ಕೊಪ್ಪಳ, 01 ಜುಲೈ (ಹಿ.ಸ.) :
ಆ್ಯಂಕರ್ : ಕೊಪ್ಪಳ ನಗರಸಭೆ ವತಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 (ನಗರ) ಅಡಿ ಸ್ವಂತ ಮನೆ ನಿರ್ಮಿಸಿಕೊಳ್ಳಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್ ಹಾಗೂ ಪೌರಾಯುಕ್ತರಾದ ಗಣಪತಿ ಪಾಟೀಲ್ ಅವರು ಜಂಟಿ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 (ನಗರ) ಅಡಿ ಬರುವ ಫಲಾನುಭವಿ ನೇತೃತ್ವದ ನಿರ್ಮಾಣ ವಸತಿ ಯೋಜನೆ (ಬಿ.ಎಲ್.ಸಿ), ಪಾಲುದಾರಿಕೆಯಲ್ಲಿ ಕೈಗೆಟಕುವ ಬಹುಮಹಡಿ ವಸತಿ ಯೋಜನೆ (ಎ.ಎಚ್.ಪಿ), ಕೈಗೆಟಕುವ ಬಾಡಿಗೆ ವಸತಿ ಯೋಜನೆ(ಎ.ಆರ್.ಎಚ್), ಬಡ್ಡಿ ಸಹಾಯಧನ (ಸಬ್ಸಿಡಿ) ವಸತಿ ಯೋಜನೆ (ಐ.ಎಸ್.ಎಸ್) ಈ ನಾಲ್ಕು ಯೋಜನೆಗಳನ್ನು ಜಾರಿಗೊಳಿಸಿದ್ದು, ಕೊಪ್ಪಳ ನಗರಸಭೆ ವ್ಯಾಪ್ತಿಯ ಅರ್ಹ ಹಾಗೂ ಆಸಕ್ತಿ ಇರುವವರು ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಅರ್ಜಿ ಸಲ್ಲಿಸಲು ಅರ್ಜಿದಾರರು ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳಿಂದ ಅಥವಾ ಇಲಾಖೆಗಳಿಂದ ಯಾವುದೇ ಸಹಾಯಧನ ಪಡೆದು ಮನೆ ನಿರ್ಮಿಸಿಕೊಂಡಿರಬಾರದು. ವಿವಾಹಿತ ಮಹಿಳೆ, ಏಕ ಮಹಿಳಾ ಒಡೆತನ, ಗೃಹಿಣಿ, ಪುರುಷರಾಗಿದ್ದಲ್ಲಿ ಮಾಜಿ ಯೋಧರು, ವಿಧುರರು, ಅಂಗವಿಕಲರು, ವಿಚ್ಛೇದಿತರು, ಅರ್ಜಿಯನ್ನು ಸಲ್ಲಿಸಬಹುದು. ನಿವೇಶನ ಅಥವಾ ಕಚ್ಚಾ ಮನೆಯ ಮೂಲ ದಾಖಲಾತಿಗಳ ಪರಿಶೀಲನೆ ವೇಳೆಯಲ್ಲಿ ಹಾಜರಪಡಿಸಬೇಕು ಹಾಗೂ ಜಿ.ಪಿ.ಎಸ್. ಆಧಾರಿತ ಚಿತ್ರ ನೀಡುವುದು, ನಿವೇಶನ ಅಥವಾ ಕಚ್ಚಾ ಮನೆಯ ಬಗ್ಗೆ ಯಾವುದೇ ಕೌಟುಂಬಿಕ ತಕರಾರು, ಕೋರ್ಟಕೇಸ್ ಇತ್ಯಾದಿ ವ್ಯಾಜ್ಯ ಇರಬಾರದು ಮತ್ತು ಮನೆ ನಿರ್ಮಾಣಕ್ಕೆ ನಿಗದಿಪಡಿಸಿದ ನಿವೇಶನ ಅಥವಾ ಕಚ್ಚಾ ಮನೆ ಸ್ಥಳವನ್ನು ಯಾವುದೇ ಕಾರಣಕ್ಕೂ ಬದಲಾಯಿಸುವಂತಿಲ್ಲ.
