ಪತ್ರಕರ್ತರು ಬದ್ಧತೆ ಮತ್ತು ವೃತ್ತಿಪುರವಾಗಿ ಕಾರ್ಯ ನಿರ್ವಹಿಸಲು ಜಿಲ್ಲಾಧಿಕಾರಿ ಕರೆ
ಪತ್ರಕರ್ತರು ಬದ್ಧತೆ ಮತ್ತು ವೃತ್ತಿಪುರವಾಗಿ ಕಾರ್ಯ ನಿರ್ವಹಿಸಲು ಜಿಲ್ಲಾಧಿಕಾರಿ ಕರೆ
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿ0ದ ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿರುವ ಪತ್ರಕರ್ತರನ್ನು ಸನ್ಮಾನಿಸಿದರು.


ಕೋಲಾರ, ೦೧ ಜುಲೈ (ಹಿ.ಸ) :

ಆ್ಯಂಕರ್ : ಬರಹ ಗೊತ್ತಿದ್ದರೆ ಮಾತ್ರ ಪತ್ರಕರ್ತರಾಗಲು ಸಾಧ್ಯವಿಲ್ಲ. ಪತ್ರಿಕೋದ್ಯಮವನ್ನು ಪ್ರೀತಿಯಿಂದ ಅಪ್ಪಿಕೊಂಡಾಗ ತಾನಾಗಿಯೇ ನಿಷ್ಠೂರತೆ ಬದ್ದತೆ ಬರುತ್ತದೆ. ವೃತ್ತಿಯ ರಕ್ಷಣೆಗೆ ವೃತ್ತಿಪರತೆ ಅಗತ್ಯವಿದೆ. ಆಗ ಗೌರವವೂ ಸಿಗುತ್ತದೆ. ಪತ್ರಕರ್ತನಿಗೆ ಸಮಾಜ ಮತ್ತು ಜೀವನದಲ್ಲಿ ಹೊಂದಾಣಿಕೆ ಇರಬೇಕು. ಉತ್ತಮ ಸಂಪರ್ಕ ಸಾಧಿಸಿದರೆ ಸುದ್ದಿಗಳು ಹೆಚ್ಚು ಸಿಗುತ್ತವೆ ಆಗ ಮಾತ್ರ ಪತ್ರಿಕೋದ್ಯಮದ ರೇಸ್‌ನಲ್ಲಿ ಗೆಲ್ಲಬಹುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಕರೆ ನೀಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿ0ದ ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ಸತ್ಯಶೋಧನೆಯ ಜವಾಬ್ದಾರಿ ಹೊತ್ತ ಪತ್ರಕರ್ತರು ಸುದ್ದಿ ಮಾಡುವಾಗ ಅದರಲ್ಲಿ ವಾಸ್ತವಾಂಶವಿರಬೇಕೇ ಹೊರತೂ ತಮ್ಮ ಅಭಿಪ್ರಾಯಗಳಿಗೆ ಅವಕಾಶ ಇರಬಾರದು, ವೃತ್ತಿಧರ್ಮಕ್ಕೆ ಕುತ್ತು ಬಾರದಂತೆ ಮತ್ತು ಸಮಾಜದ ಸ್ವಾಸ್ಥö್ಯ ಹಾಳಾಗದಂತೆ ಎಚ್ಚರವಹಿಸಬೇಕು, ಬರಹದಲ್ಲಿ ಸಮಾಜದ ಹಿತವಿರಬೇಕು. ಸುದ್ದಿ ಮಾಡುವಾಗ ಭಾಷೆಯ ಮೇಲೆ ಹಿಡಿತ ಇರಬೇಕು. ಪ್ರೌಢಿಮೆಯೂ ಅಗತ್ಯ. ಪ್ರತಿಪತ್ರಿಕೆಗೂ ತನ್ನದೇ ಆದ ವಿನ್ಯಾಸ, ಬರಹದ ಶೈಲಿ ಇರುತ್ತದೆ ಎಂದ ಅವರು ತಾವು ೧೯೯೨ ರಲ್ಲಿ ಪತ್ರಕರ್ತರಾಗಿ ವೃತ್ತಿ ಆರಂಭಿಸಿದ್ದನ್ನು ನೆನಪಿಸಿಕೊಂಡು ನನ್ನ ಜೀವನದ ಯೌವನದಲ್ಲಿ ಪತ್ರಕರ್ತನಾಗಿ ದುಡಿದ್ದೆ. ನನಗೆ ಮಾತೃಬೇರು ಪತ್ರಿಕೋದ್ಯಮ ಎಂದು ತಿಳಿಸಿದರು.

ಪ್ರತಿಯೊಬ್ಬರೂ ಅವರದೇ ಆದ ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಇಂದು ಒತ್ತಡ ಮುಕ್ತ ಜೀವನ ಅಸಾಧ್ಯ, ಅನೇಕ ಸವಾಲುಗಳ ನಡುವೆ ಒತ್ತಡದ ಜೀವನದಲ್ಲೂ ಸಂಭ್ರಮಿಸುವ ಕಲೆ ಇರಬೇಕು. ವೃತ್ತಿಯ ಬಗ್ಗೆ ಖುಷಿ ಇದ್ದರೆ ಒತ್ತಡ ಇರುವುದಿಲ್ಲ, ನಮ್ಮಿಂದ ದೂರವಾಗದ್ದನ್ನು ನಾವು ಹೊಂದಿಕೊAಡು ಹೋಗಬೇಕು, ಒತ್ತಡ ಜಯಿಸಬೇಕು ಎಂದರು.

ಅಧ್ಯಯನ ಶೀಲತೆ ಪತ್ರಕರ್ತರಿಗೆ ಭೂಷಣ ಎಂದ ಅವರು, ಆಗ ಜ್ಞಾನ ವಿಸ್ತಾರವಾಗುತ್ತದೆ, ಮಾಹಿತಿ ಕೈಗೆ ಸಿಗದೇ ಹುಡುಕಾಟ ಹಿಂದೆ ಇತ್ತು ಈಗ ಆಗಿಲ್ಲ ಎಂದರು. ಪತ್ರಿಕೋದ್ಯವೂ ಒಂದು ಸಾಹಿತ್ಯ ಆದರೆ ಅದು ತರಾತುರಿಯಲ್ಲಿ ಬರೆದ ಸಾಹಿತ್ಯ ಎಂಬ ಮಾತಿದೆ, ಸತ್ಯಶೋಧನೆಯ ಸಾಮರ್ಥ್ಯವಿರುವ ಪತ್ರಕರ್ತ ಪ್ರತಿಫಲಾಪೇಕ್ಷೆ ಇಲ್ಲದೇ ಕೆಲಸ ಮಾಡಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ಪತ್ರಕರ್ತರಿಗೆ ನಿವೇಶನಕ್ಕಾಗಿ ಜಮೀನು ಗುರುತಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಪತ್ರಕರ್ತರಿಗೆ ಆಪತ್ಕಾಲದಲ್ಲಿ ನೆರವಾಗುವ ಉದ್ದೇಶದಿಂದ ಕ್ಷೇಮಾಭಿವೃದ್ದಿ ನಿಧಿ ಸ್ಥಾಪಿಸಿ ಅದಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ಬಯಸಿದಾಗ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ೨೫ ಲಕ್ಷ ರೂ ಕೊಡಿಸಿದ್ದು, ಈಗ ೩೦ ಲಕ್ಷ ಇಡುಗಂಟು ಆಗಿದೆ ಎಂದರು.

ನಿಧಿಗೆ ನೆರವು ಒದಗಿಸಲು ಕಾರಣರಾದ ಪ್ರಭಾಕರ್, ಮುಖ್ಯಮಂತ್ರಿಗಳು ಹಾಗೂ ಚೆಕ್ ಶೀಘ್ರ ನಮ್ಮ ಕೈಸೇರಲು ಸಹಕರಿಸಿದ ಅಧಿಕಾರಿ ಕಾವೇರಿ ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

ಕೋಲಾರ ಪತ್ರಿಕಾ ರಂಗ ತನ್ನದೇಆದ ಹೋರಾಟದ ಹಾದಿಯಲ್ಲಿ ಸಾಗಿ ಬಂದಿದೆ, ಶಾಶ್ವತ ನೀರಾವರಿ ತರುವ ಪ್ರಯತ್ನ ನಮ್ಮ ರಾಜಕಾರಣಿಗಳ ಇಚ್ಚಾಶಕ್ತಿ ಕೊರತೆಯಿಂದ ನೆನೆಗುದಿಗೆ ಬಿದ್ದಿದೆ ಎಂದ ಅವರು, ಜಿಲ್ಲೆಗೆ ನೀರುವ ಬರುವ ನಿರೀಕ್ಷೆ ಮೂಡಿಸಿದ್ದೇ ಕೋಲಾರ ಜಿಲ್ಲಾ ಪತ್ರಕರ್ತರ ಸಂಘ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ತಂದೆತಾಯಿಯ ಕಣ್ಣಲ್ಲಿ ನೀರು ಹಾಕಿಸಬೇಡಿ ಆನಂದ ಭಾಷ್ಪ ಹಾಕಿಸಿ ಎಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಪತ್ರಕರ್ತರ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ವಂಶೋಧಯಾ ಆಸ್ಪತ್ರೆ ವತಿಯಿಂದ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣೆಯೂ ನಡೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ನಿಖಿಲ್, ರಾಜ್ಯ ಪತ್ರಕರ್ತರ ಸಂಘದ ಖಜಾಂಚಿ ವಾಸುದೇವಹೊಳ್ಳ, ರಾಜ್ಯಕಾರ್ಯಕಾರಿ ಸದಸ್ಯರಾದ ಕೆ.ಎಸ್.ಗಣೇಶ್, ವಿ.ಮುನಿರಾಜು, ಹಿರಿಯ ಪತ್ರಕರ್ತರಾದ ಎಂ.ಜಿ.ಪ್ರಭಾಕರ್, ಸಿ.ಎಂ.ಮುನಿಯಪ್ಪ, ಮಹಮದ್ ಯೂನುಸ್, ಪಾ.ಶ್ರೀ ಅನಂತರಾಮು ಭಾಗವಹಿಸಿದ್ದರು.

ಚಿತ್ರ ; ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿ0ದ ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿರುವ ಪತ್ರಕರ್ತರನ್ನು ಸನ್ಮಾನಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande