ಗದಗ, 01 ಜುಲೈ (ಹಿ.ಸ.) :
ಆ್ಯಂಕರ್ : ಪ್ರಯಾಣಿಕರ ಆರೋಗ್ಯ ರಕ್ಷಣೆಗಾಗಿ ಬಸ್ ನಿಲ್ದಾಣ ಆವರಣದ ಸ್ವಚ್ಛತೆಗೆ ಪ್ರಥಮಾದ್ಯತೆ ವಹಿಸಬೇಕು ಎಂದು ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ ಸೂಚಿಸಿದರು.
ಗದಗ ಜಿಲ್ಲಾ ಗ್ಯಾರಂಟಿ ಅನುಷ್ಟಾನ ಸಮಿತಿಯಿಂದ ಸೋಮವಾರ ಶಿರಹಟ್ಟಿ ನಗರದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ವ್ಯವಸ್ಥೆಯ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಜುಲೈ 20 ರಂದು ಪುನ: ಬಸ್ ನಿಲ್ದಾಣದ ಸ್ವಚ್ಛತೆಯ ಪರಿಶೀಲನೆಗಾಗಿ ಆಗಮಿಸುವುದಾಗಿ ತಿಳಿಸಿದ ಅವರು ಈಗ ನೀಡಿರುವ ಎಲ್ಲ ಸೂಚನೆಗಳು ಕಾರ್ಯರೂಪಕ್ಕೆ ಬರುವಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಸಂಬಂಧಿತ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಆಗ್ರಹಿಸಲಾಗುವುದು. ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಕೂರಲು ಉತ್ತಮ ಆಸನಗಳ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಅಲ್ಲದೇ ಪ್ಲಾಸ್ಟಿಕ್ ಮುಕ್ತ ನಿಲ್ದಾಣ ಆಗಬೇಕು. ಶಾಲೆಯ ವಿದ್ಯಾರ್ಥಿಗಳಿಗೆ ಗ್ರಾಮಗಳಿಂದ ಶಿರಹಟ್ಟಿಗೆ ಬಂದು ಹೋಗಲು ಸರಿಯಾದ ಬಸ್ಸಿನ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಅಧಿಕಾರಿಗಳು ಕ್ರಮ ವಹಿಸುವಂತೆ ಬಿ.ಬಿ.ಅಸೂಟಿ ನಿರ್ದೇಶನ ನೀಡಿದರು.
ಶೌಚಾಲಯ ವೀಕ್ಷಣೆ : ನಿಲ್ದಾಣದ ಆವರಣದಲ್ಲಿರುವ ಶೌಚಾಲಯದ ಪರಿಶೀಲನೆ ನಡೆಸಿ ಅಲ್ಲಿಯೂ ಸಹ ಸ್ವಚ್ಛತೆ ಅಗತ್ಯವಾಗಿದೆ. ವಿಕಲಚೇತನರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಬೇಕು ಅಲ್ಲದೇ ಸಾರ್ವಜನಿಕರಿಂದ ನಿಗದಿತ ಶುಲ್ಕ ಪಡೆದು ಸಾರ್ವಜನಿಕರಿಗೆ ಶೌಚಾಲಯ ಬಳಕೆಗೆ ದೊರೆಯಬೇಕು. ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವ ಕುರಿತು ದೂರುಗಳು ಬಂದಿದ್ದು ಪುನ: ದೂರುಗಳು ಬರದಂತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ನಿಗಾ ವಹಿಸಲು ಸೂಚಿಸಿದರು.
ವಿಶ್ರಾಂತಿ ಕೊಠಡಿ : ನಿಲ್ದಾಣದ ಆವರಣದಲ್ಲಿರುವ ಶಿಶು ಆರೈಕೆ ವಿಶ್ರಾಂತಿ ಕೊಠಡಿಗೆ ಭೇಟಿ ನೀಡಿದ ಅವರು ವಿಶ್ರಾಂತಿ ಕೊಠಡಿಯಲ್ಲಿ ಶುದ್ಧ ಗಾಳಿ, ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು ಹಾಗೂ ಪ್ರತಿನಿತ್ಯ ವಿಶ್ರಾಂತಿ ಕೊಠಡಿಗೆ ಸಾರ್ವಜನಿಕರು ಆಗಮಿಸುವಂತೆ ಶುಚಿಯಾಗಿಟ್ಟುಕೊಳ್ಳಲು ಸಾರಿಗೆ ಸಂಸ್ಥೆಯ ಅಧಿಕಾರಿ.ಡಿ.ಸಿ ದೇವರಾಜ ಅವರಿಗೆ ಜಿಲ್ಲಾಧ್ಯಕ್ಷ ಬಿ.ಬಿ.ಅಸೂಟಿ ನಿರ್ದೇಶನ ನೀಡಿದರು.
ಶಿರಹಟ್ಟಿ ತಾಲೂಕ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ವೀರಯ್ಯ ಮಠಪತಿ ಅವರು ಮಾತನಾಡಿ ಪ್ರತಿ ಪಂಚಾಯತಿ ಮಟ್ಟದಲ್ಲಿ ಗ್ಯಾರಂಟಿ ಸಭೆಗಳನ್ನು ಮಾಡುವ ಮುಖಾಂತರ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಪ್ರಚಾರ ಮಾಡಬೇಕೆಂದರು.
ಗದಗ ಜಿಲ್ಲಾ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಜಿಲ್ಲಾ ಸಮಿತಿಯ ಸದಸ್ಯರಾದ ಅಶೋಕ ಮಂದಾಲಿ ಅವರು ಮಾತನಾಡಿ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಾದ ಪಂಚ ಗ್ಯಾರಂಟಿ ಯೋಜನೆಗಳು ದುರ್ಬಲರನ್ನು ಆರ್ಥಿಕ ಸಬಲರನ್ನಾಗಿ ಮಾಡುತ್ತಿವೆ ಎಂದರು.
ಗ್ಯಾರಂಟಿ ಸಂವಾದ : ನಿಲ್ದಾಣದ ಆವರಣದಲ್ಲಿನ ಮಹಿಳೆಯರೊಂದಿಗೆ ಹಾಗೂ ಗ್ಯಾರಂಟಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಸಮಿತಿ ಸದಸ್ಯರು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಹಾಗೂ ಯಶಸ್ಸಿನ ಬಗ್ಗೆ ಅಭಿಪ್ರಾಯಗಳನ್ನು ಆಲಿಸಿದರು.
ಶಕ್ತಿ ಯೋಜನೆ ಮಹಿಳೆಯರ ಸಬಲತೆಗೆ ಶಕ್ತಿಯಾಗಿ ನಿಂತಿರುವುದು ಅಕ್ಷರಶ: ಸತ್ಯ. ಅದರಂತೆ ಸುಸ್ಥಿತ ಬದುಕಿಗಾಗಿ ಗೃಹಲಕ್ಷಿ ಯೋಜನೆ, ಹಸಿವು ಮುಕ್ತ ಕರ್ನಾಟಕಕ್ಕೆ ಅನ್ನಭಾಗ್ಯ ಹಾಗೂ ಬಡವರ ಆಶಾಕಿರಣ ಗೃಹ ಜ್ಯೋತಿ, ನಿರುದ್ಯೋಗ ನಿವಾರಣೆಗೆ ಯುವನಿಧಿ ಸಹಕಾರಿಯಾಗಿವೆ ಎಂದು ಫಲಾನುಭವಿಗಳು ತಮ್ಮ ಮನದಾಳದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ , ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್. ಸಚಿವರಾದ ಎಚ್.ಕೆ.ಪಾಟೀಲ ಸೇರಿದಂತೆ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕ ಗ್ಯಾರಂಟಿ ಸಮಿತಿಯ ಸದಸ್ಯರಾದ ಶಿವನಗೌಡ ಪಾಟೀಲ. ಮಲ್ಲಪ್ಪ ಹುಯಲಗೋಳ. ಬುಡೆನಸಾಬ್ ಮಕಾಂದರ. ದೇವಪ್ಪ ಲಮಾಣಿ. ವಿಶಾಲ ಹೊನ್ನಣ್ಣವರ. ಸುರೇಶರಡ್ಡಿ ಕೆಂಚರೆಡ್ಡಿ.ಶಕುಂತಲಾ ವಿಭೂತಿಮಠ .ಹೊನ್ನೇಶ್ ಪೋಟಿ. ಮಹಾವೀರ್ ಮಂಟಗನ್ನಿ. ಅಂದನಗೌಡ ಪಾಟೀಲ್. ಸೋಮನಗೌಡ ಮರಿಗೌಡ .ಪ್ರಮುಖರಾದ ಹೂಮಾಯನ್ ಮಾಗಡಿ. ಪವನ್ ಇಳಿಗೇರ. ಹಸನ್ ಸಾಬ್ ನದಾಫ್.ಸಂತೋಷ್ ಕುರಿ. ಸಂಗಪ್ಪ ಕೆರಕಲಮಟ್ಟಿ ಚಾಂದಸಾಬ ಕೊಟ್ಟುರ ಮತ್ತಿತರರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / Lalita MP