ಅರ್ಜಿಯನ್ನು ಮಹಿಳಾ ಫಲಾನುಭವಿ ಹೆಸರಿನಲ್ಲಿಯೇ ಅಗತ್ಯ ದಾಖಲೆಗಳೊಂದಿಗೆ ಜುಲೈ 20 ರೊಳಗೆ ಆನ್‍ಲೈನ್ ಸೇವಾ ಕೇಂದ್ರದಲ್ಲಿ ತಾವೇ ಖುದ್ದಾಗಿ ವೆಬ್‍ಸೈಟ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರ ಆಧಾರಕಾರ್ಡ ಪ್ರತಿ, ಕುಟುಂಬ ಸದಸ್ಯರ ಆಧಾರ ಕಾರ್ಡ, ಅರ್ಜಿದಾರರ ಇತ್ತೀಚಿನ 2 ಭಾವಚಿತ್ರ ಸಲ್ಲಿಸಬೇಕು.
ನಿವೇಶನ/ಕಚ್ಚಾ ಮನೆಗೆ ಸಂಬಂಧಿಸಿದ ಇತ್ತೀಚಿನ ಚಾಲ್ತಿ ಉತಾರ ಪ್ರತಿ ಹಾಗೂ ಜಿ.ಪಿ.ಎಸ್. ಆಧಾರಿತ ಚಿತ್ರ ನೀಡಬೇಕು. ಚಾಲ್ತಿಯಲ್ಲಿರುವ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಮತ್ತು ಪಡಿತರ ಚೀಟಿ ಹಾಗೂ ಮತದಾನ ಚೀಟಿ, ಅರ್ಜಿದಾರರ ರಾಷ್ಟ್ರೀಕೃತ ಬ್ಯಾಂಕ್ ಖಾತೆಯ ಪಾಸ್ ಬುಕ್ ಪ್ರತಿ (ರಾಷ್ಟ್ರೀಕೃತ ಬ್ಯಾಂಕ್), ಅರ್ಜಿದಾರರ ಹೆಸರಿನಲ್ಲಿ ಅಥವಾ (ಪತಿ/ಪತ್ನಿ) ಅವಿವಾಹಿತ ಮಗ/ಮಗಳು ಹೆಸರಲ್ಲಿ ಸ್ವಂತ ಮನೆ ಹೊಂದಿಲ್ಲ ಎಂಬುದರ ಬಗ್ಗೆ ರೂ. 100 ಛಾಪಾ ಪತ್ರದಲ್ಲಿ ಸ್ವಯಂ ದೃಢೀಕೃತ ಪತ್ರ ನೀಡಬೇಕು. ಆಸ್ತಿ ಸದಸ್ಯರ ಹೆಸರಿನಲ್ಲಿದ್ದಲ್ಲಿ ಹಾಗೂ ಜಂಟಿ ಖಾತೆಯಲ್ಲಿದ್ದಲ್ಲಿ ರೂ. 100 ಛಾಪಾ ಪತ್ರದಲ್ಲಿ ತಂಟೆ-ವ-ತಕರಾರು ಇಲ್ಲದಿರುವ ಬಗ್ಗೆ ಒಪ್ಪಿಗೆ ಪತ್ರವನ್ನು ಸಲ್ಲಿಸಬೇಕು.
ಕಡ್ಡಾಯವಾಗಿ ಅರ್ಜಿದಾರರು ತಮ್ಮ ಮೊಬೈಲ್ ಸಂಖ್ಯೆ ಹಾಗೂ ಆಧಾರ ನಂಬರ್ ಬ್ಯಾಂಕ್ ಖಾತೆಗೆ ಜೋಡಣೆಯಾಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ನಿಗದಿಪಡಿಸಿರುವ ದಾಖಲೆ ಸಲ್ಲಿಸದ ಹಾಗೂ ಅಪೂರ್ಣ ಅರ್ಜಿಯನ್ನು ತಿರಸ್ಕರಿಸಲಾಗುವುದು. ಅದಕ್ಕೆ ಅವಕಾಶ ಮಾಡಿಕೊಡದೇ ಸರಿಯಾಗಿ ಅರ್ಜಿ ಹಾಗೂ ಮಾಹಿತಿ ದಾಖಲಾತಿಯನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ನಗರಸಭೆ ಕಾರ್ಯಾಲಯದ ಆಶ್ರಯ ವಿಭಾಗವನ್ನು ಸಂಪರ್ಕಿಸುವಂತೆ ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್ ಹಾಗೂ ಪೌರಾಯುಕ್ತರಾದ ಗಣಪತಿ ಪಾಟೀಲ್ ಅವರು ಜಂಟಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್