಗರ ಪಟ್ಟಣದಿಂದ ಹೊಸನಗರ ತಾಲೂಕಿನ ಮರಕುಟುಕವರೆಗೆ ಗ್ರಾಮೀಣ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಿ, ಪ್ರಥಮ ಹಂತದಲ್ಲಿ ಸೇತುವೆ ನಿರ್ಮಾಣ ಕಾರ್ಯ ಕೈಗೆೊಳ್ಳಲಾಗಿತ್ತು.
ಸೇತುವೆ ಉದ್ಘಾಟನಾ ಕಾರ್ಯಕ್ರಮದ ನಿಮಿತ್ತ ಕೇಂದ್ರ ಸಚಿವ ಗಡ್ಕರಿ ಅವರು ಇಂದು ಬೆಳಿಗ್ಗೆ ನಾಗಪುರದಿಂದ ವಿಶೇಷ ವಿಮಾನದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿ ನೆರವೇರಿದ ಬಳಿಕ ಹೆಲಿಕಾಪ್ಟರ್ ಮೂಲಕ ಸಿಗಂದೂರು ತಲುಪಲಿದ್ದಾರೆ. ಅಲ್ಲಿನ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದ ನಂತರ ಸೇತುವೆ ಉದ್ಘಾಟನೆ ನೆರವೇರಿಸಲಿದ್ದಾರೆ.
ಇದರ ಬಳಿಕ ಅವರು ಸಾಗರದ ಮಂಕಳಲೆ ಹೆಲಿಪ್ಯಾಡ್‌ನಲ್ಲಿ ಇಳಿದು, ನೆಹರು ಮೈದಾನದಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೇಂದ್ರದ ಇನ್ನೊಬ್ಬ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಗೋಪಾಲಕೃಷ್ಣ ಬೇಳೂರು ಹಾಗೂ ಇತರ ಪ್ರಮುಖ ನಾಯಕರು ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದಲ್ಲಿ ₹925 ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ 369ರ ಶಂಕುಸ್ಥಾಪನೆ ನಡೆಯಲಿದ್ದು, ಸಾಗರದಿಂದ ಮರಕುಟಕವರೆಗೆ ದ್ವಿಪಥ ರಸ್ತೆ ಅಭಿವೃದ್ಧಿಗೊಳಿಸುವ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಜೊತೆಗೆ ಸಾಗರ ಪಟ್ಟಣದ ಬೈಪಾಸ್ ರಸ್ತೆ ಅಭಿವೃದ್ಧಿ ಕಾರ್ಯಕ್ಕೂ ನಾಂದಿ ಹಾಡಲಾಗಲಿದೆ.
ಸೇತುವೆ ಉದ್ಘಾಟನೆ ಹಿನ್ನೆಲೆಯಲ್ಲಿ ಮಾವಿನ ತೋರಣಗಳು, ಬಾಳೆ ಕಂದುಗಳಿಂದ ಸೇತುವೆ ಸಿಂಗರಿಸಲಾಗಿದ್ದು, ಸಿಗಂದೂರು ದೇವಾಲಯ ಸಮಿತಿಯಿಂದ ಮರದಲ್ಲಿ ನಿರ್ಮಿತ ಸೇತುವೆಯ ಮಾದರಿಯು ಅತಿಥಿಗಳಿಗೆ ಪ್ರದರ್ಶನಕ್ಕೆ ಇಡಲಾಗಿದೆ.
ಇದೇ ಮೊದಲ ಬಾರಿಗೆ ಶರಾವತಿ ದ್ವೀಪದ ಜನತೆ ಸಂಚಾರದ ಸುಲಭತೆ ಅನುಭವಿಸಲಿದ್ದು, ಈ ಸೇತುವೆ ಭವಿಷ್ಯದಲ್ಲಿ ಪ್ರವಾಸೋದ್ಯಮ ಹಾಗೂ ಆರ್ಥಿಕ ಅಭಿವೃದ್ಧಿಗೆ ಗತಿ ನೀಡಲಿದೆ ಎಂಬ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa