ನವದೆಹಲಿ, 10 ಜುಲೈ (ಹಿ.ಸ.) :
ಆ್ಯಂಕರ್ : ಭಾರತದ ಶ್ರೀಮಂತ ಬೌದ್ಧಿಕ ಪರಂಪರೆ ಜಾಗತಿಕ ಮಟ್ಟದಲ್ಲಿ ಹೆಮ್ಮೆಪಡುವುದಕ್ಕೆ ಯೋಗ್ಯ ಎಂದು ಉಪರಾಷ್ಟ್ರಪತಿ ಜಗದೀಪ್ ಧಂಖರ್ ಹೇಳಿದ್ದಾರೆ. ಅವರು ಗುರುವಾರ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ಭಾರತೀಯ ಜ್ಞಾನ ವ್ಯವಸ್ಥೆಗಳ ಮೊದಲ ವಾರ್ಷಿಕ ಶೈಕ್ಷಣಿಕ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.
“ಭಾರತವು ಕೇವಲ ರಾಜಕೀಯ ಘಟಕವಲ್ಲ. ಇದು ಪುರಾತನ ಜ್ಞಾನ, ಸಂಸ್ಕೃತಿ, ಸಂಶೋಧನೆ ಮತ್ತು ಪ್ರಜ್ಞೆಯ ನಿರಂತರ ಧಾರೆಯಾಗಿದೆ,” ಎಂದು ಅವರು ಹೇಳಿದರು. ತಕ್ಷಶಿಲಾ, ನಳಂದ, ವಿಕ್ರಮಶಿಲಾ, ವಲ್ಲಭಿ ಮತ್ತು ಓಡಂತಪುರಿಯಂತಹ ಪ್ರಾಚೀನ ವಿಶ್ವವಿದ್ಯಾಲಯಗಳ ಉದಾಹರಣೆಯ ಮೂಲಕ ಭಾರತ ಜಾಗತಿಕ ಜ್ಞಾನ ಸಮುದಾಯಕ್ಕೆ ಕೊಡುಗೆ ನೀಡಿದ ಬೃಹತ್ ನಾಗರಿಕತೆಯಾಗಿದೆ ಎಂದು ಅವರು ವಿವರಿಸಿದರು.
ಮ್ಯಾಕ್ಸ್ ಮುಲ್ಲರ್ ಅವರ ಉಲ್ಲೇಖದ ಮೂಲಕ ಭಾರತ ಜ್ಞಾನ ಪರಂಪರೆಯ ಮಹತ್ವವನ್ನು ಒತ್ತಿಹೇಳಿದ ಧಂಖರ್, ಪಾಶ್ಚಾತ್ಯ ಸಿದ್ಧಾಂತಗಳನ್ನು ಮಾತ್ರ ಸತ್ಯವೆಂದು ನಂಬಿದ ಪೂರ್ವಸ್ಥಿತಿಗತಿಯನ್ನೂ ಪ್ರಶ್ನಿಸಿದರು.
“ಜ್ಞಾನವು ಕೇವಲ ಲಿಖಿತ ಹಸ್ತಪ್ರತಿಗಳಲ್ಲ, ಅದು ಜನಜೀವನದ ಅನುಭವ, ಆಚರಣೆ ಮತ್ತು ಸಂಪ್ರದಾಯಗಳಲ್ಲಿಯೂ ವಾಸಿಸುತ್ತದೆ. ಇದನ್ನು ಸಜೀವವಾಗಿ ಉಳಿಸಬೇಕಿದೆ,” ಎಂದು ಧಂಖರ್ ಅಭಿಪ್ರಾಯಪಟ್ಟರು. ಅವರು ನವೀನತೆಗಾಗಿ ಹಳೆಯ ಜ್ಞಾನವನ್ನು ತ್ಯಜಿಸುವ ಬದಲು, ಅದನ್ನು ಪ್ರೇರಣೆಯಾಗಿ ಬಳಕೆ ಮಾಡುವ ಅಗತ್ಯವಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕೇಂದ್ರ ಬಂದರು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೊವಾಲ್, ಜೆಎನ್‌ಯು ಉಪಕುಲಪತಿ ಪ್ರೊ. ಶಾಂತಿಶ್ರೀ ಪಂಡಿತ್ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa