ಬಳ್ಳಾರಿ, 11 ಜುಲೈ (ಹಿ.ಸ.) :
ಆ್ಯಂಕರ್ : ಹಿರಿಯ ಮುತ್ಸದ್ಧಿ, ಶೈಕ್ಷಣಿಕ, ಧಾರ್ಮಿಕ, ನ್ಯಾಯಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಸಮಾಜಮುಖಿಯಾಗಿದ್ದ ಎನ್. ತಿಪ್ಪಣ್ಣ ಅವರು ಶುಕ್ರವಾರ ನಸುಕಿನಲ್ಲಿ ದೈವಾದೀನರಾದ ಹಿನ್ನಲೆಯಲ್ಲಿ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ತೀವ್ರ ಶೋಕ ಸಂತಾಪವನ್ನು ಸೂಚಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಶ್ರೀಗಳು, ನಮ್ಮ ಶ್ರೀಮಠದ ಅಭಿಮಾನಿಗಳೂ, ಹಿರಿಯ ರಾಜಕೀಯ ಮುತ್ಸದ್ದಿಗಳೂ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ರಾಜ್ಯಾಧ್ಯಕ್ಷರಾಗಿದ್ದ ಶ್ರೀ ಎನ್. ತಿಪ್ಪಣ್ಣನವರು 97 ವರ್ಷಗಳ ಸಾರ್ಥಕ ಜೀವನ ನಡೆಸಿ ಇಂದು ಲಿಂಗೈಕ್ಯರಾಗಿದ್ದು ನಾಡಿಗೆ ಬಹುದೊಡ್ಡ ನಷ್ಟವನ್ನುಂಟುಮಾಡಿದೆ. ಶ್ರೀಯುತರು ಅಧ್ಯಾತ್ಮಿಕ, ರಾಜಕೀಯ, ಶೈಕ್ಷಣಿಕ ಹಾಗೂ ಸಾಹಿತ್ಯಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಯು ಅನುಪಮವಾದುದು. ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಮಾರ್ಗದರ್ಶನ ಮಾಡುತ್ತ ಬಂದಿದ್ದು ಅವರಲ್ಲಿನ ಶಿಕ್ಷಣಪ್ರೇಮವನ್ನು ತೋರಿಸುತ್ತದೆ ಎಂದು ಉಲ್ಲೇಖಿಸಿದ್ದಾರೆ.
ಶ್ರೀ ಎನ್. ತಿಪ್ಪಣ್ಣ ಅವರು ನಮ್ಮ ಗುರುಗಳೊಂದಿಗೆ (ಶ್ರೀಮಠದ ಹಿರಿಯ ಸ್ವಾಮೀಜಿಗಳ ಜೊತೆ) ಉತ್ತಮವಾದ ಸಂಬಂಧವನ್ನು ಹೊಂದಿ ಮಠದ ಎಲ್ಲಾ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಯಶಸ್ವಿಗೊಳಿಸುತ್ತಿದ್ದರು. ಶ್ರೀಮಠಕ್ಕೆ ನಾವು ಗುರುಗಳಾಗಿ ಬಂದ ಮೇಲೂ ಶ್ರೀಮಠದ ಜೊತೆಯಲ್ಲಿ ನಿರಂತರ ಒಡನಾಟವನ್ನು ಮುಂದುವರೆಸಿದ್ದ ಶ್ರೀಯುತರು ಮಠ ಮತ್ತು ಸಮಾಜದ ಅಭಿವೃದ್ಧಿಗೆ ನಮ್ಮೊಂದಿಗೆ ಹಲವಾರು ವಿಚಾರಗಳನ್ನು ಮುಕ್ತವಾಗಿ ಚರ್ಚಿಸುತ್ತಿದ್ದುದು, ನಮ್ಮ ಕಣ್ಮುಂದೆ ಹಸಿರಾಗಿದೆ ಎಂದು ಸ್ಮರಿಸಿದ್ದಾರೆ.
ಶ್ರೀ ಎನ್. ತಿಪ್ಪಣ್ಣ ಅವರ ಅಗಲಿಕೆ ನಿಜಕ್ಕೂ ನಮಗೂ ಮತ್ತು ಅಪಾರ ಅಭಿಮಾನಿಗಳಿಗೆ ದುಃಖವನ್ನು ತಂದಿದೆ. ಶ್ರೀ ಜಗದ್ಗುರು ಕೊಟ್ಟೂರೇಶ್ವರರು ಶ್ರೀಯುತರ ಆತ್ಮಕ್ಕೆ ಚಿರಶಾಂತಿಯನ್ನು ದಯಪಾಲಿಸಲೆಂದು ಪ್ರಾರ್ಥಿಸುತ್ತೇವೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್